ಬುಧವಾರ ಅಕ್ಷತಾ ರಕ್ಷಿಸುವ ಕಾರ್ಯ ನಡೆದದ್ದು ಹೇಗೆ?
ಬಿಜಾಪುರ, ಜೂ. 18 : ಮಗುವನ್ನು ರಕ್ಷಿಸಲು ಸುರಂಗ ತೋಡಲು ಆರಂಭಿಸಿದ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿ. ಇನ್ನೂ ಮೂರರಿಂದ ನಾಲ್ಕು ಗಂಟೆಗಳ ಕಾರ್ಯಾಚರಣೆ ಸಾಧ್ಯತೆ. ಮಗುವಿರುವ ಐದು ಅಡಿಗಳ ಕೆಳಗೆ ಕಬ್ಬಿಣದ ಹಲಗೆ ಹಾಕಲು ನಿರ್ಧಾರ. ರೋಬೋ ಮೂಲಕ ಮಗುವಿನ ರಕ್ಷಣೆ ಮಾಡುವ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ನಿರ್ಧಾರ.
5.30 : ನಾಗಠಾಣಾದಲ್ಲಿ ಬಾಲಕಿ ಅಕ್ಷತಾ ರಕ್ಷಿಸುವ ಕಾರ್ಯಾಚರಣೆಗೆ ಮಳೆ ಅಡ್ಡಿ. ರೋಬೋಟ್ ಅನ್ನು ಬೋರ್ ವೆಲ್ ಗೆ ಇಳಿಸುವ ಕಾರ್ಯಾಚರಣೆಗೆ ಮತ್ತಷ್ಟು ವಿಳಂಬ ಸಾಧ್ಯತೆ.
4 ಗಂಟೆ : ಮಗುವಿನ ರಕ್ಷಣೆಗಾಗಿ ಆಗಮಿಸಿದ ಮಣಿಕಂಠನ್ ನೇತೃತ್ವದ ರೋಬೋ ಟೀಮ್ ತನ್ನ ಕಾರ್ಯಾಚರಣೆಯನ್ನು ಆರಂಭಿಸಿದೆ. ರೋಬೋ ಟೀಮ್ ಸದಸ್ಯರು ಕೆಲಸವನ್ನು ಆರಂಭಿಸಿದ್ದು, ಅಕ್ಷತಾ ಬದುಕಿ ಬರಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.
3 ಗಂಟೆ : ನಾಗಾಠಾಣದಲ್ಲಿ ಕೊಳವೆ ಬಾವಿಯೊಳಗೆ ಬಿದ್ದಿರುವ ಮಗುವಿನ ರಕ್ಷಣೆಗಾಗಿ ಮಣಿಕಂಠನ್ ನೇತೃತ್ವದ ರೋಬೋ ತಂಡ ಆಗಮಿಸಿದೆ. ಸ್ಥಳದಲ್ಲಿ ಮಳೆಬರುವ ವಾತಾವರಣ ನಿರ್ಮಾಣವಾಗಿದ್ದು, ಕೊಳವೆ ಬಾವಿಯೊಳಗೆ ನೀರು ಹೋಗದಂತೆ ಟಾರ್ಪಲ್ ಗಳನ್ನು ಹಾಕಲಾಗುತ್ತಿದೆ. ಸುರಂಗ ಮಾರ್ಗ ಕೊರೆಯವ ಕಾಮಗಾರಿ ಮುಗಿಯುತ್ತಾ ಬಂದಿದೆ.
2 ಗಂಟೆ : ಕೊಳವೆ ಬಾವಿಯಲ್ಲಿ ಮಗು 29 ಅಡಿಯಲ್ಲಿ ಪತ್ತೆಯಾದರು ಮಗುವಿನ ಚಲನವಲನದ ಬಗ್ಗೆ ಯಾವುದೇ ಮಾಹಿತಿ ದೊರಕುತ್ತಿಲ್ಲ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಮಗುವಿನ ಮೇಲೆ ಮಣ್ಣು ಬಿದ್ದಿರುವ ಸಾಧ್ಯತೆ ಇದೆ, ಆದ್ದರಿಂದ ಚಲನವಲನದ ಬಗ್ಗೆ ಮಾಹಿತಿ ಸಿಗುತ್ತಿಲ್ಲ ಎಂದು ಹೇಳಿದ್ದಾರೆ.
