ಡಿಮ್ಹಾನ್ಸ್: ಏ.1ರಿಂದ ಉನ್ನತೀಕರಿಸಿದ ಆಸ್ಪತ್ರೆಯಾಗಿ ಕೆಲಸ ನಿರ್ವಹಿಸಲು ಹೈಕೋರ್ಟ್ ಆದೇಶ
ಬೆಂಗಳೂರು, ಮಾ.7. ಧಾರವಾಡ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಗೆ (ಡಿಮಾನ್ಸ್)ಗೆ ಎಲ್ಲ ಅಗತ್ಯ ಸೌಲಭ್ಯ ಕಲ್ಪಿಸಿ 2022ರ ಏ.1ರಿಂದ ಉನ್ನತೀಕರಿಸಿದ ಕೇಂದ್ರವಾಗಿ ಕಾರ್ಯನಿರ್ವಹಿಸುವಂತೆ ಮಾಡಬೇಕು ಎಂದು ಹೈಕೋರ್ಟ್ ಸೋಮವಾರ ಸರ್ಕಾರಕ್ಕೆ ಆದೇಶಿಸಿದೆ.
ಇಲ್ಲವಾದರೆ ಮುಂದಿನ ವಿಚಾರಣೆ ವೇಳೆಗೆ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಖುದ್ದು ಹಾಜರಾಗಬೇಕಾಗುತ್ತದೆ ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.
ಡಿಮಾನ್ಸ್ ಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸದ ವಿಚಾರವಾಗಿ ಹೈಕೋರ್ಟ್ ಸ್ವಯಂಪ್ರೇರಿತವಾಗಿ 1996ರಲ್ಲಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಬಳಿಕ ಆಸ್ಪತ್ರೆಯನ್ನು ಮೇಲ್ದರ್ಗೇರಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಅಮೇರಿಕಾದಿಂದ ಎಂಆರ್ ಐ ಯಂತ್ರ ಆಮದು ಮಾಡಿಕೊಳ್ಳಲಾಗಿದ್ದು, ಅದನ್ನು ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ಆ ಸಂಬಂಧಿತ ಕಾಮಗಾರಿಯನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುತ್ತದೆ ಎಂಬ ಸರ್ಕಾರದ ಹೇಳಿಕೆಯನ್ನು ದಾಖಲಿಸಿಕೊಂಡಿತು.
ಜೊತೆಗೆ ನ್ಯಾಯಪೀಠ, ಎಂಆರ್‌ಐ ಯಂತ್ರ ಅಳವಡಿಕೆ ಕಾರ್ಯವನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಿ ಡಿಮಾನ್ಸ್ ಅನ್ನು ಉನ್ನತ ಮಾನಸಿಕ ಆರೋಗ್ಯ ವಿಜ್ಞಾನಗಳ ಆಸ್ಪತ್ರೆಯಾಗಿ ಮೇಲ್ದರ್ಗೇರಿಸಿ ಏಪ್ರಿಲ್ 1ರಿಂದ ಕಾರ್ಯ ನಿರ್ವಹಿಸುವಂತೆ ಮಾಡಬೇಕು ಎಂದು ಆದೇಶಿಸಿತು.
ಸರ್ಕಾರದ ವಿರುದ್ಧ ಬೇಸರ:
ಇದೇ ವೇಳೆ ನ್ಯಾಯಪೀಠ ಸರ್ಕಾರ ಕಾರ್ಯವೈಖರಿ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿ, ಎಲ್ಲವನ್ನೂ ಕೋರ್ಟ್ ಹೇಳಬೇಕೆ, ಇಲ್ಲವಾದರೆ ಏನೂ ಕೆಲಸವೇ ಮಾಡುವುದಿಲ್ಲವೇ ಎಂದು ತರಾಟೆಗೆ ತೆಗೆದುಕೊಂಡಿತು.
ಇಲ್ಲವಾದರೆ ಏಪ್ರಿಲ್ 5ರಂದು ವಿಚಾರಣೆಗೆ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಜರಾಗಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿ ವಿಚಾರಣೆಯನ್ನು ಮುಂದೂಡಿತು.
ಜೈಲಿಗೆ ಕಳುಹಿಸುವುದಾಗಿ ಎಚ್ಚರಿಕೆ:
ಕಳೆದ ವಿಚಾರಣೆ ವೇಳೆ ಧಾರವಾಡ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸದ ಹಾಗೂ ನ್ಯಾಯಾಲಯದ ಆದೇಶದ ಹೊರತಾಗಿಯೂ ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳು ವಿಚಾರಣೆಗೆ ಹಾಜರಾಗದ್ದಕ್ಕೆ ಹೈಕೋರ್ಟ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.
ಅಧಿಕಾರಿ ವಿಚಾರಣೆಗೆ ಹಾಜರಿರಲಿಲ್ಲ. ಇದಕ್ಕೆ ಸಮಜಾಯಿಷಿ ನೀಡಿದ ಸರ್ಕಾರದ ಪರ ವಕೀಲರು ಅಧಿಕಾರಿ ಕ್ಯಾಬಿನೆಟ್ ಮೀಟಿಂಗ್ ಗೆ ತೆರಳಿರುವುದಾಗಿ ತಿಳಿಸಿದರು.
ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಅಧಿಕಾರಿಗಳು ನ್ಯಾಯಾಲಯದ ಆದೇಶದಂತೆ ಕೆಲಸವನ್ನೂ ಮಾಡಿಲ್ಲ. ಇತ್ತ ವಿವರಣೆ ಕೇಳಿದರೆ ಉತ್ತರಿಸಲು ಕೋರ್ಟ್ ಗೂ ಬಂದಿಲ್ಲ. ಹಿಂದಿನ ವಿಚಾರಣೆ ವೇಳೆ ಖುದ್ದು ಹಾಜರಿರುವಂತೆ ಸೂಚಿಸಿದರೂ ಅಧಿಕಾರಿ ವಿಚಾರಣೆಗೆ ಹಾಜರಾಗಿಲ್ಲವೆಂದರೆ ಏನರ್ಥ. ಹೀಗೆ ನಡೆದುಕೊಂಡರೆ ಅಧಿಕಾರಿಯನ್ನು ಜೈಲಿಗೆ ಕಳುಹಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತು. ಅಲ್ಲದೇ, ವಿಚಾರಣೆಗೆ ಹಾಜರಾಗದಿದ್ದರೆ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚಿಸಬೇಕಾಗುತ್ತದೆ ಎಂದಿತು.
2020ರ ಮಾರ್ಚ್ 5ರಂದು ಸರ್ಕಾರಕ್ಕೆ ನಿರ್ದೇಶಿಸಿದ್ದ ಹೈಕೋರ್ಟ್, ಮೂರು ತಿಂಗಳಲ್ಲಿ ಡಿಮ್ಹಾನ್ಸ್ ಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಬೇಕು. ಎಂಆರ್ ಐ ಸ್ಯಾನಿಂಗ್ ಮಷೀನ್ ಖರೀದಿಸಬೇಕು, ವೈದ್ಯಕೀಯ ಅಧೀಕ್ಷಕರನ್ನು ನೇಮಕ ಮಾಡಬೇಕು ಎಂದಿತ್ತು. ಆದರೆ ಸರ್ಕಾರ ಆದೇಶ ಪಾಲಿಸದ ಹಿನ್ನೆಲೆಯಲ್ಲಿ ಕಳೆದ ಅಕ್ಟೋಬರ್ 5ರಂದು ಸರ್ಕಾರವನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದ ಪೀಠ, ನ್ಯಾಯಾಲಯದ ಆದೇಶ ಪಾಲಿಸದೇ ಇರುವುದಕ್ಕ ಖುದ್ದು ಪ್ರಧಾನ ಕಾರ್ಯದರ್ಶಿ ಹಾಜರಿದ್ದು ವಿವರಣೆ ನೀಡಬೇಕು ಎಂದು ನಿರ್ದೇಶಿಸಿತ್ತು.












Click it and Unblock the Notifications