ಆಪರೇಷನ್ ಕಮಲ: ಕಾಂಗ್ರೆಸ್‌ನ ಮಾಜಿ ಸಚಿವ ಅತೀ ಶೀಘ್ರದಲ್ಲಿ ಬಿಜೆಪಿ ಸೇರ್ಪಡೆ - ಕೊಟ್ಟ ಆಫರ್ ಏನು ಗೊತ್ತಾ?
ಬೆಂಗಳೂರು, ಫೆಬ್ರವರಿ19: ಲೋಕಸಭಾ ಚುನಾವಣೆಯನ್ನ ಪರಿಷ್ಠೆಯಾಗಿ ತೆಗೆದುಕೊಂಡಿರುವ ಆಡಳಿತರೂಢ ಕಾಂಗ್ರೆಸ್ ಹಾಗೂ ಬಿಜೆಪಿ ಸೂಕ್ತ ಅಭ್ಯರ್ಥಿಗಳ ಹುಡುಕಾಟದಲ್ಲಿದೆ. ಈಗಾಗಲೇ ಲೋಕಸಭಾ ಚುನಾವಣೆಗೆ ಮೈತ್ರಿಯಾಗಿರುವ ಬಿಜೆಪಿ ಹಾಗೂ ಜೆಡಿಎಸ್, ಲೋಕಸಭಾ ಗೆಲ್ಲುವ ಮೂಲಕ ಕಾಂಗ್ರೆಸ್ ಗೆ ಠಕ್ಕರ್ ಕೊಡಲು ತಂತ್ರಗಾರಿಕೆಯನ್ನ ನಡೆಸಿವೆ.
ಇನ್ನೂ ಲೋಕಸಭಾ ಚುನಾವಣೆ ಹೊತ್ತಲಿ ಗೆಲ್ಲುವ ಕುದುರೆಗೆ ಟಿಕೆಟ್ ನೀಡುವ ನಿಟ್ಟಿನಲ್ಲಿ ಬಿಜೆಪಿ ನಾಯಕರು ಹಲವು ಕಾಂಗ್ರೆಸ್ ನಾಯಕರಿಗೆ ಗಾಳ ಹಾಕಿದೆ. ಅಲ್ಲದೇ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ರಾಜ್ಯದ ಎಲ್ಲಾ 28 ಕ್ಷೇತ್ರಗಳನ್ನು ಗೆಲ್ಲೋದಾಗಿ ಹೇಳಿಕೊಂಡಿದೆ. ಈ ಹಿನ್ನೆಲೆ ಅಭ್ಯರ್ಥಿಗಳ ಆಯ್ಕೆಯನ್ನು ಅತ್ಯಂತ ಸೂಕ್ಷ್ಮವಾಗಿ ಎಲ್ಲಾ ಅಂಶಗಳನ್ನು ಗಮನಿಸಿ ನೀಡಲು ನಿರ್ಧರಿಸಿದೆ.

ಈಗಾಗಲೇ ಎರಡು ಬಾರಿ ಆಂತರಿಕ ಸಮೀಕ್ಷೆ ನಡೆಸಿರೋ ಬಿಜೆಪಿ ಕೆಲವು ಕ್ಷೇತ್ರಗಳಿಗೆ ಎರಡರಿಂದ ಮೂರು ಹೆಸರುಗಳನ್ನು ಅಂತಿಮಗೊಳಿಸಿದೆ. ಇನ್ನೂ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲೂ ಮತ್ತೊಂದು ಸಮೀಕ್ಷೆಯ ಬಳಿಕ ಹೆಸರನ್ನು ಅಂತಿಮ ಮಾಡೋ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಘಟಾನುಘಟಿ ನಾಯಕರೇ ಸೋತ ಬಳಿಕ, ಮುಂದಿನ ಲೋಕಸಭಾ ಚುನಾವಣೆಯಲ್ಲೂ ಸಹ ಗೆಲ್ಲುವ ಅಭ್ಯರ್ಥಿಯನ್ನ ಕಣಕ್ಕಿಳಿಸಲು ಬಿಜೆಪಿ ನಾಯಕರು ಮಾಸ್ಟರ್ ಪ್ಲಾನ್ ಹಾಕಿದ್ದಾರೆ.
