ಕಾಂಗ್ರೆಸ್ ಬಿಗ್ ಶಾಕ್ : ಮಾಜಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಬಿಜೆಪಿ ಸೇರ್ಪಡೆ
ಬೆಂಗಳೂರು, ಏಪ್ರಿಲ್ 17: ಲೋಕಸಭಾ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಅಬ್ಬರ ಪ್ರಚಾರವನ್ನ ನಡೆಸಿದ್ದು, ರಾಜಕೀಯ ಪಕ್ಷಗಳಿಗೂ ಪ್ರತಿಷ್ಠೆಯ ಕಣವಾಗಿದೆ. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ 28 ಕ್ಷೇತ್ರಗಳನ್ನ ಗೆಲ್ಲುವ ಮೂಲಕ ಆಡಳಿತರೂಢ ಕಾಂಗ್ರೆಸ್ ಗೆ ಠಕ್ಕರ್ ಕೊಡಲು ಬಿಜೆಪಿ ಮಾಸ್ಟರ್ ಪ್ಲಾನ್ ನಡೆಸಿದ್ದು, ಅಖಂಡ ಶ್ರೀನಿವಾಸಮೂರ್ತಿಗೆ ಗಾಳ ಹಾಕುವಲ್ಲಿ ಯಶಸ್ವಿಯಾಗಿದೆ.
ಹೌದು, ಲೋಕಸಭಾ ಚುನಾವಣೆಗೆ ಈಗಾಗಲೇ ದಿನಾಂಕ ಘೋಷಣೆಯಾಗಿದ್ದು, ಚುನಾವಣೆಗೆ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ನಾಯಕರು ಕೆಲ ದಿನಗಳ ಹಿಂದೆಯಷ್ಟೇ ಅಖಂಡ ಶ್ರೀನಿವಾಸ್ ಮೂರ್ತಿ ಅವರ ನಿವಾಸಕ್ಕೆ ಭೇಟಿ ನೀಡಿ, ಬಿಜೆಪಿ ಪಕ್ಷಕ್ಕೆ ಕರೆತರುವ ನಿಟ್ಟಿನಲ್ಲಿ ಪ್ಲಾನ್ ನಡೆಸಿದ್ರು, ಇದೀಗ ಇಂದು ಮಾಜಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾದರು.

ಇನ್ನೂ ಈ ವೇಳೆ ಮಾಜಿ ಬಿ ಎಸ್ ಯಡಿಯೂರಪ್ಪ ಮಾತನಾಡಿ, ಶೋಭಾ ಕರಂದ್ಲಾಜೆಯವರು 2.5 ಲಕ್ಷದಿಂದ 3 ಲಕ್ಷ ಮತಗಳ ಅಂತರದಿಂದ ಗೆಲ್ಲುವುದು ನಿಶ್ಚಿತ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು.
ಧ್ವಜವನ್ನು ನೀಡಿ ಅಖಂಡ ಶ್ರೀನಿವಾಸಮೂರ್ತಿಯವರನ್ನು ಪಕ್ಷಕ್ಕೆ ಸ್ವಾಗತಿಸಲಾಯಿತು. ಚುನಾವಣೆ ಸಂದರ್ಭದಲ್ಲಿ ಅಖಂಡ ಶ್ರೀನಿವಾಸಮೂರ್ತಿಯವರ ಸೇರ್ಪಡೆ ಪಕ್ಷಕ್ಕೆ ದೊಡ್ಡ ಶಕ್ತಿ ಕೊಟ್ಟಂತಾಗಿದೆ ಎಂದು ನುಡಿದರು. ಡಿಜೆ ಹಳ್ಳಿ- ಕೆಜಿ ಹಳ್ಳಿ ಹಿಂದೂ ಮುಸ್ಲಿಂ ಗಲಾಟೆ ಆದಾಗ ಅಖಂಡ ಶ್ರೀನಿವಾಸಮೂರ್ತಿಯವರ ಮನೆಯನ್ನು ಸುಡಲಾಗಿತ್ತು. ಆಗ ಕಾಂಗ್ರೆಸ್‍ನವರು ಬೆಂಬಲ ಕೊಡಲಿಲ್ಲ. ನಾವು ಆಗ ಶ್ರೀನಿವಾಸಮೂರ್ತಿ ಅವರ ಜೊತೆ ಗಟ್ಟಿಯಾಗಿ ನಿಂತಿದ್ದೆವು ಎಂದು ನೆನಪಿಸಿದರು.
ಬೆಂಬಲಿಗರ ಜೊತೆ ಅಖಂಡ ಶ್ರೀನಿವಾಸಮೂರ್ತಿಯವರ ಪಕ್ಷ ಸೇರುವಿಕೆಯಿಂದ ಆನೆ ಬಲ ಬಂದಂತಾಗಿದೆ. ಅವರಿಗೆ ನಿಮ್ಮೆಲ್ಲರ ಪರವಾಗಿ ಸ್ವಾಗತ ಎಂದು ತಿಳಿಸಿದರು. ಇಂಥ ವಿಶೇಷ ಸಂದರ್ಭದಲ್ಲಿ ಉಪಸ್ಥಿತರೆಲ್ಲರಿಗೆ ವಂದನೆಗಳು ಎಂದು ತಿಳಿಸಿದರು.
ಜಿಲ್ಲಾ ಅಧ್ಯಕ್ಷ ಹರೀಶ್ ಅವರು ಮಾತನಾಡಿ, ಧರ್ಮ- ಅಧರ್ಮದ ನಡುವೆ ಯುದ್ಧ ನಡೆಯುತ್ತಿದೆ. ಅಖಂಡ ಶ್ರೀನಿವಾಸಮೂರ್ತಿ ಅವರು ಧರ್ಮದ ಪರವಾಗಿ ಬಿಜೆಪಿ ಸೇರಿದ್ದಾರೆ ಎಂದು ತಿಳಿಸಿದರು. ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶೋಭಾ ಕರಂದ್ಲಾಜೆ, ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್‍ಕುಮಾರ್, ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್, ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಮಂಜುಳಾ, ರಾಜ್ಯ ಒಬಿಸಿ ಮೋರ್ಚಾ ಉಪಾಧ್ಯಕ್ಷ ಗೋವಿಂದರಾಜ್, ಪುಲಕೇಶಿ ನಗರದ ಮಂಡಲ ಅಧ್ಯಕ್ಷ ರವಿ, ಮುಖಂಡರಾದ ಮುರಳಿ, ಸೂರ್ಯಕಾಂತ ರಾವ್, ಜೆಡಿಎಸ್ ಪ್ರಮುಖರು ಭಾಗವಹಿಸಿದ್ದರು.












Click it and Unblock the Notifications