Gold: ಗದಗ - ಲಕ್ಕುಂಡಿ: ನಿಧಿ ನೀಡಿದ ಕುಟುಂಬಕ್ಕೆ ನಿವೇಶನ ಸೇರಿ ಮೂರು ಭರ್ಜರಿ ಗಿಫ್ಟ್ ಕೊಟ್ಟ ಸರ್ಕಾರ
ಗದಗ: ಇಲ್ಲಿನ ಲಕ್ಕುಂಡಿಯಲ್ಲಿ ನಿಧಿ / ಚಿನ್ನಾಭರಣ ನೀಡಿ ಪ್ರಮಾಣಿಕತೆ ಮೆರೆದಿದ್ದ ರಿತ್ತಿ ಕುಟುಂಬಕ್ಕೆ ಸರ್ಕಾರವು ಕೊನೆಗೂ ಕೊಟ್ಟಿದ್ದ ಭರವಸೆಯನ್ನು ಈಡೇರಿಸಿದೆ. ಲಕ್ಕುಂಡಿಯಲ್ಲಿ ಮನೆ ನಿರ್ಮಾಣ ಮಾಡುವ ಸಂದರ್ಭದಲ್ಲಿ ರಿತ್ತಿ ಕುಟುಂಬಕ್ಕೆ 460 ಗ್ರಾಂನಷ್ಟು ಚಿನ್ನಾಭರಣ ಸಿಕ್ಕಿತ್ತು. ಈ ನಿಧಿಯನ್ನು ಕುಟುಂಬವು ಸರ್ಕಾರಕ್ಕೆ ಒಪ್ಪಿಸಿತ್ತು. ಇದೀಗ ಈ ಕುಟುಂಬಕ್ಕೆ ಸರ್ಕಾರವು ನಿವೇಶನ ಸೇರಿದಂತೆ ಹಲವು ಗುಡ್‌ನ್ಯೂಸ್ ಕೊಟ್ಟಿದೆ.
ಇಲ್ಲಿನ ಲಕ್ಕುಂಡಿ ಗ್ರಾಮದಲ್ಲಿ ಮನೆ ನಿರ್ಮಾಣಕ್ಕೆ ಅಡಿಪಾಯ ಹಾಕುವ ಸಂದರ್ಭದಲ್ಲಿ ಚಿನ್ನದ ನಿಧಿ ಪತ್ತೆ ಆಗಿತ್ತು. ಇದಾದ ನಂತರ ಈ ಕುಟುಂಬವು ಸ್ವಂತ ಜಾಗದಿಂದ ಅವರ ನೆಂಟರ ಮನೆಗೆ ಸ್ಥಳಾಂತರಗೊಂಡಿದ್ದರು. ಲಕ್ಕುಂಡಿಯಲ್ಲಿ ಈಗ ಉತ್ಖನನ ಕಾರ್ಯ ನಡೆಯುತ್ತಿದೆ. ಇನ್ನಷ್ಟು ಪುರಾತತ್ವ ವಸ್ತುಗಳು ಸಿಗುವ ನಿರೀಕ್ಷೆ ಇದೆ. ಈ ಸಂದರ್ಭದಲ್ಲಿ ನಿಧಿ ನೀಡಿದ ರಿತ್ತಿ ಕುಟುಂಬವನ್ನು ನಿರ್ಲಕ್ಷ್ಯಿಸಲಾಗುತ್ತಿದೆ ಎನ್ನುವ ಆರೋಪಗಳು ಕೇಳಿ ಬಂದಿದ್ದವು. ಆದರೆ ಸರ್ಕಾರವು ನಿಧಿ ನೀಡಿರುವ ಕುಟುಂಬಕ್ಕೆ ಸಕಲ ಗೌರವವನ್ನೂ ನೀಡಿದೆ.

ನಿಧಿ ನೀಡಿ ಪ್ರಮಾಣಿಕತೆ ಮೆರೆದಿರುವ ಪ್ರಜ್ವಲ್ ರಿತ್ತಿ ಕುಟುಂಬಕ್ಕೆ ಗಣರಾಜ್ಯೋತ್ಸವದ ದಿನ ವಿಶೇಷ ಕೊಡುಗೆ ಕೊಡುವುದಾಗಿ ಸರ್ಕಾರವು ಈಗಾಗಲೇ ಘೋಷಿಸಿತ್ತು. ಅದರಂತೆ ರಾಜ್ಯ ಸರ್ಕಾರವು ಜನವರಿ 26ರ ಸೋಮವಾರ ಬಂಪರ್ ಗಿಫ್ಟ್ ಕೊಟ್ಟಿದೆ. ಗದಗ ನಗರ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನಂತರ ಸಚಿವ ಎಚ್.ಕೆ ಪಾಟೀಲ್ ಅವರು ಮಹತ್ವದ ಘೋಷಣೆ ಮಾಡಿದ್ದಾರೆ.
