ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕುಮಾರಸ್ವಾಮಿ ಸ್ಪರ್ಧೆ: ಜೆಡಿಎಸ್ ಕೊನೆಯ ಕ್ಷಣದ ನಿರ್ಧಾರವೇನು..?
ಮಂಡ್ಯ, ಮಾರ್ಚ್ 19: ರಾಜ್ಯದಲ್ಲಿ ಲೋಕಸಭಾ ಚುನಾವಣಾ ಅಖಾಡ ರಂಗೇರಿದೆ. ಈಗಾಗಲೇ ಚುನಾವಣೆ ಘೋಷಣೆಯಾಗಿದ್ದು, ಬಿಜೆಪಿ-ಜೆಡಿಎಸ್ ಮೈತ್ರಿ ಕಾಂಗ್ರೆಸ್ ಮಣಿಸಲು ಸಜ್ಜಾಗುತ್ತಿದ್ದರೆ, ಇತ್ತ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಪ್ರಬಲ ಅಭ್ಯರ್ಥಿಯ ಆಯ್ಕೆಯ ಲೆಕ್ಕಾಚಾರದಲ್ಲಿದೆ.
ಬಿಜೆಪಿ-ಜೆಡಿಎಸ್ ಮೈತ್ರಿ ಈ ಬಾರಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಭರವಸೆಯಲ್ಲಿದೆ. ಈಗಾಗಲೇ ಮೈತ್ರಿ ಕ್ಷೇತ್ರ ಹಂಚಿಕೆ ಕೂಡ ಬಹುತೇಕ ಅಂತಿಮವಾಗಿದೆ. ಕರ್ನಾಟಕದ 28 ಕ್ಷೇತ್ರಗಳ ಪೈಕಿ ಜೆಡಿಎಸ್ ಕೊನೆಗೂ ಮೂರು ಕ್ಷೇತ್ರಗಳನ್ನು ಪಡೆದುಕೊಂಡಿದೆ.

ಹಾಸನ, ಮಂಡ್ಯ ಹಾಗೂ ಕೋಲಾರ ಲೋಕಸಭೆ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ನಿಲ್ಲಿಸುತ್ತೇವೆ. ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲಗಳು ಇಲ್ಲ. ಬಿಜೆಪಿಗೆ 25 ಕ್ಷೇತ್ರ ಮೂರು ಕ್ಷೇತ್ರಗಳಲ್ಲಿ ನಾವು ಅಭ್ಯರ್ಥಿಗಳನ್ನು ಹಾಕುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ. ಈ ಮೂಲಕ ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್ ಪಾಲಾಗಿರುವುದು ಖಚಿತವಾಗಿದೆ.
ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಮಂಡ್ಯ ಜೆಡಿಎಸ್ಪಾಲಾದರೆ ಅಭ್ಯರ್ಥಿ ಯಾರೆನ್ನುವುದು ಮತ್ತೊಂದು ಯಕ್ಷ ಪ್ರಶ್ನೆಯಾಗಿತ್ತು. ಕಳೆದ ಬಾರಿಯಂತೆ ನಿಖಿಲ್ ಕುಮಾರಸ್ವಾಮಿ ಮತ್ತೆ ಸ್ಪರ್ಧೆಗಳಿಯಬಹುದೇ..? ಪಕ್ಷ ಸಂಘಟನೆ ಸೇರಿದಂತೆ ಈಗಾಗಲೇ ಕ್ಷೇತ್ರದಲ್ಲಿ ಸಕ್ರೀಯರಾಗಿರುವ ಸಿ.ಎಸ್ ಪುಟ್ಟರಾಜು ಅಭ್ಯರ್ಥಿಯಾಗಬಹುದೇ ಎನ್ನುವ ಕುತೂಹಲವಿತ್ತು..? ಇದೀಗ ಕೊನೆ ಕ್ಷಣದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಣಕ್ಕಿಳಿಯಲಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.

ಶತಾಯಗತಾಯ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಮಣಿಸಲು ಸಜ್ಜಾಗುತ್ತಿರುವ ಮೈತ್ರಿ ನಾಯಕರು ಈ ಬಾರಿ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸಲಿದೆ. ಈ ಹಿನ್ನೆಲೆಯಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯೇ ಮಂಡ್ಯ ಲೋಕ ಅಖಾಡದಿಂದ ಸ್ಪರ್ಧೆಗಿಳಿಯಲಿದ್ದಾರೆ ಎನ್ನಲಾಗಿದೆ.
ಹಳೆ ಮೈಸೂರು ಭಾಗದಲ್ಲಿ ಕುಮಾರಸ್ವಾಮಿ ತಮ್ಮ ವೈಯಕ್ತಿಕ ವರ್ಚಸ್ಸಿನಿಂದ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಹೀಗಾಗಿ ಕುಮಾರಸ್ವಾಮಿ ಕಣಕ್ಕಿಳಿದರೆ ಅವರ ಬಹುದೊಡ್ಡ ಅಭಿಮಾನಿ ಬಳಗ ಒಂದಾಗಿ ಪಕ್ಷದ ಪರ ಪ್ರಚಾರ ನಡೆಸಲಿದ್ದಾರೆ. ಕುಮಾರಸ್ವಾಮಿ ಅಭ್ಯರ್ಥಿಯಾದರೆ ಸ್ಥಳೀಯ ನಾಯಕರಲ್ಲಿ ಯಾವುದೇ ಅಸಮಾಧಾನ ಇಲ್ಲದೇ ಪಕ್ಷ ಚುನಾವಣೆ ಎದುರಿಸಬಹುದು ಹಾಗೂ ಬಿಜೆಪಿಯ ನಾಯಕರು ಸಹ ಬೆಂಬಲಕ್ಕೆ ನಿಲ್ಲುತ್ತಾರೆ ಎನ್ನುವುದು ಜೆಡಿಎಸ್ ನಾಯಕರ ಲೆಕ್ಕಚಾರವಾಗಿದೆ.
ಮುಖ್ಯವಾಗಿ ಕುಮಾರಸ್ವಾಮಿ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿದರೆ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿರುವ ಸುಮಲತಾ ಕೂಡ ಹೆಚ್ಚು ವಿರೋಧ ಮಾಡುವುದಿಲ್ಲ ಎನ್ನುವ ಲೆಕ್ಕಾಚಾರದ ಮೇಲೆ ಕುಮಾರಸ್ವಾಮಿಯನ್ನು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ಜೆಡಿಎಸ್ ನಾಯಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ.












Click it and Unblock the Notifications