ಗೌರಿ ಲಂಕೇಶ್ ಹತ್ಯೆ : ಉಪ್ಪಿನಂಗಡಿ ಮೂಲದ ವ್ಯಕ್ತ ವಿಚಾರಣೆ
ಬೆಂಗಳೂರು, ಜುಲೈ 30 : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಉಪ್ಪಿನಂಗಡಿ ಮೂಲದ ವ್ಯಕ್ತಿಯ ವಿಚಾರಣೆ ನಡೆಸಿದೆ. ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 10ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದೆ.
ಉಪ್ಪಿನಂಗಡಿ ಸಮೀಪದ ಕೊಕ್ಕಡ ಮೂಲದ ಜಯರಾಮ ಎಂಬುವವರನ್ನು ಎಸ್‌ಐಟಿ ವಿಚಾರಣೆ ನಡೆಸಿದ್ದು, ನಂತರ ಬಿಡುಗಡೆ ಮಾಡಿದೆ. ಜಯರಾಮ ಅವರು ಹಲವಾರು ವರ್ಷಗಳಿಂದ ಸನಾತನ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣ ಆರೋಪಿಗಳ ಜೊತೆಗೆ ಸಂಪರ್ಕ ಹೊಂದಿದ್ದರು ಎಂಬ ಆರೋಪದ ಮೇಲೆ ವಿಚಾರಣೆ ನಡೆಸಲಾಗಿದೆ. ವಿಚಾರಣೆ ಬಳಿಕ ಷರತ್ತಿನ ಮೇಲೆ ಅವರನ್ನು ಬಿಡುಗಡೆ ಮಾಡಲಾಗಿದೆ.

2017ರ ಸೆಪ್ಟೆಂಬರ್ 5ರಂದು ರಾಜರಾಜೇಶ್ವರಿ ನಗರದ ನಿವಾಸದ ಮುಂದೆ ಗೌರಿ ಲಂಕೇಶ್ ಅವರನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಸರ್ಕಾರ ಪ್ರಕರಣದ ತನಿಖೆಗಾಗಿ ಎಸ್‌ಐಟಿ ರಚನೆ ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ 11 ಆರೋಪಿಗಳನ್ನು ಬಂಧಿಸಲಾಗಿದೆ.
ಗೌರಿ ಲಂಕೇಶ್ ಮೇಲೆ ಗುಂಡು ಹಾರಿಸಿದ್ದು ಪರುಶುರಾಮ್ ವಾಗ್ಮೋರೆ, ಬೈಕ್ ಮೂಲಕ ವಾಗ್ಮೋರೆಯನ್ನು ಕರೆದು ತಂದಿದ್ದು ಗಣೇಶ್ ಮಿಸ್ಕಿನ್. ಈ ಇಬ್ಬರು ಆರೋಪಿಗಳನ್ನು ಎಸ್‌ಐಟಿ ಬಂಧಿಸಿದೆ. ಆದರೆ, ಕೃತ್ಯಕ್ಕೆ ಬಳಸಿದ ಗನ್ ಮತ್ತು ಬೈಕ್ ಇನ್ನೂ ಸಿಕ್ಕಿಲ್ಲ.











Click it and Unblock the Notifications