ನಿವೇಶನ ಹಂಚಿಕೆ
ನಿಧಿ ನೀಡಿ ಪ್ರಮಾಣಿಕತೆ ಮೆರೆದ ಪ್ರಜ್ವಲ್ ರಿತ್ತಿ ಕುಟುಂಬಕ್ಕೆ 30×40 ಅಳತೆಯ ನಿವೇಶನ ನೀಡಲಾಗಿದೆ. ಅಲ್ಲದೇ ರಿತ್ತಿ ಕುಟುಂಬದವರಿಗೆ ಮನೆ ನಿರ್ಮಾಣ ಮಾಡಲು ಕಷ್ಟವಾಗಲಿದೆ ಅವರಿಗೆ ಆರ್ಥಿಕ ಸಹಾಯ ಸಿಗಬೇಕು ಎನ್ನುವ ಬೇಡಿಕೆ ಇತ್ತು. ಇದರ ಅನುಸಾರ 5 ಲಕ್ಷ ರೂಪಾಯಿ ನಗದು ಸಹಾಯವನ್ನು ಇದೇ ಸಂದರ್ಭದಲ್ಲಿ ಕೊಡಲಾಗಿದೆ. ಪ್ರಜ್ವಲ್ ಅವರ ತಾಯಿ ಕಸ್ತೂರೆವ್ವ ರಿತ್ತಿಗೆ ಹೊರಗುತ್ತಿಗೆ ಆಧಾರದ ಸರ್ಕಾರಿ ಕೆಲಸ ನೀಡಲಾಗುತ್ತದೆ ಎಂದು ಸಹ ಸರ್ಕಾರ ಘೋಷಣೆ ಮಾಡಿದೆ.
ರಿತ್ತಿ ಕುಟುಂಬಕ್ಕೆ ಸನ್ಮಾನ
ನಿಧಿ ನೀಡಿ ಪ್ರಮಾಣಿಕತೆ ಮೆರೆದಿರುವ ರಿತ್ತಿ ಕುಟುಂಬಕ್ಕೆ ಇಂದು ಸನ್ಮಾನ ಮಾಡಲಾಗಿದೆ. 8ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಪ್ರಜ್ವಲ್ ರಿತ್ತಿ ಹಾಗೂ ಅವರ ತಾಯಿ ಕಸ್ತೂರೆವ್ವ ಅವರನ್ನು ಜಿಲ್ಲಾಡಳಿತದ ವತಿಯಿಂದ ಗಣರಾಜ್ಯೋತ್ಸವ ಸಂಭ್ರಮದಲ್ಲಿ ಸನ್ಮಾನಿಸಿ, ಗೌರವಿಸಲಾಗಿದೆ. ಸಚಿವ ಎಚ್.ಕೆ ಪಾಟೀಲ್ ಅವರು ಕುಟುಂಬಕ್ಕೆ ನಿವೇಶನ ಪ್ರಮಾಣ ಪತ್ರ ಹಾಗೂ ಕಸ್ತೂರೆವ್ವ ಅವರಿಗೆ ಉದ್ಯೋಗದ ಆದೇಶ ಪತ್ರವನ್ನು ವಿತರಿಸಿದ್ದಾರೆ.
ಮುಂದುವರಿದ ಉತ್ಖನನ
ಇನ್ನು ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ನಿಧಿ ಸಿಕ್ಕ ನಂತರ ಈ ಭಾಗದಲ್ಲಿ ಉತ್ಖನನ ಕಾರ್ಯ ಚುರುಕು ಪಡೆದುಕೊಂಡಿದೆ. ಕಳೆದ ಎಂಟು ದಿನಗಳಿಂದಲೂ ಉತ್ಖನನ ಕಾರ್ಯ ನಡೆದಿದೆ. ಹಲವು ಅಪರೂಪದ ವಸ್ತುಗಳು ಹಾಗೂ ಪುರಾತನ ವಸ್ತುಗಳು ಪತ್ತೆ ಆಗಿವೆ. ಮುಂದಿನ ದಿನಗಳಲ್ಲಿ ಉತ್ಖನನ ಕಾರ್ಯ ಇನ್ನಷ್ಟು ಚುರುಕುಪಡೆದುಕೊಳ್ಳು ಸಾಧ್ಯತೆ ಇದೆ.












Click it and Unblock the Notifications