GBA ಮಾದರಿಯಲ್ಲಿ 'ಗ್ರೇಟರ್ ತುಮಕೂರು ಪ್ರಾಧಿಕಾರ': ಜಿಲ್ಲೆಗೆ ಸಿಹಿಸುದ್ದಿ ಕೊಟ್ಟ ಜಿ.ಪರಮೇಶ್ವರ
ತುಮಕೂರು, ನವೆಂಬರ್ 07: ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಕ್ರಮಗಳು ಆಗಬೇಕಿದೆ. ಆಗುತ್ತಿವೆ. ಅಂತೆಯೇ ತುಮಕೂರು ನಗರದ ಅಭಿವೃದ್ಧಿಯೂ ಪೂರಕವಾಗಿ ಆಗಬೇಕಿದೆ ಎಂದಿರುವ ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಡಾ.ಜಿ.ಪರಮೇಶ್ವರ ಅವರು, ಕೋಟ್ಯಾಂತರ ರೂಪಾಯಿ ಮೌಲ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ಹಾಕಿದರು. ಕೆಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ ಮಹತ್ವ ವಿಚಾರ ಹಂಚಿಕೊಂಡಿದ್ದಾರೆ.
ತುಮಕೂರು ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಶುಕ್ರವಾರ 300 ಹಾಸಿಗೆಗಳ ಜಿಲ್ಲಾಸ್ಪತ್ರೆ ನೂತನ ಕಟ್ಟಡದ ಶಂಕುಸ್ಥಾಪನೆ, 100 ಹಾಸಿಗೆಗಳ ಕ್ಯಾನ್ಸರ್ ಆಸ್ಪತ್ರೆ, 100 ಹಾಸಿಗೆಗಳುಳ್ಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ನರ್ಸಿಂಗ್ ಕಾಲೇಜು, ಹಾಸ್ಟಲ್ ಕಟ್ಟಡಗಳ ಲೋಕಾರ್ಪಣೆ ಮಾಡಿದರು. ತುಮಕೂರು ತಾಲ್ಲೂಕಿನ ಭೀಮಸಂದ್ರ ಕೆರೆಯಿಂದ ವಸಂತನರಸಾಪುರ ಕೈಗಾರಿಕಾ ಪ್ರದೇಶಕ್ಕೆ 30 ಎಂ.ಎಲ್.ಡಿ. ತೃತೀಯ ಹಂತದ ಸಂಸ್ಕರಿಸಿದ ನೀರು ಪೂರೈಕೆ ಯೋಜನೆ ಉದ್ಘಾಟನೆ ಸೇರಿದಂತೆ ವಿವಿಧ 645 ಕೋಟಿ ರೂ. ವೆಚ್ಚದ ಕಾಮಗಾರಿಗಳ ಉದ್ಘಾಟನೆ ಹಾಗೂ ಅಡಿಗಲ್ಲು ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡಿದರು.

ತುಮಕೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಗ್ರೇಟರ್ ಬೆಂಗಳೂರು ಮಾದರಿಯಲ್ಲಿ, ಗ್ರೇಟರ್ ತುಮಕೂರು ಘೋಷಿಸಬೇಕೆಂಬ ಪ್ರಸ್ತಾವನೆ ಸಲ್ಲಿಸಲಾಗುವುದು. ಜಿಲ್ಲೆಯಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಕ್ರಮಗಳು ಆಗಬೇಕಿದೆ. ಆಗುತ್ತಿವೆ. ಈ ಹಿನ್ನೆಲೆಯಲ್ಲಿ ಗ್ರೇಟರ್ ಬೆಂಗಳೂರು ಮಾದರಿಯಲ್ಲಿ ಗ್ರೇಟರ್ ತುಮಕೂರು ಯೋಜನೆ ಪ್ರಸ್ತಾವವನ್ನು ಸರ್ಕಾರದ ಮುಂದೆ ಮಂಡಿಸಲಾಗುವುದು ಎಂದು ಅವರು ಇದೇ ವೇಳೆ ತಿಳಿಸಿದರು.
ಸಾವಿರ ನಿವೇಶನ ಹಂಚಿಕೆ
ತುಮಕೂರು ನಗರದಲ್ಲಿ ಬಹುಕಾಲದಿಂದ ನಾಗರಿಕರಿಗೆ ನಿವೇಶನಗಳ ಹಂಚಿಕೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಮುಂದಿನ 6 ತಿಂಗಳೊಳಗಾಗಿ 2 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು. ನೆನೆಗುದಿಗೆ ಬಿದ್ದಿರುವ 2ನೇ ಹಂತದ ಒಳಚರಂಡಿ ಯೋಜನೆ ಕಾಮಗಾರಿಗಳು ಸೇರಿದಂತೆ ಹಲವಾರು ಅಭಿವೃದ್ಧಿ ಕಾಮಗಾರಿಗಳು ಶೀಘ್ರವೇ ಪೂರ್ಣಗೊಳ್ಳಲಿವೆ ಎಂದರು.
ತ್ಯಾಜ್ಯ ನಿರ್ವಹಣೆ ಬಹು ದೊಡ್ಡ ಸಮಸ್ಯೆ. ಈಗಾಗಲೇ ಬೆಂಗಳೂರು ವ್ಯಾಪ್ತಿಯಲ್ಲಿ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಸಂಬಂಧಿತ ಯೋಜನೆ ಪ್ರಸ್ತಾವ ಇಂಧನ ಸಚಿವರ ಮುಂದಿದೆ. ಅಂತೆಯೇ ತುಮಕೂರಿನಲ್ಲಿಯೂ ಕೂಡ ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಗೆ ಕ್ರಮವಹಿಸಲಾಗುವುದು.