ಬಾವಿಯೊಳಕ್ಕೆ ಆಮ್ಲಜನಕವನ್ನು ನಿರಂತರವಾಗಿ ಪೂರೈಕೆ ಮಾಡಲಾಗುತ್ತಿದೆ. ಚೆನ್ನೈನ ರೋಬೋಟ್ ರಕ್ಷಣಾ ತಂಡ ಮೂರು ಗಂಟೆಯ ವೇಳೆಗೆ ಸ್ಥಳಕ್ಕೆ ಆಗಮಿಸುವ ನಿರೀಕ್ಷೆ ಇದೆ. ಸುರಂಗ ಕೊರೆತಯುವ ಕಾಮಗಾರಿ ಪ್ರಗತಿಯಲ್ಲಿದ್ದು, ಬೋರ್ ವೆಲ್ ಗೆ 8 ಅಡಿಗಳಷ್ಟು ಮಾತ್ರ ಬಾಕಿ ಇದೆ.
12.30 : ಕೊಳವೆ ಬಾವಿಯಲ್ಲಿ ಬಿದ್ದಿರುವ ಮಗು 29 ಅಡಿ ಆಳದಲ್ಲಿದೆ ಎಂದು ತಿಳಿದುಬಂದಿದೆ. ಪುಣೆಯಿಂದ ಆಗಮಿಸಿರುವ ವಿಪತ್ತು ನಿರ್ವಹಣಾ ತಂಡ ಕ್ಯಾಮರಾವನ್ನು ಕೊಳವೆ ಬಾವಿಯೊಳಕ್ಕೆ ಬಿಟ್ಟು ಮಗು ಎಷ್ಟು ಆಳದಲ್ಲಿ ಸಿಲುಕಿದೆ ಎಂದು ಪತ್ತೆ ಹಚ್ಚಿದ್ದಾರೆ.
29 ಅಡಿ ಆಳದಲ್ಲಿ ಮಗು ಸಿಲುಕಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಮಗುವಿನ ಚಲನವಲನಗಳ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಮೀಟರ್ ಲೋಕೇಟಿಂಗ್ ಮೂಲಕ ಮಗುವಿರುವ ಸ್ಥಳವನ್ನು ಸಿಬ್ಬಂದಿಗಳು ಪತ್ತೆ ಹಚ್ಚಿದ್ದು, ರಕ್ಷಣಾ ಕಾರ್ಯಾಚರಣೆ ಬಗ್ಗೆ ಯೋಜನೆ ರೂಪಿಸುತ್ತಿದ್ದಾರೆ. [ಬಾವಿ ಕೊರೆತ : ಸುಪ್ರೀಂಕೋರ್ಟ್ ಮಾರ್ಗದರ್ಶಿ ಸೂತ್ರಗಳು]

10.30 : ಬಾಲಕಿಯನ್ನು ರಕ್ಷಿಸಲು ಚೆನ್ನೈನಿಂದ ಮಣಿಕಂಠನ್ ನೇತೃತ್ವದ ರೋಬೋ ತಂಡ ಬೆಂಗಳೂರಿಗೆ ಆಗಮಿಸಿದೆ. ಎಚ್ಎಎಲ್ ವಿಮಾನ ನಿಲ್ದಾಣದಿಂದ ತಂಡ ಬಿಜಾಪುರಕ್ಕೆ ತಲುಪಲಿದೆ. ಸುರಂಗ ಕೊರೆಯುವ ಕಾಮಗಾರಿಯೂ ಪ್ರಗತಿಯಲ್ಲಿದ್ದು, 3-4ಗಂಟೆಗಳಲ್ಲಿ ರಕ್ಷಣಾ ಪಡೆ ಅಕ್ಷತಾಳ ಬಳಿ ತೆರಳುವ ಸಾಧ್ಯತೆ ಇದೆ.
