ಚಿನ್ನ ಕಳ್ಳಸಾಗಣೆ ಪ್ರಕರಣ: ನಟಿ ರನ್ಯಾ ರಾವ್ ಜಾಮೀನು ತಿರಸ್ಕರಿಸಿದ ಹೈಕೋರ್ಟ್
ಬೆಂಗಳೂರು ಏಪ್ರಿಲ್ 26: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದ ನಟಿ ರನ್ಯಾ ರಾವ್‌ಗೆ ಮತ್ತೊಮ್ಮೆ ಹಿನ್ನಡೆಯಾಗಿದೆ. ಕರ್ನಾಟಕ ಹೈಕೋರ್ಟ್ ಇಂದು ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಅಲ್ಲದೆ ಈ ಪ್ರಕರಣದ ಎರಡನೇ ಆರೋಪಿ ತರುಣ್ ರಾಜು ಅವರಿಗೂ ಜಾಮೀನು ನಿರಾಕರಿಸಲಾಗಿದೆ. ನ್ಯಾಯಮೂರ್ತಿ ಸವಣೂರು ವಿಶ್ವಜಿತ್ ಶೆಟ್ಟಿ ನೇತೃತ್ವದ ಪೀಠ ಈ ಆದೇಶ ಹೊರಡಿಸಿದೆ.
ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ರನ್ಯಾರಾವ್ ಪರಪ್ಪನ ಅಗ್ರಹಾರಕ್ಕೆ ಹೋಗಿ 50 ದಿನಗಳು ಆಗಿದೆ. ಇಂದು ಆರೋಪಿ ರನ್ಯಾರಾವ್ ಪರ ಹಿರಿಯ ವಕೀಲ ಸಂದೇಶ್ ಚೌಟ ವಾದ ಮಾಡಿದ್ದರು. ಜಾಮೀನು ನೀಡಲು ಮನವಿ ಮಾಡಿದರು. ಆದರೆ ಹೈಕೋರ್ಟ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಹೀಗಾಗಿ ರನ್ಯಾಗೆ ಮತ್ತೊಮ್ಮೆ ಹಿನ್ನಡೆಯಾಗಿದೆ.

ಹೌದು ಈ ಪ್ರಕರಣದಲ್ಲಿ ನ್ಯಾಯಾಲಯ ರನ್ಯಾ ರಾವ್ ಅವರ ಜಾಮೀನು ಅರ್ಜಿಯನ್ನು ಎರಡು ಬಾರಿ ತಿರಸ್ಕರಿಸಿದೆ. ರನ್ಯಾ ರಾವ್ ವಿರುದ್ಧ ವಿದೇಶಿ ವಿನಿಮಯ ಸಂರಕ್ಷಣೆ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆ ಕಾಯ್ದೆ, 1974 (COFEPOSA)ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದರ ಅಡಿಯಲ್ಲಿ ಕೇಂದ್ರ ಅಥವಾ ರಾಜ್ಯ ಸರ್ಕಾರ ಒಬ್ಬ ವ್ಯಕ್ತಿಯನ್ನು ಗರಿಷ್ಠ 1 ವರ್ಷದವರೆಗೆ ಬಂಧನದಲ್ಲಿಡಬಹುದು.