ಚಿಕ್ಕಬಳ್ಳಾಪುರದ ಹಾಲಿ ಸಂಸದ ಬಿಎನ್ ಬಚ್ಚೇಗೌಡರು ಚುನಾವಣೆಯಿಂದ ಹಿಂದೆ ಸರಿದಿರುವ ಕಾರಣದಿಂದ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗುತ್ತಿದೆ. ಮಾಜಿ ಸಚಿವರಾದ ಡಾ.ಕೆ.ಸುಧಾಕರ್ ಮತ್ತು ಅಲೋಕ್ ವಿಶ್ವನಾಥ್ ಈ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.ಆದರೆ ಬಿಜೆಪಿ ಹೈಕಮಾಂಡ್ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಹೊಸ ಮುಖಕ್ಕೆ ಟಿಕೆಟ್ ನೀಡಲು ಪ್ಲಾನ್ ಮಾಡಿಕೊಂಡಿದೆ. ಈ ನಿಟ್ಟಿನಲ್ಲಿ ಡಿಸಿಎಂ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಕಾಂಗ್ರೆಸ್ ಮಾಜಿ ಶಾಸಕರೊಬ್ಬರನ್ನು ಬಿಜೆಪಿಯ ವರಿಷ್ಠರು ಸಂಪರ್ಕಿಸಿ ಎರಡು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ನಾಲ್ಕು ಬಾರಿ ಶಾಸಕರಾಗಿ, ಡೆಪ್ಯೂಟಿ ಸ್ಪೀಕರ್ ಆಗಿದ್ದ ಗೌರಿಬಿದನೂರು ಮಾಜಿ ಶಾಸಕ ಶಿವಶಂಕರ ರೆಡ್ಡಿ ಜೊತೆ ಬಿಜೆಪಿಯ ಉನ್ನತ ವರಿಷ್ಠರು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಬಿಜೆಪಿಗೆ ಬಂದರೆ ಚಿಕ್ಕಬಳ್ಳಾಪುರ ಟಿಕೆಟ್ ನೀಡುವ ನಿಟ್ಟಿನಲ್ಲಿ ಬಿಜೆಪಿ ನಾಯಕರು ಆಫರ್ ಸಹ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈಗಾಗಲೇ ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆಗಾಗಿ ಕಾಂಗ್ರೆಸ್ ನಿಂದ ಶಿವಶಂಕರ್ ರೆಡ್ಡಿ ಅವರು ಟಿಕೆಟ್ ಗಾಗಿ ಬೇಡಿಕೆ ಇಟ್ಟಿದ್ದಾರೆ. ಅಲ್ಲದೇ ಕಾಂಗ್ರೆಸ್ ನಿಂದ ರಕ್ಷಾ ರಾಮಯ್ಯ ಹಾಗೂ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಟಿಕೆಟ್‌ಗಾಗಿ ಭಾರೀ ಲಾಬಿ ನಡೆಸಿದ್ದಾರೆ. ಈ ಇಬ್ಬರು ನಾಯಕರ ನಡುವೆ ಶಿವಶಂಕರ್ ರೆಡ್ಡಿ ಅವರಿಗೆ ಟಿಕೆಟ್ ಸಿಗುವುದು ಅನುಮಾನ. ಅಲ್ಲದೇ ಕಾಂಗ್ರೆಸ್ ನಲ್ಲಿ ಚುನಾವಣೆ ಬಳಿಕ ಗೌರಿಬಿದನೂರಿನಲ್ಲಿ ಶಿವಶಂಕರ್ ರೆಡ್ಡಿ ಅವರನ್ನು ಸೈಡಲೈನ್ ಮಾಡಲಾಗಿದೆ ಎನ್ನಲಾಗಿದೆ. ಇತ್ತ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದರೂ ಕ್ಷೇತ್ರದಲ್ಲಿ ಶಿವಶಂಕರ್ ರೆಡ್ಡಿ ಅವರಿಗೆ ಮನ್ನಣೆ ಇಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಹೀಗಾಗಿ ಸ್ವಪಕ್ಷದ ನಾಯಕರ ವಿರುದ್ಧ ಶಿವಶಂಕರ್ ರೆಡ್ಡಿ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.












Click it and Unblock the Notifications