• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾಜಿ ಸಿಎಂ ಜಗದೀಶ್ ಶೆಟ್ಟರ್ ತ್ಯಾಗದ ಹಿಂದೆ ಅರವಿಂದ ಬೆಲ್ಲದ್ ಹಣೆಯುವ ತಂತ್ರ?

|
Google Oneindia Kannada News

ಬೆಂಗಳೂರು, ಆ. 01: ರಾಜ್ಯ ಬಿಜೆಪಿಯಲ್ಲಿ ಮೂಲ-ವಲಸೆ ಅಸಮಾಧಾನ ಸ್ಪೋಟವಾಗುತ್ತಿರುವ ಬೆನ್ನಲ್ಲಿಯೇ ಮಾಜಿ ಮುಖ್ಯಮಂತ್ರಿ ಹಾಗೂ ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದ ಜಗದೀಶ್ ಶೆಟ್ಟರ್ ಅವರು ಅಚ್ಚರಿಯ ನಿರ್ಧಾರ ಪ್ರಕಟಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟವನ್ನು ಯಾವುದೇ ಕಾರಣಕ್ಕೂ ಸೇರುವುದಿಲ್ಲ ಎಂದು ಅವರು ಬಹಿರಂಗ ಹೇಳಿಕೆ ನೀಡಿದ್ದಾರೆ. ಸಾಕಷ್ಟು ಪ್ರಯತ್ನ ನಡೆಸಿ ಬಿ.ಎಸ್. ಯಡಿಯೂರಪ್ಪ ಅವರ ಸಚಿವ ಸಂಪುಟ ಸೇರಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಈಗ ಸಂಪುಟ ಸೇರುವುದಿಲ್ಲ ಎಂದು ಹೇಳುತ್ತಿರುವುದು ಅಚ್ಚರಿ ಮೂಡಿಸಿದೆ. ಅದಕ್ಕೆ ಪ್ರಬಲ ಕಾರಣವೂ ಇದೆ.

ರಾಜ್ಯ ಬಿಜೆಪಿಯಲ್ಲಿ ಬಹಳಷ್ಟು ಹಿರಿಯ ಶಾಸಕರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟ ಸೇರಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಹಲವರು ದೆಹಲಿಯಲ್ಲಿ ಬೀಡು ಬಿಟ್ಟು ಹೈಕಮಾಂಡ್ ಮೇಲೆ ಒತ್ತಡ ಹಾಕುವ ತಂತ್ರವನ್ನು ಹಾಗೂ ಲಾಬಿಯನ್ನು ಮಾಡುತ್ತಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ 'ನಾ ಮಂತ್ರಿ ಆಗಾಕ್ ಒಲ್ಲೆ ಬಿಡ್ರಿ' ಅಂತಾ ಜಗದೀಶ್ ಶೆಟ್ಟರ್ ಯಾಕೆ ಹೇಳುತ್ತಿದ್ದಾರೆ? ಎಂಬ ಚರ್ಚೆ ಬಿಜೆಪಿ ಕಾರ್ಯಕರ್ತರಲ್ಲಿ ನಡೆಯುತ್ತಿದೆ.

ಮಾಜಿ ಸಿಎಂ ಶೆಟ್ಟರ್ ಮುಂದಾಲೋಚನೆ ಗಮನದಲ್ಲಿಟ್ಟುಕೊಂಡು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ ಬಾವಿ ಮುಖ್ಯಮಂತ್ರಿ ಎಂದು ಗುರುತಿಸಲ್ಪಟ್ಟಿದ್ದ ಉತ್ತರ ಕರ್ನಾಟಕದ ನಾಯಕರೊಬ್ಬರನ್ನು ಹಣೆಯುವ ತಂತ್ರವೂ ಶೆಟ್ಟರ್ ನಿರ್ಧಾರದ ಹಿಂದಿದೆ ಎನ್ನಲಾಗುತ್ತಿದೆ. ಆ ನಾಯಕ ಯಾರು? ಸಿಎಂ ಬೊಮ್ಮಾಯಿ ಸಂಪುಟದಿಂದ ಮಾಜಿ ಸಿಎಂ ಶೆಟ್ಟರ್ ಅವರು ದೂರ ಉಳಿಯುತ್ತಿರುವುದಕ್ಕೆ ನಿಜವಾಗಿಯೂ ಇದೇ ಕಾರಣವಾ? ಮುಂದಿದೆ ಮಾಹಿತಿ!

