ರಾಜ್ಯದಾದ್ಯಂತ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ: ನಷ್ಟದ ಭೀತಿಯಲ್ಲಿ ಖಾಸಗಿ ಬಸ್ ಮಾಲೀಕರು- ಗ್ರೌಂಡ್ ರಿಪೋರ್ಟ್
ಬೆಂಗಳೂರು, ಜೂನ್ 02: ರಾಜ್ಯದಾದ್ಯಂತ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಗ್ಯಾರಂಟಿಯನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನೀಡಿದೆ. ಇಂದು ನಡೆಯಲಿರುವ ಕ್ಯಾಬಿನೆಟ್ ಸಭೆಯಲ್ಲಿ ಈ ತೀರ್ಮಾನವನ್ನು ತೆಗೆದುಕೊಳ್ಳುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಇರುವ ಖಾಸಗಿ ಬಸ್ ಮಾಲೀಕರು ನಷ್ಟದ ಭೀತಿಯನ್ನು ಎದುರಿಸುತ್ತಿದ್ದಾರೆ.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಒದಗಿಸುವ ಯೋಜನೆಯನ್ನು ತಮಗೂ ವಿಸ್ತರಿಸಬೇಕೆಂದು ಕರ್ನಾಟಕದ ಖಾಸಗಿ ಬಸ್ ಮಾಲೀಕರು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯಾವಾಗ ಜಾರಿಯಾಗಲಿದೆ ಎಂಬ ಬಗ್ಗೆ ಕರ್ನಾಟಕ ಸರ್ಕಾರ ಇಂದು ನಿರ್ಧಾರ ಕೈಗೊಳ್ಳವುದು ಬಹುತೇಕ ಖಚಿತವಾಗಿದೆ.

ರಾಜ್ಯ ಸರ್ಕಾರವು ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಜಾರಿಗೊಳಿಸಿದರೆ, ಖಾಸಗಿ ಬಸ್‌ಗಳು ಅಪಾರ ನಷ್ಟವನ್ನು ಎದುರಿಸಬೇಕಾಗುತ್ತದೆ. ಏಕೆಂದರೆ ಮಹಿಳೆಯರು ಖಾಸಗಿ ಬಸ್‌ಗಳಲ್ಲಿ ಹಣ ನೀಡುವ ಬದಲು ಸರ್ಕಾರಿ ಬಸ್‌ಗಳಿಗೆ ಆದ್ಯತೆ ನೀಡುತ್ತಾರೆ ಎಂಬುದು ಮಾಲೀಕರ ಆತಂಕವಾಗಿದೆ.
ಈಗ ಸರ್ಕಾರಿ ಬಸ್‌ಗಳಿಗೆ ತಮ್ಮ ಪ್ಯಾಸೆಂಜರ್‌ಗಳನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳಲು ಸರ್ಕಾರದ ಪ್ಯಾಕೇಜ್‌ಗೆ ಒತ್ತಾಯಿಸುತ್ತಿದ್ದಾರೆ.
ಸರ್ಕಾರ ಈ ಯೋಜನೆ ಜಾರಿಗೊಳಿಸಿದ ಬಳಿಕ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದೆಂಬ ಕಾರಣಕ್ಕೆ ಯಾವುದೇ ಮಹಿಳೆಯರು ತಮ್ಮ ಸೇವೆಗೆ ಆದ್ಯತೆ ನೀಡುವುದಿಲ್ಲ ಎಂಬುದು ಖಾಸಗಿ ಬಸ್‌ಗಳ ಮಾಲೀಕರ ಅಭಿಪ್ರಾಯವಾಗಿದೆ.

ಪರಿಹಾರ ನೀಡುವ ಮೂಲಕ ಖಾಸಗಿಯವರಿಗೂ ಯೋಜನೆ ವಿಸ್ತರಿಸಬೇಕು ಅಥವಾ ಖಾಸಗಿ ಬಸ್‌ಗಳನ್ನು ತೆರಿಗೆ ಮುಕ್ತಗೊಳಿಸುವ ಮೂಲಕ ವಿನಾಯಿತಿ ನೀಡಬೇಕು ಎಂದು ಖಾಸಗಿ ಬಸ್ ಮಾಲೀಕರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಬೇಡಿಕೆಗಳನ್ನು ಅಂಗೀಕರಿಸದಿದ್ದಲ್ಲಿ ವಿಧಾನಸೌಧದ ಮುಂದೆ ವಾಹನಗಳನ್ನು ಬಿಟ್ಟು ಬೃಹತ್ ಪ್ರತಿಭಟನೆ ನಡೆಸುವುದಾಗಿ ಬೆದರಿಕೆ ಹಾಕಿದ್ದಾರೆ.
ಏತನ್ಮಧ್ಯೆ, ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ ಎಲ್ಲಾ ಐದು 'ಖಾತರಿ'ಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಮಹತ್ವದ ಸಚಿವ ಸಂಪುಟ ಸಭೆಯನ್ನು ಕರೆದಿದ್ದಾರೆ. ಸಂಪುಟ ಸಭೆಗೂ ಮುನ್ನ ಸಿಎಂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪ್ರಸ್ತಾವನೆಗಳಿಗೆ ಅಂತಿಮ ಸ್ಪರ್ಶ ನೀಡಲಿದ್ದಾರೆ.












Click it and Unblock the Notifications