ಹೈಕಮಾಂಡ್ ಭೇಟಿ ಬಳಿಕ ಗೃಹ ಖಾತೆ ತೊರೆಯಲು ನಿರ್ಧರಿಸಿದ್ರಾ ಪರಮೇಶ್ವರ್?
ಗೃಹ ಸಚಿವ ಜಿ.ಪರಮೇಶ್ವರ್ ಅವರು ರಾಜೀನಾಮೆ ಹೇಳಿಕೆ ನೀಡುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ. ಇದರ ಬೆನ್ನಲ್ಲೇ ಪರಮೇಶ್ವರ್ ಅವರ ಬಗ್ಗೆ ಹೊಸ ವಿಚಾರವೊಂದು ಹರಿದಾಡುತ್ತಿದೆ. ಸದ್ಯ ಗೃಹ ಖಾತೆ ನಿರ್ವಹಿಸುತ್ತಿರುವ ಅವರಿಗೆ ಬೇರೆ ಖಾತೆಯ ಮೇಲೆ ಆಸಕ್ತಿ ಇದೆ ಎಂದು ಹೇಳಲಾಗುತ್ತಿದೆ. ಈ ಕಾರಣದಿಂದ ಅವರು ಗೃಹ ಖಾತೆಯಿಂದ ಕೆಳಗಿಳಿಯುವ ಸೂಚನೆ ನೀಡಿದ್ದಾರೆ. ಈ ಕಾರಣದಿಂದಲೇ ಅವರು ರಾಜೀನಾಮೆ ನೀಡುವ ಬಗ್ಗೆ ಮಾತನಾಡಿದ್ರಾ? ಅನ್ನೋ ಅನುಮಾನ ರಾಜಕೀಯ ವಲಯದಲ್ಲಿ ವ್ಯಕ್ತವಾಗುತ್ತಿದೆ.
ಸಿಎಂ ರೇಸ್‌ನಲ್ಲಿರೋ ಜಿ.ಪರಮೇಶ್ವರ್ ಅವರ ಕನಸು ಇನ್ನೂ ಈಡೇರಿಲ್ಲ. ಆದರೂ ಕಾಂಗ್ರೆಸ್‌ನಲ್ಲಿ ದಲಿತರಿಗೆ ಅವಕಾಶ ಸಿಗಬೇಕು ಎಂದು ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ. ಈಗ ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಜೋರಾಗಿದ್ದು, ಈ ಸ್ಥಾನಗಳ ಮೇಲೂ ದಲಿತ ನಾಯಕರು ಕಣ್ಣಿಟ್ಟಿದ್ದಾರೆ. ಜಿ.ಪರಮೇಶ್ವರ್ ಅವರು ಸಿಎಂ ಕುರ್ಚಿ ರೇಸ್‌ನಲ್ಲಿದ್ದರೆ, ಕೆಎನ್ ರಾಜಣ್ಣ, ಸತೀಶ್ ಜಾರಕಿಹೊಳಿ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