ಅರವಿಂದ್ ಬೆಲ್ಲದ್ ಹಣಿಯುವ ತಂತ್ರ?

ಅರವಿಂದ್ ಬೆಲ್ಲದ್ ಹಣಿಯುವ ತಂತ್ರ?

ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿತರಾಗಿದ್ದ ಅರವಿಂದ ಬೆಲ್ಲದ್ ಅವರನ್ನು ಈಗ ಸಚಿವ ಸಂಪುಟದಿಂದ ದೂರವಿಡುವ ಪ್ರಯತ್ನಗಳು ಬಿಜೆಪಿಯಲ್ಲಿ ನಡೆದಿವೆಯಾ? ಅಂಥದ್ದೊಂದು ಮಾಹಿತಿ ಇದೀಗ ಬಿಜೆಪಿ ವಲಯದಿಂದಲೇ ಬಂದಿದೆ. ಅದಕ್ಕೆ ಕಾರಣವಾಗಿರುವುದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಮಾಡಿರುವ ನಿರ್ಧಾರ. ತಾವು ಮಂತ್ರಿಮಂಡಲದಿಂದ ದೂರ ಉಳಿಯುವ ಮೂಲಕ ಮತ್ತೊಂದು ರಾಜಕೀಯ ತಂತ್ರಗಾರಿಕೆಯನ್ನು ಮಾಡುತ್ತಿದ್ದಾರೆ ಎಂಬ ಆರೋಪಗಳು ಇದೀಗ ಎದುರಾಗಿವೆ. ಹೀಗಾಗಿ ಜಗದೀಶ್ ಶೆಟ್ಟರ್ ಮಂತ್ರಿಸ್ಥಾನ ತ್ಯಾಗದ ಹಿಂದೆ ಅರವಿಂದ ಬೆಲ್ಲದ್ ಅವರನ್ನು ರಾಜಕೀಯವಾಗಿ ಹಣೆಯುವ ಲೆಕ್ಕಾಚಾರಗಳಿವೆ ಎಂಬ ಮಾತುಗಳು ಕೇಳಿ ಬಂದಿವೆ.

ಆದರೆ ಬಿಜೆಪಿ ಹೈಕಮಾಂಡ್ ಪಕ್ಷದಲ್ಲಿ ಈಗಾಗಲೇ ಅಧಿಕಾರ ಅನುಭವಿಸಿದವರಿಗೆ ಮಂತ್ರಿ ಹುದ್ದೆ ಕೊಡಬಾರದು ಎಂದು ತೀರ್ಮಾನಕ್ಕೆ ಬಂದಿದೆ ಎನ್ನಲಾಗುತ್ತಿದೆ. ಹೀಗಾಗಿ ತಮ್ಮನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂಬ ಆತಂಕ ಕೂಡ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಕಾಡುತ್ತಿದೆ ಎನ್ನಲಾಗಿದೆ. ಹೀಗಾಗಿ ತಮ್ಮನ್ನು ಕೈಬಿಟ್ಟು ಸಂಪುಟ ರಚನೆ ಮಾಡಿದಲ್ಲಿ ಮುಜುಗುರ ಎದುರಾಗುತ್ತದೆ. ಅದನ್ನು ತಪ್ಪಿಸಿಕೊಳ್ಳುವ ಹಿನ್ನೆಲೆಯಲ್ಲಿ ಸಂಪುಟದಿಂದಲೇ ದೂರ ಉಳಿಯುವ ಘೋಷಣೆಯನ್ನು ಜಗದೀಶ್ ಶೆಟ್ಟರ್ ಮಾಡಿದ್ದಾರೆ ಎಂಬ ಆರೋಪ ಕೂಡ ಬಂದಿದೆ.

