ಲಕ್ಕುಂಡಿಯಲ್ಲಿ ಮತ್ತೆ ಅಪರೂಪದ ಮುತ್ತು, ಹವಳ, ಸ್ಫಟಿಕ, ನೀಲಮಣಿ ಪತ್ತೆ!
ಗದಗ: ಗದಗ ಜಿಲ್ಲೆಯಲ್ಲಿಯ ಲಕ್ಕುಂಡಿಯಲ್ಲಿ ಈಚೆಗೆ ಮತ್ತೆ ಪುರಾತನ ವಸ್ತುಗಳು ಸಿಕ್ಕಿವೆ. ಐತಿಹಾಸಿಕ ಲಕ್ಕುಂಡಿಗೆ ಇತಿಹಾಸದಲ್ಲಿ ವಿಶೇಷ ಸ್ಥಾನವಿದೆ. ಈಚೆಗೆ ಈ ಭಾಗದಲ್ಲಿ ಮನೆ ನಿರ್ಮಾಣಕ್ಕೆ ಪಾಯ ತೆಗೆಯುವಾಗ 460 ಗ್ರಾಂ ಚಿನ್ನಾಭರಣ ಸಿಕ್ಕಿತ್ತು. ಈ ಚಿನ್ನಾಭರಣದ ವಿಚಾರವು ಚರ್ಚೆ ಆಗುತ್ತಿರುವಾಗಲೇ ಇನ್ನಷ್ಟು ಪುರಾತನ ವಸ್ತುಗಳನ್ನು ಪತ್ತೆಯಾಗಿದ್ದು, ಕುತೂಹಲ ಹೆಚ್ಚಿಸಿದೆ. ಗಂಗವ್ವ ರಿತ್ತಿ ಹಾಗೂ ಅವರ ಕುಟುಂಬವು ನಿಧಿ (ಚಿನ್ನಾಭರಣ)ಯನ್ನು ರಾಜ್ಯ ಸರ್ಕಾರಕ್ಕೆ ಒಪ್ಪಿಸಿತ್ತು.
ಇದೀಗ ಮಂಗಳವಾರ ಜನವರಿ 13ರಂದು ನಿಧಿ ಸಿಕ್ಕಿರುವ ಗ್ರಾಮದಲ್ಲೇ ಮತ್ತಷ್ಟು ವಸ್ತುಗಳು ಪತ್ತೆ ಆಗಿವೆ ಎಂದು ಹೇಳಲಾಗಿದೆ. ಇದು ಈ ಭಾಗದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ನಿಧಿ ಸಿಕ್ಕ ಪ್ರದೇಶದಲ್ಲಿ ಜನ ಜಮಾಯಿಸಿದ್ದರು. ಇದೀಗ ಹೊಸದಾಗಿ ಮುತ್ತು, ಹವಳ, ಸ್ಫಟಿಕ, ನೀಲಮಣಿ ಹಾಗೂ ಬಿಳಿ ಹವಳಗಳು ಸಿಕ್ಕಿವೆ ಎಂದು ಹೇಳಲಾಗಿದೆ.

ಗದಗದ ಈ ಭಾಗದಲ್ಲಿ ಒಂದೇ ವಾರದಲ್ಲಿ ಎರಡು ಬಾರಿ ನಿಧಿ ಹಾಗೂ ಅಮೂಲ್ಯವಾದ ಪುರಾತನ ವಸ್ತುಗಳು ಸಿಕ್ಕಂತೆ ಆಗಿವೆ. ಮುತ್ತು, ಹವಳ, ಸ್ಫಟಿಕ, ನೀಲಮಣಿ ಹಾಗೂ ಬಿಳಿ ಹವಳಗಳೊಂದಿಗೆ ಕರಿಮಣಿ ಸಹ ಸಿಕ್ಕಿದೆ ಎಂದು ಹೇಳಲಾಗಿದ್ದು, ಪುರಾತತ್ವ ಇಲಾಖೆಯಿಂದ ಈ ಭಾಗದಲ್ಲಿ ಪರಿಶೀಲನೆ ನಡೆಯುವ ಸಾಧ್ಯತೆ ಇದೆ. ಈ ಗ್ರಾಮದ ಬಸಪ್ಪ ಎನ್ನುವವರಿಗೆ ಪುರಾತನ ವಸ್ತುಗಳು ಸಿಕ್ಕಿವೆ ಎಂದು ಹೇಳಲಾಗಿದೆ. ಮಳೆ ಬಂದ ನಂತರ ಈ ಗ್ರಾಮದ ಕೆಲವರು ಪುರಾತನ ವಸ್ತುಗಳು ಸಿಗಬಹುದೇ ಎಂದು ಪರಿಶೀಲನೆ ಮಾಡುವುದಕ್ಕೆ ಮುಂದಾಗುತ್ತಿದ್ದಾರೆ. ಈ ರೀತಿ ಇರುವಾಗಲೇ ಅಮೂಲ್ಯ ವಸ್ತುಗಳು ಪತ್ತೆ ಆಗಿರುವುದು ವರದಿಯಾಗಿದೆ.
