ನೀರಿನ ನೆಪದ ಈ ದೊಂಬರಾಟಕ್ಕೆ ಕೊನೆ ಹಾಡಬೇಕು; ಎಚ್‌ಡಿಕೆ
ಬೆಂಗಳೂರು, ಜನವರಿ 12; ಮೇಕೆದಾಟು ಯೋಜನೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಹಮ್ಮಿಕೊಂಡಿರುವ 'ನಮ್ಮ ನೀರು ನಮ್ಮ ಹಕ್ಕು' ಪಾದಯಾತ್ರೆ 4ನೇ ದಿನಕ್ಕೆ ಕಾಲಿಟ್ಟಿದೆ. ಪಾದಯಾತ್ರೆ ನಿಲ್ಲಿಸಬೇಕು ಎಂದು ಕರ್ನಾಟಕ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಕೆ ಯಾಗಿದೆ.
ಬುಧವಾರ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿದ್ದು ಕಾಂಗ್ರೆಸ್ ನಾಯಕರು ಮತ್ತು ಸರ್ಕಾರದ ವಿರುದ್ಧ ಟೀಕೆ ಮಾಡಿದ್ದಾರೆ. "ಮೇಕೆದಾಟು ಪಾದಯಾತ್ರೆಯನ್ನು ಓಮಿಕ್ರಾನ್ ಜಾತ್ರೆಯನ್ನಾಗಿ ಪರಿವರ್ತಿಸಿದ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯ ಹೈಕೋರ್ಟ್ ಛೀಮಾರಿ ಹಾಕಿದೆ. ಸೋಂಕನ್ನು ನಿರ್ಲಕ್ಷಿಸಿದ ಸರಕಾರಕ್ಕೂ ಚಾಟಿ ಬೀಸಿದೆ. ಕೂಡಲೇ ಈ ಬಗ್ಗೆ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು. ನೀರಿನ ನೆಪದ ಈ ದೊಂಬರಾಟಕ್ಕೆ ಕೊನೆ ಹಾಡಬೇಕು" ಎಂದು ಒತ್ತಾಯಿಸಿದ್ದಾರೆ.
"ಕೋವಿಡ್ ರಕ್ಕಸ ರೂಪ ಪಡೆದು ವೇಗವಾಗಿ ಹರಡುತ್ತಿದೆ. ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಅನೇಕ ನಾಯಕರೇ ಪಾಸಿಟವ್ ಆಗಿ ಆಸ್ಪತ್ರೆ ಸೇರಿಕೊಂಡಿದ್ದಾರೆ. ಸರಿಯಾಗಿ ಪರೀಕ್ಷೆ ನಡೆಸಿದರೆ ದೊಡ್ಡ ಸಂಖ್ಯೆಯ ಜನರು ಸೋಂಕಿತರಾಗಿರುವುದು ಬಯಲಾಗುತ್ತದೆ" ಎಂದು ಟ್ವೀಟ್ ಮಾಡಿದ್ದಾರೆ.