ಲಿಂಗಾಯತ ನಾಯಕರನ್ನು ಕಾಡುತ್ತಿದೆ 'ಬೆಲ್ಲದ್' ಆತಂಕ!

ಲಿಂಗಾಯತ ನಾಯಕರನ್ನು ಕಾಡುತ್ತಿದೆ 'ಬೆಲ್ಲದ್' ಆತಂಕ!

ಇದೇ ಸಂದರ್ಭದಲ್ಲಿ ಬೆಲ್ಲದ್ ಆತಂಕ ಲಿಂಗಾಯತ ನಾಯಕರನ್ನು ಕಾಡುತ್ತಿದೆ. ಮುಂದಿನ ದಿನಗಳಲ್ಲಿ ಧಾರವಾಡ ಜಿಲ್ಲೆಯಲ್ಲಿ ಅರವಿಂದ ಬೆಲ್ಲದ್ ಅವರು ರಾಜಕೀಯವಾಗಿ ಬೆಳೆಯುವ ಎಲ್ಲ ಸಾಧ್ಯತೆಗಳೂ ಕಂಡು ಬಂದಿವೆ. ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಬೆಲ್ಲದ್ ಬಗ್ಗೆ ಬಿಜೆಪಿ ಹೈಕಮಾಂಡ್ ಹಾಗೂ ಆರ್‌ಎಸ್‌ಎಸ್‌ ಪ್ರಮುಖರು ಕೂಡ ಒಳ್ಳೆಯ ಅಭಿಪ್ರಾಯ ಹೊಂದಿದ್ದಾರೆ. ಹೀಗಾಗಿ ಅರವಿಂದ ಬೆಲ್ಲದ್ ಅವರು ಸಂಪುಟ ಸೇರಿ ಮಂತ್ರಿಯಾಗುವುದರಿಂದ ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಅವರು ಬಲಿಷ್ಠರಾಗುವ ಆತಂಕ ಉತ್ತರ ಕರ್ನಾಟಕದ ಲಿಂಗಾಯತ ಸಮುದಾಯದ ಒಂದಿಷ್ಟು ನಾಯಕರಿಗಿದೆ ಎನ್ನಲಾಗುತ್ತಿದೆ.

ಆದುದರಿಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಾವು ಮಂತ್ರಿಯಾಗುವುರದಿಂದ ಹೊರಗುಳಿದು, ತಮ್ಮ ಬದಲು ಲಿಂಗಾಯತ ಪಂಚಮಸಾಲಿ ಸಮುದಾಯದ ಶಂಕರ ಪಾಟೀಲ್ ಮುನೇನಕೊಪ್ಪ ಅವರನ್ನು ಸಚಿವರನ್ನಾಗಿ ಮಾಡುವ ಪ್ರಯತ್ನಗಳನ್ನು ನಡೆಸಿದ್ದಾರೆ. ಶಾಸಕ ಶಂಕರ ಪಾಟೀಲ್ ಮುನೇನಕೊಪ್ಪ ಅವರು ಧಾರವಾಡ ಜಿಲ್ಲೆಯ ನವಲಗುಂದ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಹೀಗಾಗಿ ಶಾಸಕ ಮುನೇನಕೊಪ್ಪ ಅವರನ್ನು ಮಂತ್ರಿಯನ್ನಾಗಿ ಮಾಡಿದಲ್ಲಿ, ಸಹಜವಾಗಿಯೇ ಅದೇ ಜಿಲ್ಲೆ ಹಾಗೂ ಅದೇ ಸಮುದಾಯಕ್ಕೆ ಸೇರಿರುವ ಅರವಿಂದ ಬೆಲ್ಲದ್ ಅವರಿಗೆ ಮಂತ್ರಿ ಸ್ಥಾನ ಸಿಗುವುದಿಲ್ಲ ಎಂಬ ಲೆಕ್ಕಾಚಾರಗಳಿವೆ ಎನ್ನಲಾಗುತ್ತಿದೆ.

ತಂದೆಯಂತೆ ಮಗನನ್ನೂ ಹಣೆಯುವ ತಂತ್ರ?

ತಂದೆಯಂತೆ ಮಗನನ್ನೂ ಹಣೆಯುವ ತಂತ್ರ?

