ಗೌರಿ ಲಂಕೇಶ್ ಹತ್ಯೆ, 500 ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ
ಬೆಂಗಳೂರು, ಸೆಪ್ಟೆಂಬರ್ 8 : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಪೊಲೀಸರು 500 ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಆದರೆ, ಇದುವರೆಗೂ ಯಾವುದೇ ಸುಳಿವುಗಳು ಪತ್ತೆಯಾಗಿಲ್ಲ.
ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಪೊಲೀಸರಿಗೆ ಇದುವರೆಗೂ ಉಪಯೋಗಿಸಿರುವ ಪಿಸ್ತೂಲ್ ಬಗ್ಗೆ ಮಾತ್ರ ಖಚಿತತೆ ಸಿಕ್ಕಿದೆ. 7.65 ಎಂಎಂ ಪಿಸ್ತೂಲ್ ಬಳಸಿ ಹತ್ಯೆ ಮಾಡಲಾಗಿದೆ ಎಂಬುದು ತನಿಖೆ ವೇಳೆ ಧೃಡಪಟ್ಟಿದೆ.

ಸುಪಾರಿ ಹಂತಕರು ಈ ಹತ್ಯೆ ಮಾಡಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ನಾಡ ಪಿಸ್ತೂಲ್ ಅನ್ನು ಸುಲಭವಾಗಿ ನಿರ್ಹವಣೆ ಮಾಡುವುದು ಕಷ್ಟ. ಮೊದಲ ಬಾರಿಗೆ ಅದನ್ನು ಉಪಯೋಗ ಮಾಡಿದವರು ಈ ಹತ್ಯೆ ಮಾಡಿಲ್ಲ ಎಂಬುದು ಪೊಲೀಸರ ಶಂಕೆಯಾಗಿದೆ.
ಪಿಸ್ತೂಲ್‌ನಿಂದ ಗುಂಡು ಹಾರಿದ ಬಳಿಕ ಅದು ಜಾಮ್ ಆಗುತ್ತದೆ. ಮತ್ತೆ ಅದನ್ನು ರಿಲೋಡ್ ಮಾಡಬೇಕು. ಗೌರಿ ಲಂಕೇಶ್ ಹತ್ಯೆಯಲ್ಲಿ ಹಲವು ಗುಂಡುಗಳನ್ನು ನಿರಂತರವಾಗಿ ಹಾರಿಸಲಾಗಿದೆ. ಆದ್ದರಿಂದ, ಇದು ಸುಪಾರಿ ಹಂತಕರ ಕೃತ್ಯವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಹಲವರ ಹೇಳಿಕೆಗಳನ್ನು ದಾಖಲು ಮಾಡಿಕೊಂಡಿದ್ದಾರೆ. ಆರೋಪಿಗಳ ಬಗ್ಗೆ ಸುಳಿವು ಸಿಕ್ಕರೆ ತಿಳಿಸಿ ಎಂದು ಸಾರ್ವಜನಿಕರಿಗೂ ಮನವಿ ಮಾಡಿದ್ದಾರೆ. ಗೌರಿ ಲಂಕೇಶ್ ತಾಯಿಯ ಹೇಳಿಕೆ ಪಡೆಯಲು ಪೊಲೀಸರು ಕಾಯುತ್ತಿದ್ದಾರೆ.
ಹತ್ಯೆಯಾಗುವ ಕೆಲವು ದಿನಗಳ ಮೊದಲು ಮನೆಯ ಬಳಿ ಅಪರಿಚಿತರನ್ನು ನಾನು ನೋಡಿದ್ದೇನೆ ಎಂದು ಗೌರಿ ಲಂಕೇಶ್ ತಾಯಿಯ ಬಳಿ ಹೇಳಿಕೊಂಡಿದ್ದರು. ಆದ್ದರಿಂದ, ತಾಯಿಯ ಹೇಳಿಕೆ ಪಡೆಯಲು ಪೊಲೀಸರು ಮುಂದಾಗಿದ್ದಾರೆ.












Click it and Unblock the Notifications