ಕಾಂಗ್ರೆಸ್ ದಲಿತ ನಾಯಕರಿಗೆ ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಡುವಂತೆ ಈಗಾಗಲೇ ಹೈಕಮಾಂಡ್ ಮುಂದೆ ಬೇಡಿಕೆಯೂ ಇಟ್ಟಿದ್ದಾರೆ. ಅಲ್ಲದೆ ರಾಜ್ಯದಲ್ಲಿ ದಲಿತರ ಸಮಾವೇಶ ನಡೆಸಿ ಆ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದರು. ಈ ಸಂಬಂಧ ಕಾಂಗ್ರೆಸ್ ದಲಿತ ನಾಯಕರು ದೆಹಲಿಗೂ ತೆರಳಿ, ಹೈಕಮಾಂಡ್ ನಾಯಕರನ್ನು ಆಹ್ವಾನಿಸಿ ಬಂದಿದ್ದರು. ಮೊದಲು ಗ್ರೀನ್ ಸಿಗ್ನಲ್ ಕೊಟ್ಟಿದ್ದ ಹೈಕಮಾಂಡ್ ಸದ್ಯಕ್ಕೆ ಸಮಾವೇಶ ಬೇಡ ಎಂದು ತಡೆ ನೀಡಿದೆ.
ಇತ್ತೀಚೆಗಷ್ಟೇ ಜಿ.ಪರಮೇಶ್ವರ್ ಅವರೂ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಬಂದಿದ್ದರು. ಈ ವೇಳೆ ದಲಿತರಿಗೆ ರಾಜ್ಯ ಕಾಂಗ್ರೆಸ್‌ನಲ್ಲಿ ಉನ್ನತ ಹುದ್ದೆಗಳನ್ನು ನೀಡುವ ಬಗ್ಗೆ ಚರ್ಚೆ ನಡೆದಿದೆ. ಇದಕ್ಕೆ ಹೈಕಮಾಂಡ್ ಸ್ಪಂದಿಸಿಲ್ಲ. ಈ ಕಾರಣದಿಂದಲೇ ಪರಮೇಶ್ವರ್ ಅವರು ರಾಜೀನಾಮೆಯ ಮಾತನ್ನಾಡುವ ಮೂಲಕ ಹೈಕಮಾಂಡ್ ನಾಯಕರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿದೆ.
ಇಲ್ಲಿವರೆಗೆ ಪರಮೇಶ್ವರ್ ಅವರು ದಲಿತ ಸಿಎಂ ಆಗುವ ಕನಸಿನಲ್ಲೇ ಇದ್ದರು. ಅದೇ ವಿಶ್ವಾಸದಲ್ಲಿ ಅವರು ಕಾಂಗ್ರೆಸ್ ನೀಡಿದ್ದ ಗೃಹ ಖಾತೆಯನ್ನು ನಿಭಾಯಿಸುತ್ತಿದ್ದರು. ಆದರೆ, ದೆಹಲಿ ಭೇಟಿ ಬಳಿಕ ಪರಮೇಶ್ವರ್ ಅವರು ರಾಜೀನಾಮೆ ನೀಡುತ್ತೇನೆ ಎಂದು ವೇದಿಕೆಯಲ್ಲೇ ಹೇಳುವ ಮೂಲಕ ಗಾಳಿಸುದ್ದಿಗಳಿಗೆ ಬಲ ನೀಡಿದ್ದಾರೆ. ತಮ್ಮ ಬೇಡಿಕೆಗೆ ಹೈಕಮಾಂಡ್ ಸ್ಪಂದಿಸದ ಕಾರಣ ಈ ರೀತಿ ಬಂಡಾಯದ ಸುಳಿವು ನೀಡಿದ್ದಾರೆ ಎಂದು ಚರ್ಚೆಯಾಗುತ್ತಿದೆ.

ಹಾಗಾಗಿ ಪರಮೇಶ್ವರ್ ಅವರು ಗೃಹ ಸಚಿವ ಸ್ಥಾನದ ಬದಲು ಬೇರೆ ದೊಡ್ಡ ಸ್ಥಾನವನ್ನು ನಿರೀಕ್ಷಿಸುತ್ತಿದ್ದಾರೆ. ಸದ್ಯಕ್ಕೆ ಸಿಎಂ ಸ್ಥಾನ ಸಿಗದ್ದಕ್ಕೆ ಬೇರೆ ಯಾವುದಾದರೂ ಪ್ರಭಾವಿ ಖಾತೆ ಬಯಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಗೃಹ ಖಾತೆ ಬದಲಿಗೆ ಉಪಮುಖ್ಯಮಂತ್ರಿ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಬಳಿಕ ಸಮಯ ಬಂದಾಗ ಮುಖ್ಯಮಂತ್ರಿಯಾಗುವ ಪ್ಲ್ಯಾನ್‌ನಲ್ಲಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಆದರೆ ರಾಜೀನಾಮೆ ಹೇಳಿಕೆ ವಿಚಾರಕ್ಕೆ ಅಷ್ಟು ಮಹತ್ವ ಕೊಡುವ ಅಗತ್ಯವಿಲ್ಲ ಎಂದು ಪರಮೇಶ್ವರ್ ಹೇಳಿಕೊಂಡಿದ್ದಾರೆ.












Click it and Unblock the Notifications