ಸಮಯ 9.30 : ನನ್ನ ಮಗಳು ಬದುಕಿ ಬರುತ್ತಾಳೆ ಎಂಬ ನಂಬಿಕೆ ನನಗಿದೆ. ಅಕ್ಷತಾ ಸುರಕ್ಷಿತವಾಗಿ ಬದುಕಿ ಬರಲಿ ಎಂದು ಎಲ್ಲರೂ ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದು ಅಕ್ಷತಾ ತಂದೆ ಹನುಮಂತ ಪಾಟೀಲ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಸಮಯ 8.30 : ಕೊಳವೆ ಬಾವಿಗೆ ಬಿದ್ದ ಬಾಲಕಿಯನ್ನು ರಕ್ಷಿಸುವ ಕಾರ್ಯಾಚರಣೆ ಮುಂದುವರೆದಿದೆ. ಕಲ್ಲು ಬಂಡೆ ಅಡ್ಡ ಬಂದಿದ್ದರಿಂದ ಕಾರ್ಯಾಚರಣೆಗೆ ಸ್ವಲ್ಪ ಹಿನ್ನಡೆ ಉಂಟಾಗಿದೆ. ಈಗಾಗಲೇ 24 ಅಡಿಗಳಷ್ಟು ಸುರಂಗ ಕೊರೆದಿದ್ದು ಇನ್ನು 8 ಅಡಿಗಳಷ್ಟು ಕೊರೆಯಬೇಕಾಗಿದೆ.
ಪುಣೆಯಿಂದ ಮತ್ತು ಹಟ್ಟಿ ಚಿನ್ನದ ಗಣಿಯಿಂದ ವಿಪತ್ತು ನಿರ್ವಹಣಾ ತಂಡ ಸ್ಥಳಕ್ಕೆ ಆಗಮಿಸಿದ್ದು, ಕಾರ್ಯಚರಣೆಗೆ ಸಹಕರಿಸುತ್ತಿದ್ದಾರೆ. ಕೊಳವೆ ಮೂಲಕ ಬಾವಿಯೊಳಗೆ ಆಮ್ಲಜನಕ ನೀಡಲಾಗುತ್ತಿದ್ದು, ನಾಲ್ಕು ವರ್ಷದ ಬಾಲಕಿ ಅಕ್ಷತಾಳ ಉಸಿರಾಟಕ್ಕೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ.
ಹಿಂದಿನ ಸುದ್ದಿ : ಬಿಜಾಪುರ ತಾಲೂಕಿನ ನಾಗಾಠಾಣಾ ಬಳಿಯ ತೋಟದಲ್ಲಿ ಕೊರೆಸಿದ್ದ ಕೊಳೆವೆ ಬಾವಿಗೆ ಮಂಗಳವಾರ ಸಂಜೆ ನಾಲ್ಕು ವರ್ಷದ ಬಾಲಕಿಯೊಬ್ಬಳು ಬಿದ್ದಿದ್ದಾಳೆ. ಬಾಲಕಿಯನ್ನು ರಕ್ಷಿಸುವ ಕಾರ್ಯಾಚರಣೆ ನಡೆಯುತ್ತಿದ್ದು, ಬಾವಿಯೊಳಗೆ ಆಮ್ಲಜನಕ ಪೂರೈಕೆ ಮಾಡಲಾಗುತ್ತಿದೆ.
ಬಾವಿಗೆ ಬಿದ್ದ ಬಾಲಕಿಯನ್ನು ಅಕ್ಷತಾ ಹಣಮಂತ ಪಾಟೀಲ (4) ಎಂದು ಗುರುತಿಸಲಾಗಿದೆ. ಮಂಗಳವಾರ ಸಂಜೆ ಬಾಲಕಿ ಆಟವಾಡುವಾಗ ನಾಯಿ ಅವಳನ್ನು ಅಟ್ಟಿಸಿಕೊಂಡು ಬಂದಿದೆ. ಅದರಿಂದ ತಪ್ಪಿಸಿಕೊಳ್ಳಲು ಓಡುವಾಗ ತೆರೆದ ಕೊಳವೆ ಬಾವಿಗೆ ಬಿದ್ದಿದ್ದಾಳೆ ಎಂದು ತಿಳಿದುಬಂದಿದೆ. ಬಾಲಕಿ ಸುಮಾರು 50 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ಷತಾ ಸಂಜೆ ಸುಮಾರು 7 ಗಂಟೆಯ ವೇಳೆಗೆ ಬಾವಿಯೊಳಗೆ ಬಿದ್ದಿದ್ದಾಳೆ. ಆಕೆ ತಲೆಕೆಳಗಾಗಿ ಕೊಳವೆ ಬಾವಿಯೊಳಗೆ ಸಿಲುಕಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.
