ಜೆಡಿಎಸ್ ಸೇರಲಿದ್ದಾರೆ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ?
ಕೊಪ್ಪಳ, ಸೆಪ್ಟೆಂಬರ್ 18 : ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಜೆಡಿಎಸ್ ಸೇರುವ ಸಾಧ್ಯತೆ ಇದೆ. ಉತ್ತರ ಕರ್ನಾಟಕದಲ್ಲಿ ಪಕ್ಷ ಸಂಘಟನೆಗೆ ಮುಂದಾಗಿರುವ ಜೆಡಿಎಸ್ ವಿರೂಪಾಕ್ಷಪ್ಪ ಅವರನ್ನು ಸೆಳೆಯಲು ಪ್ರಯತ್ನ ನಡೆಸಿದೆ.
ಕೆ.ವಿರೂಪಾಕ್ಷಪ್ಪ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಜೊತೆ ಗುರುತಿಸಿಕೊಂಡಿದ್ದಾರೆ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ರಾಜ್ಯಾಧ್ಯಕ್ಷರಾಗಿದ್ದಾರೆ. ಕೊಪ್ಪಳದ ಮಾಜಿ ಸಂಸದರಾದ ಇವರನ್ನು ಸೆಳೆದರೆ ಪಕ್ಷ ಸಂಘಟನೆ ಸುಲಭವಾಗಲಿದೆ ಎಂಬುದು ಜೆಡಿಎಸ್ ಲೆಕ್ಕಾಚಾರ.

ಮಾಜಿ ಸಚಿವ ಎಚ್.ವಿಶ್ವನಾಥ್ ಅವರು ಕೆ.ವಿರೂಪಾಕ್ಷಪ್ಪ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ. ಆದರೆ, ಅವರು ಇನ್ನೂ ಅಂತಿಮ ನಿರ್ಧಾರವನ್ನು ಪ್ರಕಟಿಸಿಲ್ಲ.
ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಚಟುವಟಿಕೆಗಳು ಆರಂಭವಾದ ಮೇಲೆ ಕೆ.ವಿರೂಪಾಕ್ಷಪ್ಪ ಅವರು ಬಿಜೆಪಿ ನಾಯಕರಿಂದ ಅಂತರ ಕಾಯ್ದುಕೊಂಡಿದ್ದಾರೆ. ಬ್ರಿಗೇಡ್ ಕೆಲಸಗಳಲ್ಲಿ ಈಶ್ವರಪ್ಪ ಜೊತೆ ಅವರು ಗುರುತಿಸಿಕೊಂಡಿದ್ದರು. ಈಶ್ವರಪ್ಪ ಅವರೇ ವಿರೂಪಾಕ್ಷಪ್ಪ ಅವರನ್ನು ಬ್ರಿಗೇಡ್ ಅಧ್ಯಕ್ಷರನ್ನಾಗಿ ಮಾಡಿದ್ದರು.
2018ರ ಚುನಾವಣೆಯಲ್ಲಿ ಉತ್ತರ ಕರ್ನಾಟಕ ಭಾಗದಿಂದ ಹೆಚ್ಚು ಸ್ಥಾನ ಗೆಲ್ಲಬೇಕು ಎಂಬುದು ಜೆಡಿಎಸ್ ತಂತ್ರವಾಗಿದೆ. ಇದಕ್ಕಾಗಿ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಹುಬ್ಬಳ್ಳಿಯಲ್ಲಿ ಮನೆ ಮಾಡಿದ್ದಾರೆ.
ದೇವೇಗೌಡರು ಸಹ ಉತ್ತರ ಕರ್ನಾಟಕದಲ್ಲಿ ಪಕ್ಷ ಸಂಘಟನೆ ಮಾಡಲು ಸೂಚನೆ ನೀಡಿದ್ದಾರೆ. ಆದ್ದರಿಂದ, ಕೆ.ವಿರೂಪಾಕ್ಷಪ್ಪ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಜೆಡಿಎಸ್ ಮುಂದಾಗಿದೆ.












Click it and Unblock the Notifications