ಡಿಜಿಟಲ್ ತಂತ್ರಜ್ಞಾನ : ಮೋದಿಹಾದಿಯಲ್ಲೇ ಸಿಎಂ ಸಿದ್ದು
ಬೆಂಗಳೂರು, ಡಿ.4 : ಪ್ರಧಾನಿ ನರೇಂದ್ರ ಮೋದಿ ಅವರಂತೆ ಡಿಜಿಟಲ್ ತಂತ್ರಜ್ಞಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊರೆ ಹೋಗಿದ್ದಾರೆ. 'ಮೊಬೈಲ್ ಒನ್' ಯೋಜನೆ ಉದ್ಘಾಟನಾ ಆಮಂತ್ರಣ ಪತ್ರಿಕೆಯಲ್ಲಿ ಸಿದ್ದರಾಮಯ್ಯ ಅವರ ಧ್ವನಿ ಮುದ್ರಿತ ಆಮಂತ್ರಣವಿದೆ.
'ನಾಡ ಬಾಂಧವರೇ, ನಾನು ನಿಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡುತ್ತಿದ್ದೇನೆ. ಕರ್ನಾಟಕ ಸರ್ಕಾರದ ಮೊಬೈಲ್ ಆಡಳಿತವನ್ನು ನಾಡಿಗೆ ಸಮರ್ಪಿಸಲಾಗುತ್ತಿದೆ ಎಂದು ಪ್ರಕಟಿಸಲು ಹರ್ಷಿಸುತ್ತೇನೆ. ಭಾರತದ ಘನತವೆತ್ತ ರಾಷ್ಟ್ರಪತಿಗಳು 'ಕರ್ನಾಟಕ ಮೊಬೈಲ್ ಒನ್' ಸೇವೆಯನ್ನು ಉದ್ಘಾಟಿಸಲು ಒಪ್ಪಿರುತ್ತಾರೆ' ಎಂದು ಆರಂಭವಾಗುವ ಆಹ್ವಾನ ಪತ್ರಿಕೆ ನಿಮ್ಮನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುತ್ತದೆ.

ಡಿ.8ರಂದು ಬೆಂಗಳೂರು ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ 'ಎಲೆಕ್ಟ್ರಾನಿಕ್ ಆಹ್ವಾನ ಪತ್ರ' ಮಾಡಿಸಲಾಗಿದೆ. ಇದರಲ್ಲಿ ಸಿಎಂ ಸ್ವತಃ ತಮ್ಮ ಮಾತಿನ ಮೂಲಕ ಜನರಿಗೆ ಆಮಂತ್ರಣ ನೀಡಲಿದ್ದಾರೆ. ಇಂಗ್ಲಿಷ್ ಹಾಗೂ ಕನ್ನಡ ಭಾಷೆಯಲ್ಲಿ ಆಹ್ವಾನ ಪತ್ರಿಕೆಯ ಪುಟ ತೆಗೆಯುತ್ತಿದ್ದಂತೆ ಮುದ್ರಿತ ಧ್ವನಿ ಕೇಳಿಸುತ್ತದೆ. [ಸಾಮಾಜಿಕ ಜಾಲತಾಣಕ್ಕೆ ಬಂದ್ರು ಸಿಎಂ ಸಿದ್ದರಾಮಯ್ಯ]
ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಅನುಷ್ಠಾನವಾಗುತ್ತಿರುವ 'ಮೊಬೈಲ್‌ಒನ್' ಯೋಜನೆಯಡಿ ಸರ್ಕಾರದ ವಿವಿಧ ಸೇವೆಗಳನ್ನು ನಿಮ್ಮ ಬೆರಳ ತುದಿಯಲ್ಲಿಯೇ ಪಡೆಯಬಹುದು. ಇದಕ್ಕಾಗಿ ನೀವು ಮೊದಲು 161ಕ್ಕೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ. ಆರಂಭದಲ್ಲಿ ಸರ್ಕಾರಿ, ಖಾಸಗಿ ವಲಯದ ನಾಲ್ಕು ಸಾವಿರಕ್ಕೂ ಹೆಚ್ಚಿನ ಸೇವೆಗಳು ಈ ಯೋಜನೆಯಲ್ಲಿ ಲಭ್ಯವಿರುತ್ತವೆ. [ಮೊಬೈಲ್ ಆಡಳಿತ ಜಾರಿಗೆ ಸಿದ್ದರಾಮಯ್ಯ ಸಜ್ಜು]
ಮೊಬೈಲ್ ಒನ್ ಕುರಿತು ಒಂದಷ್ಟು : ಸರ್ಕಾರ, ಖಾಸಗಿ ವಲಯದ ವಿವಿಧ ರೀತಿಯ ಸೇವೆಯನ್ನು ಮೊಬೈಲ್ ಮೂಲಕ ನೀಡುವ ಯೋಜನೆ ಇದಾಗಿದೆ. ಸರ್ಕಾರದ 37 ಇಲಾಖೆಗಳ 637 ಸೇವೆಗಳು ಮೊಬೈಲ್ ಮೂಲಕವೇ ಲಭ್ಯವಾಗಲಿವೆ. ಮನೆ ಅಥವಾ ನಿವೇಶನದ ಆಸ್ತಿ ತೆರಿಗೆಯಿಂದ ಹಿಡಿದು ವಿದ್ಯುತ್, ನೀರು ಮತ್ತು ದೂರವಾಣಿ ಬಿಲ್‌ಗಳನ್ನೂ ಮೊಬೈಲ್ ಮೂಲಕ ಪಾವತಿ ಮಾಡಬಹುದು, ಬಸ್ ಟಿಕೆಟ್ ಕಾಯ್ದಿರಿಸಬಹುದು.
3ಡಿಯಲ್ಲಿ ಭಾಷಣ ಪ್ರಸಾರ : 'ಕರ್ನಾಟಕ ಮೊಬೈಲ್ ಒನ್' ಸೇವೆ ಉದ್ಘಾಟನಾ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡುವ ಭಾಷಣವನ್ನು ಮೈಸೂರಿನಲ್ಲಿ 3ಡಿ ತಂತ್ರಜ್ಞಾನದ ಮೂಲಕ ಪ್ರಸಾರ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಅಂತಿಮ ತೀರ್ಮಾನ ಹೊರಬಿದ್ದಿಲ್ಲ.












Click it and Unblock the Notifications