ಜೆಸಿಬಿ ಸಹಾಯದಿಂದ ಬೋರ್ ವೆಲ್ ಪಕ್ಕದಲ್ಲಿರುವ ಮಣ್ಣನ್ನು ತೆಗೆಯಲಾಗುತ್ತಿದ್ದು, ಕಲ್ಲು ಬಂಡೆಗಳು ದೊರಕಿರುವುದರಿಂದ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ ಎಂದು ಬಿಜಾಪುರ ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ಹೇಳಿದ್ದಾರೆ.
ಕತ್ತಲು ಆವರಿಸಿದರೂ ಲೈಟ್‌ಗಳ ಸಹಾಯದಿಂದ ತಡ ರಾತ್ರಿಯೂ ರಕ್ಷಣಾ ಕಾರ್ಯಚರಣೆ ಮುಂದುವರೆಸಲಾಗಿದೆ. ತಮಿಳುನಾಡಿನ ಮಧುರೈನಿಂದ ತಜ್ಞರ ತಂಡ ಬಿಜಾಪುರಕ್ಕೆ ಆಗಮಿಸುತ್ತಿದ್ದು, ಬೆಳಗ್ಗೆ 11 ಗಂಟೆ ವೇಳೆಗೆ ಅವರು ಘಟನಾ ಸ್ಥಳ ತಲುಪುವ ನಿರೀಕ್ಷೆ ಇದೆ. ಅಕ್ಷತಾ ಮೂಲತಃ ಜೇವರ್ಗಿ ತಾಲೂಕಿನವಳಾಗಿದ್ದು, ತಂದೆ-ತಾಯಿ ಕೂಲಿಗಾಗಿ ಆಗಮಿಸಿ ತೋಟದ ಮನೆಯಲ್ಲಿ ನೆಲೆಸಿದ್ದರು.
ಪ್ರಮುಖ ದುರಂತಗಳು : ಕೊಳವೆ ಬಾವಿಗೆ ಮಕ್ಕಳು ಬೀಳುವ ದುರಂತಗಳು ಪದೇ ಪದೇ ನಡೆಯುತ್ತಿವೆ 2012ರ ಜೂನ್ 24ರಂದು ಹರ್ಯಾಣದ ಗುರುಗಾಂವ್ ನಲ್ಲಿ ಕೊಳೆವೆ ಬಾವಿಗೆ ಬಿದ್ದ ಬಾಲಕಿಯನ್ನು ಐದು ದಿನಗಳ ಕಾರ್ಯಾಚರಣೆ ಬಳಿಕ ರಕ್ಷಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಗು ಆಸ್ಪತ್ರೆಯಲ್ಲಿ ಮೃತಪಟ್ಟಿತ್ತು. [ತಮಿಳುನಾಡಿನಲ್ಲಿ ಕೊಳವೆ ಬಾವಿಗೆ ಬಿದ್ದ ಬಾಲಕಿ]
2013ರ ಸೆಪ್ಟೆಂಬರ್ 28ರಂದು ತಮಿಳುನಾಡಿನಲ್ಲಿ 4 ವರ್ಷದ ದೇವಿ ಎಂಬ ಬಾಲಕಿ ಕೊಳವೆ ಬಾವಿಗೆ ಬಿದ್ದಿತ್ತು. ಕಾರ್ಯಾಚರಣೆ ಬಳಿಕ ಮಗುವನ್ನು ರಕ್ಷಿಸಲಾಗಿತ್ತು.












Click it and Unblock the Notifications