ಮಾಜಿ ಶಾಸಕ ಚಂದ್ರಕಾಂತ್ ಬೆಲ್ಲದ್ ಅವರಂತೆ ಹಾಲಿ ಶಾಸಕ ಅರವಿಂದ ಬೆಲ್ಲದ್ ಅವರನ್ನೂ ರಾಜಕೀಯವಾಗಿ ಹಣೆಯುವ ಲೆಕ್ಕಾಚಾರಗಳು ಬಿಜೆಪಿಯಲ್ಲಿ ನಡೆದಿವೆ ಎನ್ನಲಾಗಿದೆ. ಅರವಿಂದ ಬೆಲ್ಲದ್ ಅವರ ತಂದೆ ಚಂದ್ರಕಾಂತ ಬೆಲ್ಲದ್ ಅವರೂ ಕೂಡ ಐದು ಸಲ ಬಿಜೆಪಿಯಿಂದ ಶಾಸಕಾರಾಗಿ ಆಯ್ಕೆಯಾಗಿದ್ದರು. ಅಷ್ಟು ಬಾರಿ ಗೆದ್ದರೂ ಅವರಿಗೆ ಮಂತ್ರಿ ಸ್ಥಾನ ಕೊಟ್ಟಿರಲಿಲ್ಲ. ಈಗ ಅವರ ಪುತ್ರ ಅರವಿಂದ ಬೆಲ್ಲದ್ ಅವರಿಗೂ ಮಂತ್ರಿಸ್ಥಾನ ತಪ್ಪಿಸುವ ರಾಜಕೀಯ ಹುನ್ನಾರಗಳು ಬಿಜೆಪಿಯಲ್ಲಿ ನಡೆದಿವೆ ಎಂಬ ಆರೋಪಗಳು ಎದುರಾಗಿವೆ.

ತಂದೆಯಂತೆ ಮಗನನ್ನೂ ಅಧಿಕಾರದಿಂದ ದೂರವಿಡುವ ಕಸರತ್ತನ್ನು ಉತ್ತರ ಕರ್ನಾಟಕದ ಕೆಲ ನಾಯಕರು ಮಾಡುತ್ತಿದ್ದಾರೆ. ಅದಕ್ಕೆ ಕಾರಣವಾಗಿರುವುದು ಅರವಿಂದ ಬೆಲ್ಲದ ಅವರ ರಾಜಕೀಯ ಬೆಳವಣಿಗೆ ಕೂಡ. ಹೀಗಾಗಿ ಅರವಿಂದ ಬೆಲ್ಲದ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೇಲೆ ಒತ್ತಡ ಹಾಕುವ ನಿಟ್ಟಿನಲ್ಲಿ ಈ ಎಲ್ಲ ತಂತ್ರಗಳು ನಡೆಯುತ್ತಿವೆ ಎಂಬ ಮಾಹಿತಿಯಿದೆ.