ಹಿರೇಹಳ್ಳಿ-ಮಲ್ಲಸಂದ್ರ-ವಸಂತನರಸಾಪುರ ಸಂಪರ್ಕಿಸುವ ಕೇಂದ್ರದ ರಸ್ತೆ ಯೋಜನೆಗೆ ನಮ್ಮ ಸಂಪೂರ್ಣ ಸಹಕಾರವಿದ್ದು, ತುಮಕೂರು ನಗರದ ಅಭಿವೃದ್ಧಿಯ ದೃಷ್ಟಿಯಿಂದ ಈ ಯೋಜನೆಗೆ ಪೂರಕವಾಗಿ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ತಿಳಿಸಿದರು.
ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಮುಂದೆ ಟೀಕೆ-ಟಿಪ್ಪಣಿಗಳು ನಗಣ್ಯ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಿಂತಿಲ್ಲ. ಪ್ರತಿವರ್ಷ 52 ಸಾವಿರ ಕೋಟಿ ರೂ. ಗ್ಯಾರಂಟಿ ಯೋಜನೆಗಳನ್ನು ನೀಡಿದಾಗ್ಯೂ ರಾಜ್ಯದಾದ್ಯಂತ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿರುವುದು ತಮ್ಮ ಕಣ್ಣ ಮುಂದಿದೆ ಎಂದರು.
ತುಮಕೂರು ವಿಶ್ವವಿದ್ಯಾನಿಲಯದ ನೂತನ ಕ್ಯಾಂಪಸ್ ಉದ್ಘಾಟನೆ ಹೊರತುಪಡಿಸಿ, ಇಂದು ಒಂದೇ ದಿನ 645 ಕೋಟಿ ರೂಪಾಯಿಗಳ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನು ನೆರವೇರಿಸಲಾಗಿದೆ ಎಂಬುದನ್ನು ಮನಗಾಣಬೇಕು. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು 16 ಬಾರಿ ಆಯ-ವ್ಯಯ ಮಂಡಿಸಿದ ಕೀರ್ತಿಗೆ ಭಾಜನರಾಗಿದ್ದಾರೆ. ಅವರಿಗೆ ಹಣಕಾಸಿನ ನಿರ್ವಹಣೆ ಸರಿಯಾಗಿ ಗೊತ್ತಿದೆ. ರಾಜ್ಯದಲ್ಲಿ ಅಭಿವೃದ್ಧಿ ಎಂದಿಗೂ ನಿಲ್ಲುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತುಮಕೂರು ವಿಶ್ವವಿದ್ಯಾಲಯ ವೇಗವಾಗಿ ಬೆಳೆಯುತ್ತಿದೆ. 14 ಸಾವಿರ ಎಕರೆ ಪ್ರದೇಶದಲ್ಲಿ ಅಭಿವೃದ್ಧಿಯಾಗಿರುವ ವಸಂತನರಸಾಪುರ ಕೈಗಾರಿಕಾ ವಲಯದಲ್ಲಿ 5 ಲಕ್ಷ ಜನರು ಉದ್ಯೋಗಿಗಳಾಗಲಿದ್ದಾರೆ. ಇದರ ಲಾಭವನ್ನು ತುಮಕೂರಿನ ಜನರು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ
ಜಿಲ್ಲಾ ಆಸ್ಪತ್ರೆ ಆವರಣದಲ್ಲಿ 42.05 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ನೂತನ ತುರ್ತು ತೀವ್ರ ನಿಗಾ ಘಟಕ, 22.28 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ 100 ಹಾಸಿಗೆಗಳುಳ್ಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ, 69.96 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ 100 ಹಾಸಿಗೆಯ ಕ್ಯಾನ್ಸರ್ ಆಸ್ಪತ್ರೆ, 22 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ನರ್ಸಿಂಗ್ ಕಾಲೇಜು, ಹಾಸ್ಟೆಲ್ ಕಟ್ಟಡಗಳ ಲೋಕಾರ್ಪಣೆ ಹಾಗೂ 131 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗುವ 300 ಹಾಸಿಗೆಗಳ ಜಿಲ್ಲಾಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿ, 29.49 ಕೋಟಿ ರೂ. ವೆಚ್ಚದ 25 ಎಂ.ಎಲ್.ಡಿ. ಸಾಮರ್ಥ್ಯದ ಎಸ್.ಟಿ.ಪಿ. ಘಟಕಕ್ಕೆ ಚಾಲನೆ ಹಾಗೂ 50 ಕೋಟಿ ರೂ. ವೆಚ್ಚದ ಒಳಚರಂಡಿ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ಮತ್ತು ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ 169 ಕೋಟಿ ರೂ. ವೆಚ್ಚದ 2ನೇ ಹಂತದ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಲಾಯಿತು.
ಜಿಲ್ಲಾಡಳಿತ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ಆಯೋಜಿಸಿರುವ 130 ಕೋಟಿ ರೂ. ವೆಚ್ಚದ ತುಮಕೂರು ತಾಲ್ಲೂಕಿನ ಭೀಮಸಂದ್ರ ಕೆರೆಯಿಂದ ವಸಂತನರಸಾಪುರ ಕೈಗಾರಿಕಾ ಪ್ರದೇಶಕ್ಕೆ 30 ಎಂ.ಎಲ್.ಡಿ. ತೃತೀಯ ಹಂತದ ಸಂಸ್ಕರಿಸಿದ ನೀರು ಪೂರೈಕೆ ಯೋಜನೆ ಉದ್ಘಾಟಿಸಲಾಯಿತು.












Click it and Unblock the Notifications