ಸರ್ಕಾರಿ ಕಾಲೇಜುಗಳಲ್ಲಿ ಜಾಗತಿಕ ಗುಣಮಟ್ಟದ ಶಿಕ್ಷಣ: ಅಶ್ವಥ್ ನಾರಾಯಣ
ಬೆಂಗಳೂರು, ಜನವರಿ 13: ರಾಜ್ಯದ ಉನ್ನತ ಶಿಕ್ಷಣ ವಲಯದಲ್ಲಿ ಕ್ರಾಂತಿಕಾರಕ ಸುಧಾರಣೆ ಆಗುತ್ತಿದೆ. ಇದರ ಫಲವಾಗಿ ಕರ್ನಾಟಕ ರಾಜ್ಯದ ಸರ್ಕಾರ ಕಾಲೇಜುಗಳಲ್ಲಿ ಇಂದು ಕೈಗೆಟುಕುವ ವೆಚ್ಚದಲ್ಲಿ ಜಾಗತಿಕ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವಥ್ ನಾರಾಯಣ ಹೇಳಿದ್ದಾರೆ.
ಬೆಂಗಳೂರಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ನಡೆದ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಇಡೀ ದೇಶವು ಎಲ್ಲರನ್ನೂ ಒಳಗೊಂಡು ವಿಕಾಸವಾಗಬೇಕು ಎನ್ನುವ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿಯವರು ಮೂರನೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದ್ದಾರೆ. ಇದರ ಅನುಷ್ಠಾನದಲ್ಲಿ ರಾಜ್ಯವು ಪ್ರಥಮ ಸ್ಥಾನದಲ್ಲಿದೆ ಎಂದರು.
ಕಲಿಕೆಯು ಯಾವಾಗಲೂ ಪ್ರಸ್ತುತವಾಗಿರಬೇಕು. ಇದನ್ನು ಪರಿಗಣಿಸಿ ಪಠ್ಯ ಕ್ರಮಕ್ಕೆ ಸಮಕಾಲೀನ ಸ್ಪರ್ಶ ಕೊಡಲಾಗಿದೆ. ಜತೆಗೆ ಪ್ರಾಥಮಿಕ ಶಿಕ್ಷಣ ಹಂತದಲ್ಲಿ ಕೂಡ ಎನ್ಇಪಿ ಜಾರಿಗೆ ಬರುತ್ತಿದೆ. ಪದವಿಪೂರ್ವ, ಪದವಿ, ಐಟಿಐ, ಪಾಲಿಟೆಕ್ನಿಕ್, ಎಂಜಿನಿಯರಿಂಗ್, ಜಿಟಿಟಿಸಿ ಶಿಕ್ಷಣ ಕ್ರಮಗಳಲ್ಲಿ ವ್ಯಾಪಕ ಸುಧಾರಣೆ ತರಲಾಗಿದೆ. ಕಲಿಕೆಯ ಜತೆಯಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ರಾಜ್ಯದಲ್ಲಿ ಶೈಕ್ಷಣಿಕ ಪರಿಸರ ಅತ್ತುತ್ತಮವಾಗಿದೆ. ಸರ್ಕಾರವು ಯುವಜನರಿಗೆ ಕೌಶಳ್ಯಗಳನ್ನು ಕಲಿಸುವ ಮೂಲಕ ಎಲ್ಲರನ್ನೂ ಉದ್ಯೋಗಕ್ಕೆ ಅರ್ಹರನ್ನಾಗಿ ಮಾಡುತ್ತಿದೆ. ಒಟ್ಟಿನಲ್ಲಿ ನುರಿತ ಮಾನವ ಸಂಪನ್ಮೂಲ ಮತ್ತು ಉತ್ತಮ ಅವಕಾಶ ಎರಡೂ ನಮ್ಮಲ್ಲಿ ಇದೆ ಎಂದು ಅವರು ತಿಳಿಸಿದರು.
ಉತ್ಪನ್ನಗಳಿಗೆ ಅಗತ್ಯ ಮಾರುಕಟ್ಟೆ ವ್ಯವಸ್ಥೆ
ಮಹಿಳೆಯರು ಸಿದ್ದಪಡಿಸುವ ಉತ್ಪನ್ನಗಳಿಗೆ ರಾಷ್ಟ್ರೀಯ ಗ್ರಾಮೀಣ ಹಾಗೂ ನಗರ ಜೀವನೋಪಾಯ ಯೋಜನೆಗಳ ವ್ಯಾಪ್ತಿಯಲ್ಲಿ ಮಾರುಕಟ್ಟೆ ಒದಗಿಸಲಾಗುವುದು. ಅಮೆಜಾನ್, ಫ್ಲಿಪ್ ಕಾರ್ಟ್ ನಂತಹ ಕಂಪೆನಿ ಮೂಲಕ ಅಗತ್ಯ ಮಾರುಕಟ್ಟೆ ಹಾಗೂ ಸೂಕ್ತ ಪ್ರಚಾರ ಒದಗಿಸಿ ಅವರನ್ನು ಸ್ವಾವಲಂಬಿ ಮಾಡಲಾಗುವುದು ಎಂದರು.

ಮಹಿಳೆಯರಲ್ಲೂ ಅಪಾರ ಮಂದಿ ಪ್ರತಿಭಾವಂತರಿದ್ದಾರೆ. ಅವರು ತಮ್ಮ ಪ್ರತಿಭೆಗಳನ್ನು ಸಮಾಜದ ಸಮಗ್ರ ಬೆಳವಣಿಗೆಗೆ ಬಳಸಿ ಕೊಳ್ಳಬೇಕು. ಎನ್ಆರ್ಎಲ್ಎಂ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮವಾಗಿ ಪ್ರತಿಶತ 60 ಮತ್ತು 40ರಷ್ಟು ಆರ್ಥಿಕ ಅನುದಾನ ನೀಡಲಿದ್ದೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಲಾವಿದ ಎಂ ಎಸ್ ನರಸಿಂಹಮೂರ್ತಿ, ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶ್ರೀರಾಮ್, ಪ್ರಿನ್ಸಿಪಾಲ್ ರತ್ನಾಕರ ಶೆಟ್ಟಿ, ಪ್ರೊ.ಲಕ್ಷ್ಮಿ ಮುಂತಾದವರು ಉಪಸ್ಥಿತರಿದ್ದರು.












Click it and Unblock the Notifications