ವಿಜಯೇಂದ್ರ ಬೆಂಬಲಿಗರಿಂದ ಡಾ. ಕೆ. ಸುಧಾಕರ್‌ಗೆ ವಲಸಿಗ ಪಟ್ಟ!
ಬೆಂಗಳೂರು, ಜನವರಿ 30: ಕರ್ನಾಟಕ ಬಿಜೆಪಿಯಲ್ಲಿ ನಾಯಕರ ವಾಕ್ಸಮರಕ್ಕೆ ತೆರೆ ಬಿದ್ದಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ವಿರುದ್ಧ ಮಾತನಾಡಿದ್ದ ಚಿಕ್ಕಬಳ್ಳಾಪುರ ಸಂಸದ ಡಾ. ಕೆ. ಸುಧಾಕರ್‌ಗೆ ವಿಜಯೇಂದ್ರ ಬೆಂಬಲಿಗರು ವಲಸಿಗ ಪಟ್ಟ ಕಟ್ಟಿದ್ದಾರೆ. ಈ ಮೂಲಕ ಕರ್ನಾಟಕ ಬಿಜೆಪಿ ಬಣ ರಾಜಕೀಯವನ್ನು ಮತ್ತಷ್ಟು ಮುಂದುವರೆಸಿದ್ದಾರೆ.
ಚಿಕ್ಕಬಳ್ಳಾಪುರ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಸಂದೀಪ್ ರೆಡ್ಡಿ ನೇಮಕ ಮಾಡಿರುವುದಕ್ಕೆ ಸಂಸದ ಡಾ. ಕೆ. ಸುಧಾಕರ್ ಅಸಮಾಧಾನಗೊಂಡಿದ್ದರು. ಬುಧವಾರ ಅವರು ಬಿ. ವೈ. ವಿಜಯೇಂದ್ರ ವಿರುದ್ಧ ಟೀಕೆಗಳನ್ನು ಮಾಡಿದ್ದರು. "ಕೋರ್ ಕಮಿಟಿ ಸಭೆಯಲ್ಲಿ ಜಿಲ್ಲಾಧ್ಯಕ್ಷರ ನೇಮಕದ ಕುರಿತು ಚರ್ಚಿಸಿಲ್ಲ, ಈ ಕುರಿತು ಚರ್ಚಿಸಲು ಫೋನ್ ಮಾಡಿದರೆ ಕರೆ ಸ್ವೀಕಾರ ಮಾಡಿಲ್ಲ" ಎಂದು ಆರೋಪಿಸಿದ್ದರು.

ವಲಸಿಗರ ಪಟ್ಟ: ಹಾಸನದ ಮಾಜಿ ಶಾಸಕ ಪ್ರೀತಂ ಗೌಡ ಗುರುವಾರ ಡಾ. ಕೆ. ಸುಧಾಕರ್ ಹೇಳಿಕೆಗಳಿಗೆ ಬಿ. ವೈ. ವಿಜಯೇಂದ್ರ ಬಣದ ಮೂಲಕ ತಿರುಗೇಟು ನೀಡಿದ್ದಾರೆ. ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿರುವ ಪ್ರೀತಂ ಗೌಡ ಅವರು, "ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ? ಎಂಬುದು ಪಕ್ಷದ ಕಾರ್ಯಕರ್ತರಿಗೆ ತಿಳಿದಿದೆ. 4-5 ವರ್ಷಗಳ ಹಿಂದೆ ಪಕ್ಷ ಸೇರಿದವರಿಗೆ ಅಲ್ಲ" ಎಂದು ಹೇಳುವ ಮೂಲಕ ಸುಧಾಕರ್ ವಲಸಿಗರು ಎಂದು ಪರೋಕ್ಷವಾಗಿ ಹೇಳಿದರು.
"ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬುದು ಅವರಿಗೆ ತಿಳಿದಿಲ್ಲ ಎಂದು ನಿನ್ನೆ ಸುಧಾಕರ್ ಮಾತನಾಡಿದ್ದನ್ನು ನೋಡಿದ ಮೇಲೆ ತಿಳಿಯಿತು. ಬಿಜೆಪಿಯಲ್ಲಿ ಜಿಪಿಎ ವ್ಯವಸ್ಥೆ ಇಲ್ಲ" ಎಂದು ಪ್ರೀತಂ ಗೌಡ ತಿಳಿಸಿದರು.