ಗ್ರಾಮದಲ್ಲಿ ಬಸಪ್ಪ ಬಡಿಗೇರ ಎನ್ನುವವರು ಮಳೆ ಬಂದ ಸಂದರ್ಭದಲ್ಲಿ ಪುರಾತನ ವಸ್ತುಗಳು ಸಿಗಬಹುದೇ ಎಂದು ಹುಡುಕುವುದನ್ನು ರೂಢಿಸಿಕೊಂಡಿದ್ದರು. ಈ ರೀತಿ ಹುಡುಕುವ ಸಂದರ್ಭದಲ್ಲಿ ಅವರಿಗೆ ಹಲವು ವಸ್ತುಗಳು ಸಿಕ್ಕಿವೆ ಎಂದು ಹೇಳಲಾಗಿದೆ.
ನಿಧಿ ಸಿಕ್ಕ ಜಾಗದಲ್ಲಿ ಮನೆ ಬೇಡ
ಇನ್ನು ಈಚೆಗೆ ಈ ಭಾಗದಲ್ಲಿ ನಿಧಿ ಸಿಕ್ಕ ಕುಟುಂಬದವರು, ಈ ಜಾಗವನ್ನು ಬಿಟ್ಟು ಕೊಡುತ್ತೇವೆ ಸರ್ಕಾರವು ನಮಗೆ ಬೇರೆ ಜಾಗದಲ್ಲಿ ಮನೆ ನಿರ್ಮಾಣ ಮಾಡಿಕೊಡಲಿ ಎಂದು ಕೇಳಿದ್ದಾರೆ. ನಿಧಿ ಸಿಕ್ಕ ಜಾಗವು ಅಪಶಕುನ. ಆ ಜಾಗದಲ್ಲಿ ದೇವಸ್ಥಾನ ನಿರ್ಮಿಸಲಿ. ಲಕ್ಷ್ಮೀ ದೇವಸ್ಥಾನದ ಹಿಂಭಾಗದಲ್ಲಿ ಚಿನ್ನದ ಆಭರಣಗಳಿದ್ದ ತಂಬಿಗೆ ಸಿಕ್ಕಿದೆ. ಈ ಜಾಗದಲ್ಲಿ ಸರ್ಪದ ಕಾವಲಿದೆ. ನಮಗೆ ನಿಧಿ ಸಿಕ್ಕ ಜಾಗ ಬೇಡ. ಅದು ದೇವರಿಗೆ ಇರಲಿ, ನಮಗೆ ಬೇರೆ ದಾರಿ ಮಾಡಿಕೊಡಿ ಎಂದು ಗಂಗವ್ವ ರಿತ್ತಿ ಕುಟುಂಬದವರು ಮನವಿ ಮಾಡಿದ್ದಾರೆ.
ಇಲ್ಲಿ ನಿಧಿ ಸಿಕ್ಕಿರುವ ಜಾಗವು ಬೆಂಕಿ ಇದ್ದಂತೆ. ಬೆಂಕಿ ಕಟ್ಟಿಕೊಂಡು ಮುಂದೆ ಹೋದರೆ ಸೆರಗು ಸುಡುತ್ತೆ. ಒಬ್ಬ ಮಗ ಇದ್ದಾನೆ. ಅವನಿಗೆ ಯಾವುದಾದರೂ ಸರ್ಕಾರಿ ಕೆಲಸ ಕೊಡಿಸಬೇಕು ಎಂದೂ ಅವರು ಹೇಳಿದ್ದಾರೆ.












Click it and Unblock the Notifications