ಶೆಟ್ಟರ್‌ಗಿಂತ ಹಿರಿಯ ಚಂದ್ರಕಾಂತ್ ಬೆಲ್ಲದ್

ಶೆಟ್ಟರ್‌ಗಿಂತ ಹಿರಿಯ ಚಂದ್ರಕಾಂತ್ ಬೆಲ್ಲದ್

ಹಿಂದೆ ಚಂದ್ರಕಾಂತ ಬೆಲ್ಲದ್ ಅವರನ್ನು ಅಧಿಕಾರ ದೂರ ಇಟ್ಟವರೇ ಈಗ ಅದನ್ನು ಅರವಿಂದ ಬೆಲ್ಲದ ಮೇಲೆ ಪ್ರಯೋಗ ಮಾಡುತ್ತಿದ್ದಾರೆ ಎಂಬ ಮಾಹಿತಿಯಿದೆ. ಆದರೆ ಈಗ ಸ್ವತಃ ಹೈಕಮಾಂಡ್ ಶಾಸಕ ಅರವಿಂದ ಬೆಲ್ಲದ್ ಅವರ ಬೆನ್ನಿಗೆ ನಿಂತಿದೆ ಎಂಬ ಮಾಹಿತಿಯಿದೆ. ಲಿಂಗಾಯತ ಪಂಚಮಸಾಲಿ ಸಮುದಾಯದ ಬೆಂಬಲ ಸಿಗುತ್ತದೆ ಎಂಬ ಭರವಸೆಯ ಮೇಲೆ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವ ನಿರ್ಧಾರ ಮಾಡಿತ್ತು. ಹೀಗಾಗಿ ಪಂಚಮಸಾಲಿ ಸಮುದಾಯದಲ್ಲಿ ಈಗ ಪ್ರಭಾವಿ ಆಗಿರುವ ಶಾಸಕ ಅರವಿಂದ ಬೆಲ್ಲದ್ ಅವರ ಬೆನ್ನಿಗೆ ನಿಲ್ಲಲು ಹೈಕಮಾಂಡ್ ನಿರ್ಧಾರ ಮಾಡಿದೆ. ಜೊತೆಗೆ ಕೇಂದ್ರ ಸಂಸದೀಯ ನಾಯಕ ಪ್ರಲ್ಹಾದ್ ಜೋಶಿ ಅವರೂ ಕೂಡ ಶಾಸಕ ಅರವಿಂದ ಬೆಲ್ಲದ್ ಅವರಿಗೆ ಬೆಂಬಲ ಕೊಡುತ್ತಿದ್ದಾರೆ ಎಂಬ ಮಾಹಿತಿಯಿದೆ.

ಕೈಹಿಡಿಯುತ್ತದೆಯಾ ಬಿಜೆಪಿ ಹೈಕಮಾಂಡ್?

ಕೈಹಿಡಿಯುತ್ತದೆಯಾ ಬಿಜೆಪಿ ಹೈಕಮಾಂಡ್?

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗುತ್ತಾರೆ ಅಂತಾ ಬಿಜೆಪಿಯಲ್ಲಿ ಯಾರೂ ಅಂದುಕೊಂಡಿರಲಿಲ್ಲ. ಆದರೆ ಬೆಂಗಳೂರಿನಲ್ಲಿ ನಡೆದ ಕೊನೆಯ ಕ್ಷಣದ ಬೆಳವಣಿಗೆಗಳಿಂದ ಅರವಿಂದ ಬೆಲ್ಲದ್ ಅವರ ಬದಲಿಗೆ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಎಂದು ಘೋಷಣೆ ಮಾಡಲಾಗಿತ್ತು. ಅದಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಅವರ ಒತ್ತಡವೂ ಕಾರಣ ಎಂಬ ಮಾಹಿತಿಯಿದೆ.

ಈ ಎಲ್ಲ ಬೆಳವಣಿಗೆಳ ಹಿನ್ನೆಲೆಯಲ್ಲಿ ಶಾಸಕ ಅರವಿಂದ ಬೆಲ್ಲದ್ ಅವರನ್ನು ಹೀಗೆ ಬೆಳೆಯಲು ಬಿಟ್ಟಲ್ಲಿ ತಮ್ಮನ್ನು ಮೀರಿ ರಾಜಕೀಯವಾಗಿ ಬೆಳೆಯುತ್ತಾರೆ ಎಂಬ ಆತಂಕ ಉತ್ತರ ಕರ್ನಾಟಕದ ಕೆಲವು ಲಿಂಗಾಯತ ನಾಯಕರಿಗೆ ಬಂದಿದೆ. ಆದುದರಿಂದಲೇ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಅರವಿಂದ ಬೆಲ್ಲದ್ ಅವರನ್ನು ಮಂತ್ರಿಸ್ಥಾನದಿಂದಲೂ ದೂರವಿಡಲು ಆ ನಾಯಕರು ರಾಜಕೀಯ ತಂತ್ರಗಾರಿಗೆ ಮಾಡುತ್ತಿದ್ದಾರೆ. ಅದಕ್ಕಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಎದುರಾಗಿದೆ.

  Weather Forecast : ಹವಾಮಾನ ಇಲಾಖೆಯಿಂದ ಭಾರಿ ಮಳೆ ಸೂಚನೆ! | Oneindia Kannada
  ಪಂಚಮಸಾಲಿ ಸಮುದಾಯದತ್ತ ಹೈಕಮಾಂಡ್ ಒಲವು?

  ಪಂಚಮಸಾಲಿ ಸಮುದಾಯದತ್ತ ಹೈಕಮಾಂಡ್ ಒಲವು?

  ಲಿಂಗಾಯತ ಪಂಚಮಸಾಲಿ ಸಮುದಾಯ ಇತ್ತೀಚೆಗೆ ಹೆಚ್ಚು ಸಂಘಟಿತವಾಗುತ್ತಿದೆ. ಒಟ್ಟಾರೆ ಲಿಂಗಾಯತರಲ್ಲಿ ಪಂಚಮಸಾಲಿ ಸಮುದಾಯದ ಜನಸಂಖ್ಯೆ ಹೆಚ್ಚಿದೆ. ಒಂದು ಅಂದಾಜಿನಂತೆ ಸುಮಾರು 1.2 ಕೋಟಿ ಜನಸಂಖ್ಯೆಯನ್ನು ಲಿಂಗಾಯತ ಪಂಚಮಸಾಲಿ ಸಮುದಾಯ ಹೊಂದಿದೆ. ಆದರೆ ಆ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಈವರೆಗೂ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ ಎಂಬ ಕೊರಗೂ ಆ ಸಮುದಾಯಕ್ಕಿದೆ. ಪ್ರಮುಖವಾಗಿ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್, ಮುರುಗೇಶ್ ನಿರಾಣಿ ಸೇರಿದಂತೆ ಬಿಜೆಪಿಯಲ್ಲಿ ಒಟ್ಟು 16 ಪಂಚಮಸಾಲಿ ಸಮುದಾಯಕ್ಕೆ ಸೇರಿದ ಶಾಸಕರಿದ್ದಾರೆ ಎಂಬ ಮಾಹಿತಿಯನ್ನು ಸಮುದಾಯದ ನಾಯಕರು ಕೊಟ್ಟಿದ್ದಾರೆ.

  ಹೀಗಾಗಿ ಮುಂದಿನ ದಿನಗಳಲ್ಲಿ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಬಿಜೆಪಿ ಹೈಕಮಾಂಡ್ ರಾಜಕೀಯ ಪ್ರಾತಿನಿಧ್ಯವನ್ನು ಹೆಚ್ಚು ಕೊಡಲಿದೆ ಎನ್ನಲಾಗಿದೆ. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಕೆಲ ಲಿಂಗಾಯತ ಸಮುದಾಯದ ನಾಯಕರೇ, ಶಾಸಕ ಅರವಿಂದ ಬೆಲ್ಲದ್ ಅವರಿಗೆ ಮುಖ್ಯಮಂತ್ರಿ ಹುದ್ದೆ ತಪ್ಪಿಸಿದಂತೆ ಮಂತ್ರಿ ಸ್ಥಾನವನ್ನೂ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗಿದೆ.

  ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್, ಮುರುಗೇಶ್ ನಿರಾಣಿ ಅವರನ್ನು ಬಿಜೆಪಿ ಹೈಕಮಾಂಡ್ ರಾಜಕೀಯ ದಾಳವಾಗಿ ಬಳಸಿಕೊಂಡಿತ್ತಾ? ಅಥವಾ ಮುಂದಿನ ದಿನಗಳಲ್ಲಿ ಸಮುದಾಯದ ಬೆಂಬಲ ಉಳಿಸಿಕೊಳ್ಳಲು ಆ ಸಮುದಾಯದ ಶಾಸಕರಿಗೆ ಹೆಚ್ಚಿನ ಪ್ರಾತಿನಿಧ್ಯ ಕೊಡುತ್ತದೆಯಾ? ಎಂಬುದು ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಳಿಕವೇ ತಿಳಿದು ಬರಲಿದೆ.

  English summary
  Former Chief Minister Jagadish Shettar's ministerial sacrifice is a political ploy by Arvind Bellad to not become a minister in Basavaraj Bommai Cabinet. Know more.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X