ಮಂಡ್ಯ : ನಿವೃತ್ತ ಜಡ್ಜ್ ಮೇಲೆ ಹಲ್ಲೆ, ಮನೆ ದರೋಡೆ
ಮಂಡ್ಯ, ಅಕ್ಟೋಬರ್ 27 : ಮದ್ರಾಸ್ ಹೈಕೋರ್ಟ್‍ನಲ್ಲಿ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯ ಜೀವನವನ್ನು ಪಾಂಡವಪುರ ತಾಲೂಕಿನ ಪಟ್ಟಸೋಮನಹಳ್ಳಿ ಹೊರ ವಲಯದ ಶ್ರೀಶೈಲದಲ್ಲಿ ಸಾಗಿಸುತ್ತಿದ್ದ ನಿವೃತ್ತ ನ್ಯಾ.ಶಿವಪ್ಪ ಅವರ ಮನೆಗೆ ನುಗ್ಗಿದ ದರೋಡೆಕೋರರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದಾರೆ.
ಶ್ರೀಶೈಲದ ಶ್ರೀ ಕಾಮಾಕ್ಷಿ ಚಂದ್ರಮೌಳಿ ದೇವಸ್ಥಾನದ ಪಕ್ಕದಲ್ಲಿ ನಿವೃತ್ತ ನ್ಯಾಯಮೂರ್ತಿಗಳ ಮನೆ ಇದೆ. ಭಾನುವಾರ ರಾತ್ರಿ ನ್ಯಾ.ಶಿವಪ್ಪ (80) ಹಾಗೂ ಅವರ ಪತ್ನಿ ವಿಜಯಲಕ್ಷ್ಮೀ (70) ಅವರು ಮನೆಯಲ್ಲಿದ್ದಾಗ 8 ರಿಂದ 10 ಮಂದಿಯ ದರೋಡೆಕೋರರ ತಂಡ ಮನೆಗೆ ನುಗ್ಗಿ ಈ ದರೋಡೆ ಮಾಡಿದೆ. [ಒಪ್ಪಂದ ಮಾಡ್ಕೊಳ್ಳಿ ಎಂದ ಮದ್ರಾಸ್ ಜಡ್ಜ್ ಗೆ ಸುಪ್ರೀಂ ತರಾಟೆ]

ಶಿವಪ್ಪ ಅವರ ನಿವಾಸದ ಕಿಟಕಿಯನ್ನು ಮುರಿದು ಒಳ ನುಗ್ಗಿದ ತಂಡ ದಂಪತಿಗಳ ಆರೋಗ್ಯ ನೋಡಿಕೊಳ್ಳುತ್ತಿದ್ದ ಮಮತಾ ಎಂಬುವವರನ್ನು ಕಟ್ಟಿಹಾಕಿ, ಶಿವಪ್ಪ ದಂಪತಿಗಳ ಮೇಲೆ ಹಲ್ಲೆ ನಡೆಸಿ ಅವರನ್ನು ಕಟ್ಟಿಹಾಕಿ ದರೋಡೆ ಮಾಡಿದ್ದಾರೆ. [ರೇಪ್ ಆಯ್ತಾ, ಒಪ್ಪಂದ ಮಾಡ್ಕೊಳ್ಳಿ ಅಂದ ಜಡ್ಜ್!]
ಶಿವಪ್ಪ ಅವರ ಪತ್ನಿಯ 12 ಬಳೆಗಳು, ಮಾಂಗಲ್ಯ ಸರ ಸೇರಿದಂತೆ ಇತರೆ ಚಿನ್ನಾಭರಣ, ಲಾಕರ್‌ನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದನ್ನು ದೋಚಿ ಪರಾರಿಯಾಗಿದ್ದಾರೆ. ದರೋಡೆಕೋರರು ಹಿಂದಿ ಮತ್ತು ಕನ್ನಡ ಮಾತನಾಡುತ್ತಿದ್ದರು ಎಂದು ಶಿವಪ್ಪ ಅವರು ಪೊಲೀಸರಿಗೆ ತಿಳಿಸಿದ್ದಾರೆ.

ದರೋಡೆಕೋರರಿಂದ ಹಲ್ಲೆಗೊಳಗಾದ ಶಿವಪ್ಪ ಅವರ ಪತ್ನಿ ವಿಜಯಲಕ್ಷ್ಮೀ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆ, ಮೈಸೂರಿನ ಬೆರಳಚ್ಚು ವಿಧಿ ವಿಜ್ಞಾನ ಪ್ರಯೋಗಾಲಯದ ಡಿಎಸ್ಪಿ ಡಿ. ವೆಂಕಟೇಶ್ ಸೇರಿದಂತೆ ಹಲವು ಅಧಿಕಾರಿಗಳು ಶಿವಪ್ಪ ಅವರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications