ಸಿದ್ದರಾಮಯ್ಯ ವಿರುದ್ಧ FIR: ಪಾರದರ್ಶಕ, CBI ತನಿಖೆ ಬಗ್ಗೆ ಜಿ.ಪರಮೇಶ್ವರ ಹೇಳಿದ್ದೇನು?
ಬೆಂಗಳೂರು, ಸೆಪ್ಟಂಬರ್ 27: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸಿಎಂ ಸಿದ್ದರಾಮಯ್ಯ ವಿರುದ್ಧ ಮೈಸೂರು ಲೋಕಾಯುಕ್ತ ಪೊಲೀಸರು FIR ದಾಖಲಿಸಿದ್ದಾರೆ. ಕೋರ್ಟ್ ಆದೇಶದ ಮೇರೆಗೆ ಪ್ರಕರಣದ ತನಿಖೆ ಆರಂಭಿಸಲು ಎಫ್‌ಐಆರ್ ದಾಖಲಿಸಲಾಗಿದೆ. ತನಿಖೆಗೆ ನಮ್ಮ ಯಾವುದೇ ಅಭ್ಯಂತರ ಇಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದ್ದಾರೆ.
ಈ ಕುರಿತು ತುಮಕೂರಿನಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಯಾವುದೇ ತನಿಖೆಗೆ ಸಿದ್ಧ ಎಂದು ಈಗಾಗಲೇ ಮುಖ್ಯಮಂತ್ರಿಗಳೇ ಸ್ಪಷ್ಟಪಡಿಸಿದ್ದಾರೆ. ತನಿಖೆ ನಡೆಸಿದ ಬಳಿಕ ಸಲ್ಲಿಕೆಯಾಗುವ ವರದಿ ಆಧರಿಸಿ ನಿರ್ಧಾರ ಕೈಗೊಳ್ಳಲಿದ್ದೇವೆ.

ಇನ್ನೂ ಸಿಎಂ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದರೆ, ಪಾರದರ್ಶಕ ತನಿಖೆ ನಡೆಯಲು ಸಾಧ್ಯವಾ? ಎಂಬ ಪ್ರಶ್ನೆ ಉದ್ಭವವಾಗಿದೆ. ಇದಕ್ಕೆ ಉತ್ತರಿಸಿದ ಅವರು, ಈ ಪ್ರಕರಣ ಸಂಬಂಧ ಪಾರದರ್ಶಕವಾದ ತನಿಖೆ ನಡೆಯುತ್ತದೆ. ಯಾವ ನೇರವಾದ ಇಂಟರ್ ಪಿಯರೆನ್ಸ್ ಇರುವುದಿಲ್ಲ. ಲೋಕಾಯುಕ್ತ ಪೊಲೀಸರು ಸ್ವತಂತ್ರವಾಗಿ ಕೆಲಸ ಮಾಡುತ್ತಾರೆ. ಅವರು ನಮ್ಮ ಸರ್ಕಾರದ ಅಧೀನದಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ಪಾರದರ್ಶಕ ತನಿಖೆ ಆಗಲಿದೆ: ಪರಮೇಶ್ವರ
ಸರ್ಕಾರ ಲೋಕಾಯುಕ್ತರಿಗೆ ಸಂಬಳ ಕೊಡುತ್ತದೆ. ಆದರೆ ಅವರು ಸರ್ಕಾರದ ಆಡಳಿತ ಸೆಟ್‌ಅಪ್‌ನಲ್ಲಿ ಇರುವುದಿಲ್ಲ. ಆದ್ದರಿಂದ ಸರ್ಕಾರದವರು ಯಾರೂ ಸಹ ಲೋಕಾಯುಕ್ತರಿಗೆ ಸೂಚನೆ ಕೊಡಲು ಆಗುವುದಿಲ್ಲ. ಅದರು ಸ್ವಾಯತ್ತ ಸತಂತ್ರ ಸಂಸ್ಥೆಯಾಗಿದೆ. ಆದ್ದರಿಂದ ಅವರೇ ಪಾರದರ್ಶಕವಾಗಿ ತನಿಖೆ ಮಾಡುತ್ತಾರೆ ಎಂದು ಅವರು ತಿಳಿಸಿದರು.
ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುವ ಅಗತ್ಯವಿಲ್ಲ
ಇನ್ನೂ ಈ ಪ್ರಕರಣವನ್ನು ಸಿಬಿಐಗೆ ಕೊಡಬೇಕು ಎಂದು ಸ್ನೇಹಮಯಿ ಕೃಷ್ಣ ಅವರು ಹೇಳಿಕೊಂಡಿದ್ದಾರೆ. ಅವರು ಕೋರ್ಟ್‌ನಲ್ಲಿ ಹೇಳಿಕೊಂಡಿದ್ದಾರೆ. ಅದಕ್ಕೆ ನಮ್ಮದೇನು ತಕರಾರಿಲ್ಲ. ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶ ವಿವರಿಸಿದರು. ಇನ್ನೂ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ರಾಜೀನಾಮೆ ಆಗ್ರಹ ಹೇಳಿಕೆಗೆ ಸಂಬಂಧಿಸಿದಂತೆ, ರಾಜೀನಾಮೆ ಕೊಡುವ ಅಗತ್ಯ ಇಲ್ಲ ಎಂದು ಅವರು ತಿರುಗೇಟು ಕೊಟ್ಟರು.
ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು ತಾವು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಕೊಡುವುದಿಲ್ಲ ಎಂದು ಹೇಳಿದ್ದಾರೆ. ಹೀಗಿದ್ದರು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ವ್ಯಾಖ್ಯಾನಿಸುತ್ತಿದ್ದಾರೆ. ಈ ಹಿಂದೆ ಯಡಿಯೂರಪ್ಪನವರು ರಾಜೀನಾಮೆ ಕೊಟ್ಟಿದ್ದರೆ, ಅದು ಹಿಂದಿನ ವಿಚಾರ, ಈಗಿನದ್ದು ಬೇರೆ. ನಾವು ತನಿಖೆ ಎದುರಿಸುತ್ತೇವೆ. ತನಿಖೆ ಪಾರದರ್ಶಕವಾಗಿ ನಡೆಯಲಿದೆ ಎಂದು ಅವರು ಪುನರುಚ್ಚರಿಸಿದರು.
ಸಿಬಿಐ ನೇರ ತನಿಖೆಗೆ ತಡೆಗೆ ಸಚಿವರ ಸ್ಪಷ್ಟನೆ
ಸಿಬಿಐ ತನಿಖೆಗೆ ರಾಜ್ಯ ಸರ್ಕಾರದ ಅನುಮತಿ ಪಡೆಯುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈ ಹಿಂದೆ ಎರಡು ಮೂರು ಬಾರಿ ಸರ್ಕಾರ ಈ ರೀತಿ ತೀರ್ಮಾನ ಮಾಡಿತ್ತು. ದೆಹಲಿ ಪೊಲೀಸ್ ಎಸ್ಟಾಬ್ಲಿಷ್ಮೆಂಟ್ ಆಕ್ಟ್ ಅಡಿಯಲ್ಲಿ ಸಿಬಿಐನವರು ಬೇರೆ ಬೇರೆ ರಾಜ್ಯಗಳಿಗೆ ತೆರಳಿ ಅಧಿಕಾರಿ, ಜನಪ್ರತಿನಿಧಿಗಳ ಮೇಲೆ ತನಿಖೆ ಮಾಡುವ ಅವಕಾಶವಿದೆ.
ಕೆಲವು ರಾಜ್ಯದಲ್ಲಿ ಅವರು ನೇರವಾಗಿ ಬಂದು ತನಿಖೆ ಮಾಡಬಹುದು. ನಮ್ಮ ರಾಜ್ಯದಲ್ಲೂ ಹಾಗೆಯೇ ಇತ್ತು. ಆದರೆ ನಾವು ಈ ರೀತಿಯ ನೇರವಾಗಿ ಬಂದು ತನಿಖೆ ಮಾಡುವುದನ್ನು ಬೇಡ ಎಂದಿದ್ದೇವೆ. ಹೊಸ ನಿಯಮದ ಪ್ರಕಾರ, ನಮ್ಮ ಅನುಮತಿ ಪಡೆದುಕೊಂಡು ತನಿಖೆ ಮಾಡಬೇಕು. ರಾಜ್ಯ ಸಂಪುಟದಲ್ಲಿ ನಿರ್ಧಾರ ಮಾಡಿ ಆದೇಶ ಹೊರಡಿಸಿದ ಬಳಿಕ ತನಿಖೆ ನಡೆಸಬೇಕು ಎಂದು ಅವರು ಸ್ಪಷ್ಟನೆ ನೀಡಿದರು.
ಸಿಬಿಐ ನೇರ ತನಿಖೆಗೆ ನಿರ್ಬಂಧಿಸಿ ಗುರುವಾರ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಿ ಇಂದು ಆದೇಶ ಹೊರಡಿಸಿದ್ದೇವೆ. ಮುಡಾ ಪ್ರಕರಣದಲ್ಲಿ ಅನುಮತಿ ಕೊಡುವುದಾದರೆ ಸಿಬಿಐಗೆ ಕೊಡಬೇಕಾಗುತ್ತದೆ. ನಾವು ಕೊಡುವುದೇ ಇಲ್ಲ ಎಂದು ಹೇಳಿಲ್ಲ ಎಂದರು.












Click it and Unblock the Notifications