"ಅವರು ಸಂಸದರಾದ ಕಾರಣಕ್ಕೆ ಇಡೀ ಚಿಕ್ಕಬಳ್ಳಾಪುರವನ್ನು ಡಾ. ಕೆ. ಸುಧಾಕರ್‌ಗೆ ಬರೆದು ಕೊಡಲು ಆಗುವುದಿಲ್ಲ. ಅವರು ನಮ್ಮ ಪಕ್ಷಕ್ಕೆ ಬಂದು 5 ವರ್ಷ ಮಾತ್ರ ಆಗಿದೆ. ತಾವು ಹೇಳಿದಂತೆ ಕೇಳಬೇಕು ಎಂಬ ಮನಸ್ಥಿತಿಯಿಂದ ಅವರು ಹೊರಬರಬೇಕು" ಎಂದು ಡಾ. ಕೆ. ಸುಧಾಕರ್‌ಗೆ ಸಲಹೆ ಕೊಟ್ಟರು.
"ಡಾ. ಕೆ. ಸುಧಾಕರ್ ಅವರಿಗೆ ಪಕ್ಷ 5 ವರ್ಷಗಳಲ್ಲಿ ಮೂರು ಬಾರಿ ಬಿಫಾರಂ ನೀಡಿದೆ. 4 ವರ್ಷ ಅವರನ್ನು ಸಚಿವರನ್ನಾಗಿ ಮಾಡಲಾಗಿದೆ. ಸಿನಿಮಾದ ಸಂಬಂಧ ಇರುವವರು ಎಲ್ಲವೂ ಬೇಗ ಆಗಬೇಕು ಎಂದು ಬಯಸುತ್ತಾರೆ" ಎಂದು ವಾಗ್ದಾಳಿ ನಡೆಸಿದರು.
"ಸುಧಾಕರ್ ಶಾಸಕರಾಗಿ, ಸಚಿವರಾಗಿ, ಸಂಸದರಾಗಿದ್ದಾರೆ. ಅವರಿಗೆ ರಾಜ್ಯಾಧ್ಯಕ್ಷರಾಗಬೇಕು ಎಂಬ ಲೆಕ್ಕಾಚಾರ ಇರಬಹುದು, ನನಗೆ ಗೊತ್ತಿಲ್ಲ. ಅವರು ವಿಯಜೇಂದ್ರ ಶಕ್ತಿ ಬಗ್ಗೆ ಮಾತನಾಡುವುದು ಬೇಡ. ಮಾತಿನ ರೀತಿಯನ್ನು ಅವರು ಬದಲಾಯಿಸಿಕೊಳ್ಳಲಿ" ಎಂದು ಸಲಹೆ ನೀಡಿದರು.
ಡಾ. ಕೆ. ಸುಧಾಕರ್ ಮಾತನಾಡಿ, "ನನ್ನ ತಾಳ್ಮೆ ಮುಗಿಯಿತು, ಇನ್ನೇನಿದ್ದರೂ ಯುದ್ಧ. ಬಿ. ವೈ. ವಿಜಯೇಂದ್ರ ನನ್ನ ರಾಜಕೀಯ ಸಮಾಧಿ ಮಾಡಲು ಹೊರಟಿದ್ದಾರೆ. ನಾನು ಕೇಂದ್ರದ ನಾಯಕರಿಗೆ ದೂರು ಕೊಟ್ಟಿದ್ದೇನೆ. ತುಂಬಾ ನೋವಾಗಿದೆ, ಏನು ಮಾಡಬೇಕು ತಿಳಿದಿದೆ" ಎಂದು ಹೇಳಿದ್ದರು.
"ಬಿ. ಎಸ್. ಯಡಿಯೂರಪ್ಪ ಅವರೇ ಬೇರೆ, ಬಿ. ವೈ. ವಿಜಯೇಂದ್ರ ಅವರೇ ಬೇರೆ. ವಿಜಯೇಂದ್ರ ಹಠ, ದ್ವೇಷ ರಾಜಕಾರಣ ಮಾಡುತ್ತಾರೆ. ಯಡಿಯೂರಪ್ಪ ಅವರ ಗುಣ ವಿಜಯೇಂದ್ರ ಅವರಿಗೆ ಬರಲೇ ಇಲ್ಲ. ಇವರ ಮನಸ್ಥಿತಿ, ಧೋರಣೆ, ಅಹಂಕಾರಕ್ಕೆ ನನ್ನ ಧಿಕ್ಕಾರ" ಎಂದು ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದರು.












Click it and Unblock the Notifications