ಸಾವು-ನೋವಿನ ನಡುವೆ 04 ಜೀವಕ್ಕೆ ಸಂಜೀವಿನಿಯಾದ ಕುಟುಂಬ: ದಿನೇಶ್ ಗುಂಡೂರಾವ್ ಬಣ್ಣನೆ
ಬೆಂಗಳೂರು, ನವೆಂಬರ್ 15: ಉತ್ತರ ಕರ್ನಾಟಕದ ಗದಗ ಜಿಲ್ಲೆಯು ಮಾನವೀಯತೆ, ಸಮಯಪ್ರಜ್ಞೆ ಹಾಗೂ ಅಸಾಧಾರಣ ಘಟನೆಗೆ ಸಾಕ್ಷಿಯಾಗಿದೆ. ಪೊಲೀಸರು ಮತ್ತು ವೈದ್ಯರು ಪೊಲೀಸರು ಮತ್ತು ವೈದ್ಯರು ಒಂದಾಗಿ ಕೈಜೋಡಿಸಿ ಅಮೂಲ್ಯ ಜೀವಗಳನ್ನು ಉಳಿಸಲು ಹೋರಾಡಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಸಚಿವರು ಪೋಸ್ಟ್ ಮಾಡಿದ್ದಾರೆ. ಗದಗ ತಾಲೂಕಿನ ಹುಲಕೋಟಿಯ ಕೆ. ಹೆಚ್. ಪಾಟೀಲ್ ಆಸ್ಪತ್ರೆಯಿಂದ ಧಾರವಾಡದ ಎಸ್‌ಡಿಎಂ ಆಸ್ಪತ್ರೆಗೆ, ಸಾರ್ವಕಾಲಿಕ ದಾಖಲೆಯ ವೇಗದಲ್ಲಿ, ಗ್ರೀನ್ ಕಾರಿಡಾರ್ ಮೂಲಕ ಕಿಡ್ನಿಯನ್ನು ಯಶಸ್ವಿಯಾಗಿ ಸಾಗಿಸಲಾಗಿದೆ.

ಈ ಮಹಾನ್ ಕಾರ್ಯದ ಹಿಂದಿರುವ ನಿಜವಾದ ಪ್ರೇರಣೆ ಎಂದರೆ, ನಾರಾಯಣ ಶಿವನ್ನಾಲ (38) ಅವರ ಕುಟುಂಬದವರ ಮಹತ್ವದ ನಿರ್ಧಾರ. ತಮ್ಮ ಕುಟುಂಬದ ಆಧಾರಸ್ತಂಭವನ್ನು ಕಳೆದುಕೊಂಡ ನೋವಿನ ಮಧ್ಯೆಯೂ ಹಲವರ ಜೀವ ಉಳಿಸುವ ನಿರ್ಧಾರ ತೆಗೆದುಕೊಳ್ಳುವುದು ಸುಲಭದ ಮಾತಲ್ಲ ಎಂದು ಅಂಗಾಂಗ ದಾನ ಮಾಡಿದವರನ್ನು ಶ್ಲಾಘಿಸಿದ್ದಾರೆ.
ನಾಲ್ಕು ಜೀವಗಳಿಗೆ ಹೊಸ ಬದುಕು
ಅವರ ಪರಿಸ್ಥಿತಿ ಸೂಕ್ಷ್ಮವಾಗಿದ್ದರೂ, ಬದುಕಲು ಒಂದು ಸಣ್ಣ ಆಸರೆ ಬಯಸುತ್ತಿದ್ದ ಹಲವರ ಜೀವ ಉಳಿಸಲು ಕುಟುಂಬ ಒಮ್ಮತದ ತೀರ್ಮಾನ ಮಾಡಿತು. ಮೃತ ಶಿವನ್ನಾಲ ಅವರ ಎರಡು ಕಿಡ್ನಿ ಮತ್ತು ಎರಡು ಕಣ್ಣುಗಳನ್ನು ದಾನ ಮಾಡುವ ಮೂಲಕ ನಾಲ್ಕು ಜೀವಗಳಿಗೆ ಹೊಸ ಬದುಕನ್ನು ಈ ಕುಟುಂಬ ನೀಡಿದೆ.