ಹೀಗಾಗಿ ಜಾಮೀನು ಸಿಗೋ ನಿರೀಕ್ಷೆಯಲ್ಲಿದ್ದ ಆರೋಪಿ ರನ್ಯಾ ರಾವ್ ಅವರಿಗೆ ಸದ್ಯ ಬಿಗ್ ಶಾಕ್ ಎದುರಾಗಿದೆ. ಈಗ ರನ್ಯಾರಾವ್ ವಿರುದ್ಧ ಕಾಫಿಪೋಸಾ ಕಾಯ್ದೆ ಜಾರಿಯಿಂದಾಗಿ ಇನ್ನಷ್ಟು ಸಂಕಷ್ಟ ಉಂಟಾಗಿದೆ. ಹಣಕಾಸು ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ನೋಡಲ್ ಏಜೆನ್ಸಿಯಾದ ಕೇಂದ್ರ ಆರ್ಥಿಕ ಗುಪ್ತಚರ ಬ್ಯೂರೋ (CEIB), ನಟಿ ಮತ್ತು ಇತರ ಆರೋಪಿಗಳ ವಿರುದ್ಧ COFEPOSA ಕಾಯ್ದೆಯನ್ನು ಅನ್ವಯಿಸಿದೆ. ಪ್ರಕರಣದಲ್ಲಿ ರನ್ಯಾ ರಾವ್ ಮತ್ತು ಇತರರು ಜಾಮೀನು ಪಡೆಯಲು ಪದೇ ಪದೇ ಪ್ರಯತ್ನಿಸುತ್ತಿರುವುದರಿಂದ ಕೇಂದ್ರ ಸಂಸ್ಥೆಗಳು ಈ ಕ್ರಮ ಕೈಗೊಂಡಿವೆ ಎಂದು ಮೂಲಗಳು ತಿಳಿಸಿವೆ. ಇತರ ಆರೋಪಿಗಳಾದ ತರುಣ್ ರಾಜು ಮತ್ತು ಸಾಹಿಲ್ ಸಕಾರಿಯಾ ಜೈನ್ ವಿರುದ್ಧವೂ ಕಾಫಿಪೋಸಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಹಿರಿಯ ಐಪಿಎಸ್ ಅಧಿಕಾರಿ ರಾಮಚಂದ್ರ ರಾವ್ ಅವರ ಮಲಮಗಳು ರನ್ಯಾ ರಾವ್ ಅವರನ್ನು ಮಾರ್ಚ್ 3 ರಂದು 14.2 ಕೆಜಿ ಚಿನ್ನವನ್ನು ಕಳ್ಳಸಾಗಣೆ ಮಾಡಿದ್ದಕ್ಕಾಗಿ ಬಂಧಿಸಲಾಯಿತು. ಚಿನ್ನದ ಮೌಲ್ಯ 12.56 ಕೋಟಿ ರೂ.ಗಳಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ.
ಪ್ರಕರಣದ ರನ್ಯಾ ರಾವ್ ಮತ್ತು ಇತರ ಇಬ್ಬರು ಆರೋಪಿಗಳು ಪ್ರಸ್ತುತ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿದ್ದಾರೆ. ಈ ಪ್ರಕರಣವನ್ನು ಡಿಆರ್‌ಐ, ಜಾರಿ ನಿರ್ದೇಶನಾಲಯ (ಇಡಿ) ಮತ್ತು ಕೇಂದ್ರ ತನಿಖಾ ದಳ (ಸಿಬಿಐ) ತನಿಖೆ ನಡೆಸುತ್ತಿವೆ. ಡಿಜಿಪಿ ರಾಮಚಂದ್ರ ರಾವ್ ಅವರ ಪಾತ್ರದ ತನಿಖೆಗಾಗಿ ರಾಜ್ಯ ಸರ್ಕಾರ ಹಿರಿಯ ಐಎಎಸ್ ಅಧಿಕಾರಿಯ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿದೆ.
ಚಿನ್ನ ಕಳ್ಳಸಾಗಣೆ ಪ್ರಕರಣದ ಬಗ್ಗೆ ಡಿಆರ್‌ಐ ನಡೆಸಿದ ತನಿಖೆಯಲ್ಲಿ ಪ್ರಕರಣದ ಮೂರನೇ ಆರೋಪಿ ಜೈನ್ ಜೊತೆ ನಟಿ ಹವಾಲಾ ವಹಿವಾಟಿನಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿತ್ತು. ಜೈನ್ ಸಹಾಯದಿಂದ ರನ್ಯಾ ರಾವ್ 49.6 ಕೆಜಿ ಚಿನ್ನವನ್ನು ಕಳ್ಳಸಾಗಣೆ ಮಾಡಿ 38.4 ಕೋಟಿ ರೂ. ಮೌಲ್ಯದ ಹವಾಲಾ ಹಣವನ್ನು ದುಬೈಗೆ ವರ್ಗಾಯಿಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.












Click it and Unblock the Notifications