"ನ್ಯಾಯಾಲಯದಿಂದ ಮತ್ತೆ ಛೀಮಾರಿ ಹಾಕಿಸಿಕೊಳ್ಳುವುದು ಬೇಡ. ಪರಿಸ್ಥಿತಿ ಕೈಮೀರಿದೆ. ಎಚ್ಚರ ತಪ್ಪಿದರೆ ಇರುವ ಆಸ್ಪತ್ರೆಗಳು, ವೈದ್ಯ ವ್ಯವಸ್ಥೆ ಸಾಲುವುದಿಲ್ಲ. ಮತ್ತೊಮ್ಮೆ ಸರಕಾರ ಮುಜುಗರಕ್ಕೆ ಒಳಗಾಗುವುದು ಸರಿಯಲ್ಲ" ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ರಾಮನಗರ: ಜಿಲ್ಲೆಯೊಳಗೆ ಹಾಗೂ ಜಿಲ್ಲೆಯಿಂದ ಜಿಲ್ಲೆಗೆ ವಾಹನ ಸಂಚಾರ ನಿಷೇಧ@CMofKarnataka #Ramanagara #Mekedatu #NammaNeeruNammaHakku pic.twitter.com/VyFHiYhAgr
— oneindiakannada (@OneindiaKannada) January 12, 2022
"ಕಳೆದ 4 ದಿನಗಳಿಂದ ಜಿಲ್ಲೆಗಳಿಂದ ಬಸ್ಸುಗಳಲ್ಲಿ ಜನರಿಗೆ ಹಣ ಕೊಟ್ಟು ಕರೆಸಿಕೊಂಡು ನಡೆಸುತ್ತಿರುವ ಈ ಜಾತ್ರೆಯಿಂದ ಮೇಕೆದಾಟು ಸಾಕಾರ ಅಸಾಧ್ಯ. ಇದು ಸೋಂಕಿನ ಸಮಾರಾಧನೆಯಷ್ಟೇ ಹೊರತು ಹೋರಾಟವಲ್ಲ. ಸರಕಾರ ಜಿಲ್ಲೆಗಳಿಂದ ಬರುವ ಜನರನ್ನು ಅಲ್ಲಲ್ಲಿಯೇ ತಡೆಯುವ ಕೆಲಸ ಮಾಡಬೇಕು" ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಮೇಕೆದಾಟು ಪಾದಯಾತ್ರೆಯನ್ನು ʼಓಮಿಕ್ರಾನ್ ಜಾತ್ರೆʼಯನ್ನಾಗಿ ಪರಿವರ್ತಿಸಿದ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯ ಹೈಕೋರ್ಟ್ ಛೀಮಾರಿ ಹಾಕಿದೆ. ಸೋಂಕನ್ನು ನಿರ್ಲಕ್ಷಿಸಿದ ಸರಕಾರಕ್ಕೂ ಚಾಟಿ ಬೀಸಿದೆ. ಕೂಡಲೇ ಈ ಬಗ್ಗೆ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು. ನೀರಿನ ನೆಪದ ಈ ದೊಂಬರಾಟಕ್ಕೆ ಕೊನೆ ಹಾಡಬೇಕು.1/10
— H D Kumaraswamy (@hd_kumaraswamy) January 12, 2022
"ಮೇಕೆದಾಟು ಬಗ್ಗೆ ಏನೇನು ಮಾಡಲಾಗಿದೆ ಎಂದು ಸರಕಾರ ಜಾಹೀರಾತು ನೀಡಿದೆ. ಬಿಜೆಪಿ-ಕಾಂಗ್ರೆಸ್ ಪಕ್ಷಗಳು ಜಾಹೀರಾತು ಕೊಟ್ಟುಕೊಂಡು ಸಮಜಾಯಿಷಿ ನೀಡಿವೆ. ಯಾವುದು ಸತ್ಯ?, ಯಾವುದು ಸುಳ್ಳು? ಎನ್ನುವ ಲೆಕ್ಕವನ್ನು ನಾನು ಜನರ ಮುಂದೆ ಇಡುತ್ತೇನೆ. 1924ರಿಂದ ಕಾವೇರಿ ವಿಷಯದಲ್ಲಿ ಏನೆಲ್ಲಾ ನಡೆಯಿತು? ರಾಜ್ಯಕ್ಕೆಷ್ಟು ಅನ್ಯಾಯ ಆಯಿತು ಎಂಬುದನ್ನು ಮುಂದೆ ನಾನು ವಿವರವಾಗಿ ಚರ್ಚೆ ಮಾಡುತ್ತೇನೆ" ಎಂದು ಕುಮಾರಸ್ವಾಮಿ ವಿವರಣೆ ನೀಡಿದ್ದಾರೆ.
