KSRTC: ಗಣೇಶ ಹಬ್ಬಕ್ಕೆ ಕರ್ನಾಟಕದಾದ್ಯಂತ 1500 ಹೆಚ್ಚುವರಿ ಬಸ್ ವ್ಯವಸ್ಥೆ, ಎಲ್ಲಿಂದ-ಎಲ್ಲಿಗೆ? ರಿಯಾಯಿತಿ ವಿವರ
ಬೆಂಗಳೂರು, ಆಗಸ್ಟ್ 22: ಗೌರಿ-ಗಣೇಶ ಹಬ್ಬಕ್ಕೆ ತಮ್ಮ ತಮ್ಮ ಊರುಗಳಿಗೆ ತೆರಳುವವರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಗುಡ್ ನ್ಯೂಸ್ ನೀಡಿದೆ. ರಾಜ್ಯ ಮತ್ತು ಅಂತಾರಾಜ್ಯದ ಸ್ಥಳಗಳಿಗೆ 1500 ಹೆಚ್ಚುವರಿ ಬಸ್ಸುಗಳ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಮುಂಗಡ ಬುಕ್ಕಿಂಗ್‌ಗೆ ಅವಕಾಶ ನೀಡಲಾಗಿದೆ. ಪ್ರಯಾಣಿಕರಿಗೆ ಟಿಕೆಟ್ ಬುಕ್ಕಿಂಗ್‌ನಲ್ಲಿ ರಿಯಾಯಿತಿ ನೀಡಿದೆ. ಹಾಗಾದ್ರೆ ಎಷ್ಟು ರಿಯಾಯಿತು, ಬಸ್ ಕಾರ್ಯಾಚರಣೆ ದಿನಾಂಕ, ಎಲ್ಲಿಂದ-ಎಲ್ಲಿಗೆ ಬಸ್ ಸೇವೆ? ಸೇರಿದಂತೆ ವಿವಿಧ ಮಾಹಿತಿ ಇಲ್ಲಿದೆ.
ಇದೇ ಆಗಸ್ಟ್ 26 ರಂದು ಸ್ವರ್ಣಗೌರಿ ವ್ರತ, ಆಗಸ್ಟ್ 27 ರಂದು ಗಣೇಶ ಚತುರ್ಥಿ ಹಬ್ಬದಾಚರಣೆ ಇದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ, ಹೆಚ್ಚಾಗಲಿರುವ ಸಂಭವನಿಯ ಜನದಟ್ಟಣೆ ನಿವಾರಣೆಗೆ ಈ ವಿಶೇಷ ಬಸ್‌ಗಳ ಕಾರ್ಯಾಚರಣೆ ಮಾಡಲಾಗುತ್ತದೆ. ಆಗಸ್ಟ್ 25 ರಿಂದ ಆಗಸ್ಟ್ 31ರವರೆಗೆ ಈ ವಿಷೇಶ್ ಬಸ್‌ಗಳು ಸಂಚಾರ ಮಾಡಲಿವೆ ಎಂದು ಕರ್ನಾಟಕ ಸಾರಿಗೆ ಇಲಾಖೆಯ ಸಾರಿಗೆ ನಿಗಮ ಶುಕ್ರವಾರ ಮಾಹಿತಿ ನೀಡಿದೆ.

ಆಗಸ್ಟ್ 25 & 26 ರಂದು ಬೆಂಗಳೂರಿನಿಂದ ಈ ಕೆಳಕಂಡ ಸ್ಥಳಗಳಿಗೆ 1500 ಹೆಚ್ಚುವರಿ ವಾಹನಗಳ ವಿಶೇಷ ಸಾರಿಗೆ ವ್ಯವಸ್ಥೆ ಲಭ್ಯವಿದೆ. ರಾಜ್ಯ ಮತ್ತು ಅಂತಾರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ಆಗಸ್ಟ್ 27 ಹಾಗೂ 31ರಂದು ವಿಶೇಷ ವಾಹನಗಳು ಸಂಚಾರ ಮಾಡಲಿವೆ.
ಎಲ್ಲಿಂದ ಎಲ್ಲಿಗೆ ಬಸ್ ಸೇವೆ
ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್, ತಿರುಪತಿ, ವಿಜಯವಾಡ, ಹೈದರಾಬಾದ್ ಮುಂತಾದ ಸ್ಥಳಗಳಿಗೆ ವಿಶೇಷ ಬಸ್ ಸೇವೆ ನೀಡಲಿವೆ.
ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿ ಮಾರ್ಗದ ಕಡೆ ಬಸ್ ಸಂಚರಿಸಲಿವೆ. ಇನ್ನೂ ತಮಿಳುನಾಡು ಮತ್ತು ಕೇರಳ ಕಡೆ ಮಧುರೈ, ಕುಂಭಕೋಣಂ, ಚೆನ್ನೈ, ಕೊಯಮತ್ತೂರ್, ತಿರುಚಿ, ಪಾಲಕ್ಕಾಡ್, ತ್ರಿಶೂರ್, ಏರ್ನಾಕುಲಂ, ಕೋಯಿಕೋಡ್, ಕ್ಯಾಲಿಕಟ್ ಮುಂತಾದ ಸ್ಥಳಗಳಿಗೆ ಹೋಗುವ ಪ್ರತಿಷ್ಠಿತ ಸಾರಿಗೆ ಬಸ್‌ಗಳು ಶಾಂತಿನಗರದ ಬಿಎಂಟಿಸಿ ಬಸ್‌ಗಳಿಂದ ಸಂಚರಿಸಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಸಾರಿಗೆಗಳಿಗೆ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸುವ ಸೌಲಭ್ಯ ಕಲ್ಪಿಸಲಾಗಿದೆ. ಪ್ರಯಾಣಿಕರು ಬಸ್ ನಿಲ್ದಾಣಗಳಿಗೆ ತೆರಳುವ ಮುನ್ನ ಮುಂಗಡ ಕಾಯ್ದಿರಿಸಲಾಗಿರುವ ಟಿಕೇಟುಗಳ ಮೇಲೆ ಬಸ್ ನಿಲ್ದಾಣ/ಪಿಕ್ ಅಪ್ ಪಾಯಿಂಟ್ ಹೆಸರ ನಮೂದಿಸಬೇಕು.
ಟಿಕೆಟ್ ಬುಕ್ಕಿಂಗ್ ಮೇಲೆ ರಿಯಾಯಿತಿ
ನೀವು KSRTC ಇ-ಟಿಕೇಟ್ ಬುಕ್ ಮಾಡಲು ಅಧಿಕೃತ ವೆಬ್‌ಸೈಟ್ www.ksrtc.karnataka.gov.in ಮೂಲಕ ಮಾಡಬಹುದು. ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೇಟು ಕಾಯ್ದಿರಿಸಿದರೆ ಶೇ.5 ರಷ್ಟು ರಿಯಾಯಿತಿ ನೀಡಲಾಗುವುದು. ಎರಡು ಬದಿ ಪ್ರಯಾಣದ ಟಿಕೇಟ್‌ನ್ನು ಒಟ್ಟಿಗೆ ಕಾಯ್ದಿರಿಸಿದರೆ ಟಿಕೆಟ್ ದರದಲ್ಲಿ ಶೇಕಡ 10 ರಷ್ಟು ರಿಯಾಯಿತಿ ನೀಡಲಾಗುತ್ತದೆ ಸಿಗಲಿದೆ.
ನೆರೆ ರಾಜ್ಯಗಳಲ್ಲಿ ಟಿಕೆಟ್ ಬುಕ್ಕಿಂಗ್ ಕೌಂಟರ್
ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಗೋವಾ, ಮಹಾರಾಷ್ಟ್ರ ಹಾಗೂ ಪುದುಚೆರಿಗಳಿಂದ ಬೆಂಗಳೂರಿಗೆ ಬರುವವರು ಅಲ್ಲಿರುವ ಪ್ರಮುಖ ನಗರಗಳಲ್ಲಿ ನಿಗಮದ ಮುಂಗಡ ಆಸನ ಕಾಯ್ದಿರಿಸುವ ಕೌಂಟರ್‌ಗಳಿವೆ. ಅವುಗಳ ಮುಂಗಡ ಆಸನಗಳನ್ನು ಕಾಯ್ದಿರಿಸಬಹುದಾಗಿದೆ. ಬಸ್‌ಗಳು ಹೊರಡುವ ಸ್ಥಳ, ವೇಳಾಪಟ್ಟಿ, ಸಮಯ ಎಲ್ಲವು ನಿಮಗೆ ಟಿಕೆಟ್ ಬುಕ್ಕಿಂಗ್ ವೇಳೆ ಜಾಲತಾಣದಲ್ಲಿ ಕಂಡು ಬರುತ್ತದೆ.












Click it and Unblock the Notifications