ನಾರಾಯಣ ಶಿವನ್ನಾಲ ಕುಟುಂಬಸ್ಥರ ಈ ನಿಸ್ವಾರ್ಥ ನಿರ್ಧಾರವು ಅಂಗಾಂಗ ದಾನದ ಮಹತ್ವವನ್ನು ಮನವರಿಕೆ ಮಾಡಿಕೊಡುತ್ತದೆ ಮತ್ತು ನಮಗೆಲ್ಲರಿಗೂ ಆದರ್ಶಪ್ರಾಯವಾಗಿದೆ. ಇಂತಹ ಮಾನವೀಯ ಕಾರ್ಯಕ್ಕೆ ನಮ್ಮ ಸಮಾಜ ಸದಾ ಋಣಿಯಾಗಿರುತ್ತದೆ. ಜತೆಗೆ, ಆರೋಗ್ಯ ಇಲಾಖೆ ಮತ್ತು ವೈಯಕ್ತಿಕ ನಾನು ಕೂಡ ಶಿವನ್ನಾಲ ಕುಟುಂಬಕ್ಕೆ ಆಭಾರಿಯಾಗಿದ್ದೇನೆ.
ನಮ್ಮ ಒಂದು ನಿರ್ಧಾರ, ಸಾವಿನ ನಂತರವೂ ಹಲವು ಜೀವಗಳನ್ನು ಉಳಿಸುತ್ತದೆ. ಅಂಗಾಂಗಗಳ ದಾನಗಳ ಮೂಲಕ ವ್ಯಕ್ತಿ ಸಾವಿನ ನಂತರವೂ ಬದುಕುತ್ತಾರೆ. ಈ ಘಟನೆ ಇಡೀ ಮನುಕುಲಕ್ಕೆ ಮಾದರಿಯಾಗಿದೆ. ನಾವೆಲ್ಲರೂ ಈ ಹಾದಿಯಲ್ಲಿ ಸಕಾರಾತ್ಮಕವಾಗಿ ಒಗ್ಗಟ್ಟಿನಿಂದ ಪರಸ್ಪರರಿಗೆ ಸ್ಪಂದಿಸುತ್ತಾ ನಡೆಯೋಣ ಎಂದು ಅವರು ಕರೆ ನೀಡಿದ್ದಾರೆ.
ಈ ಸಂದರ್ಭದಲ್ಲಿ, ಗದಗ ಜಿಲ್ಲಾ ಪೊಲೀಸ್ ಅಧೀಕ್ಷಕರ ದಕ್ಷ ನಾಯಕತ್ವ ಮತ್ತು ತ್ವರಿತ ಯೋಜನೆ, ಸಂಚಾರ ದಟ್ಟಣೆಯ ಮಧ್ಯೆಯೂ ಕ್ಷಣಾರ್ಧದಲ್ಲಿ ಸುರಕ್ಷಿತ ಮಾರ್ಗ ಕಲ್ಪಿಸಿದ ಖಾಕಿ ಪಡೆಯ ಕರ್ತವ್ಯನಿಷ್ಠೆ ನಿಜಕ್ಕೂ ಶ್ಲಾಘನೀಯ. ಈ ಜೀವ ಉಳಿಸುವ ಸಾಹಸದಲ್ಲಿ ಭಾಗಿಯಾದ ಗದಗ ಪೊಲೀಸ್ ತಂಡ, ವೈದ್ಯರಾದ ಡಾ. ಎಸ್.ಆರ್. ನಾಗನೂರ, ಡಾ. ಅವಿನಾಶ ಒದುಗೌಡರ್ ಹಾಗೂ ಈ ಕಾರ್ಯಕ್ಕೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬ ವ್ಯಕ್ತಿಗೂ ಅವರು ಅಭಿನಂದನೆ ತಿಳಿಸಿದ್ದಾರೆ.












Click it and Unblock the Notifications