"ಕಾಂಗ್ರೆಸ್ ಪಾದಯಾತ್ರೆಯಿಂದ ನಮ್ಮ ಪಕ್ಷಕ್ಕೇನು ಆತಂಕವಿಲ್ಲ. ಆದರೆ ಜನ ಆರೋಗ್ಯದ ಆತಂಕದಲ್ಲಿದ್ದಾರೆ. ಹಾಗಂತ, ಇವರ ಯಾತ್ರೆ ಬಗ್ಗೆ ಅಥವಾ ನಾಡಿನ ಪರ ದನಿಯೆತ್ತುವ ಬಗ್ಗೆ ನನ್ನ ತಕರಾರಿಲ್ಲ. ಆದರೆ, ಕೋವಿಡ್ ಅಟ್ಟಹಾಸದ ಹೊತ್ತಿನಲ್ಲಿ ಇದು ಖಂಡಿತಾ ಬೇಕಿರಲಿಲ್ಲ" ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
"ಗಾಂಧೀಜಿ ಅವರ ಪಾದಯಾತ್ರೆ ಬಗ್ಗೆ ಓದಿದ್ದೇನೆ. ವಿನೋಬಾ ಭಾವೆ ಅವರ ಪಾದಯಾತ್ರೆ ಬಗ್ಗೆ ಅರಿತಿದ್ದೇನೆ. ದೇವೇಗೌಡರ ಪಾದಪಾತ್ರೆಯನ್ನು ಕಣ್ಣಾರೆ ಕಂಡಿದ್ದೇನೆ. ಆದರೆ, ಇಂಥ ʼಹೈಟೆಕ್ ಪಾದಯಾತ್ರೆʼಯನ್ನು ನೋಡಿರಲಿಲ್ಲ. ಇಂಥ ದೊಂಬರಾಟದಿಂದ ಕಾನೂನಿನ ವ್ಯಾಪ್ತಿಯಲ್ಲಿರುವ ಮೇಕೆದಾಟು ಯೋಜನೆ ಜಾರಿ ಸಾಧ್ಯವಿಲ್ಲ" ಎಂದು ಟ್ವೀಟ್ ಮಾಡಿದ್ದಾರೆ.
"ಚುನಾವಣೆ ಹತ್ತಿರದಲ್ಲಿದೆ. ಕಾಂಗ್ರೆಸ್ ಸಂಘಟನೆ ಮಾಡಿಕೊಳ್ಳಲಿ. ಕೋವಿಡ್ ಇಳಿಮುಖವಾದ ನಂತರ ಅದನ್ನು ಮಾಡಲಿ. ಅದನ್ನು ಬಿಟ್ಟು ಜನರ ಜೀವದ ಜತೆ ಚೆಲ್ಲಾಟ ಆಡುವುದು ಸರಿಯಲ್ಲ. ಕಾಂಗ್ರೆಸ್ ಒಂದು ಜವಾಬ್ದಾರಿ ಪಕ್ಷವಾಗಿದ್ದರೆ ತಕ್ಷಣ ಪಾದಯಾತ್ರೆ ನಿಲ್ಲಿಸಲಿ. ಗಂಡಸ್ತನ ತೋರಿಸುವುದಕ್ಕೆ ಹೋಗಿ ಮೇಕೆದಾಟನ್ನು ಮಸಣ ಮಾಡುವುದು ಬೇಡ" ಎಂದು ಕುಮಾರಸ್ವಾಮಿ ಕಾಳಜಿ ವ್ಯಕ್ತಪಡಿಸಿದ್ದಾರೆ.
"ಕಳೆದ 4 ದಿನಗಳಿಂದ ಸರಕಾರ ತೋರಿದ ಉದಾರತೆ ಸಾಕು. ಇನ್ನೂ ಔದಾರ್ಯ ತೋರಿದರೆ ರಾಜ್ಯದ ಅವನತಿಗೆ ದಾರಿಯಾದೀತು. ಕೋವಿಡ್ ನಿಯಮ ಪಾಲಿಸುವಂತೆ ಜನರಿಗೆ ಹಿಂಸೆ ಕೊಟ್ಟು, ರಾಜಕಾರಣಿಗಳಿಗೆ ವಿನಾಯಿತಿ ಕೊಡುವುದು ಉತ್ತಮ ಆಡಳಿತದ ಲಕ್ಷಣವಲ್ಲ. ಸರಕಾರ ಕೆಚ್ಚೆದೆಯ ಕ್ರಮ ಕೈಗೊಳ್ಳಬೇಕು" ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.












Click it and Unblock the Notifications