ನಿಮ್ಮ ಕಾಲಿಗೆ ಬೀಳ್ತಿನಿ, ಟಿಕೆಟ್ ಕೊಡಿ: ಮಂಡಿಯೂರಿ ಅಳಲು ತೊಡಿಕೊಂಡ ಬಿಜೆಪಿ ಮಾಜಿ ಶಾಸಕ
ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸಾಕಷ್ಟು ಜನ ಟಿಕೆಟ್ ಆಕಾಂಕ್ಷಿಗಳಿದ್ದು, ಟಿಕೆಟ್ ಗಾಗಿ ಜನರ ಬಳಿ ಮಾಜಿ ಶಾಸಕ ಚಿಕ್ಕನಗೌಡ ಕಣ್ಣೀರಿಟ್ಟಿದ್ದಾರೆ.
ಹುಬ್ಬಳ್ಳಿ,ಮಾರ್ಚ್ 3: ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಸಾಕಷ್ಟು ಟಿಕೆಟ್ ಆಕಾಂಕ್ಷಿಗಳಿರುವ ರಾಜ್ಯ ಬಿಜೆಪಿಯಲ್ಲಿ ಈ ಬಾರಿ ಟಿಕೆಟ್ ಕೈ ತಪ್ಪುತ್ತಾ ಎನ್ನುವ ಆತಂಕ ಶುರುವಾಗಿದೆ.
ಒಂದು ಕಡೆ ರಾಜ್ಯದಲ್ಲಿ ಗುಜರಾತ್ ಮಾಡೆಲ್ ಜಾರಿಯಾಗುತ್ತಾ ಎನ್ನುವ ಚರ್ಚೆಗಳು ಹೆಚ್ಚಾಗಿದ್ದು, ಈ ತಿಂಗಳ ಕೊನೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ. ಈಗಾಗಲೇ ತಮ್ಮ ತಮ್ಮ ಕ್ಷೇತ್ರದಲ್ಲಿ ಅಬ್ಬರ ಪ್ರಚಾರವನ್ನ ನಡೆಸುತ್ತಿದ್ದು, ಕುಂದಗೋಳ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡ ಅವರು ಈ ಸಲ ವಿಧಾನಸಭೆ ಚುನಾವಣೆಯಲ್ಲಿ ತಮಗೇ ಟಿಕೆಟ್ ಸಿಗುವಂತಾಗಲಿ, ನೀವೆಲ್ಲ ಆಶೀರ್ವಾದ ಮಾಡಿ ಎನ್ನುತ್ತ ವೇದಿಕೆ ಮೇಲೆಯೇ ಕಣ್ಣೀರಿಟ್ಟು, ನೆರೆದಿದ್ದ ಜನರಿಗೆ ಸಾಷ್ಟಾಂಗ ನಮಸ್ಕಾರ ಮಾಡಿದ್ದಾರೆ.

ಇನ್ನೂ ಎಸ್.ಐ. ಚಿಕ್ಕನಗೌಡ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಸಂಬಂಧಿಯಾಗಿದ್ದು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕುಂದಗೋಳ ಕ್ಷೇತ್ರದಿಂದ ಟಿಕೆಟ್ ಕೈತಪ್ಪುವ ಭಯ ಎದುರಾಗಿದ್ದು, ಸಾರ್ವಜನಿಕವಾಗಿ ಜನರ ಮುಂದೆ ಟಿಕೆಟ್ ಗಾಗಿ ಗಳಗಳನೆ ಕಣ್ಣೀರಿಟ್ಟು ಟಿಕೆಟ್ ಗಾಗಿ ಮನವಿ ಮಾಡಿದ್ದಾರೆ.
ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಪ್ತ ಎಂ.ಆರ್.ಪಾಟೀಲ್ಗೆ ಟಿಕೆಟ್ ನೀಡಲು ನಿರ್ಧರಿಸಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ. ಅಲ್ಲದೇ ಅವರಿಗೆ ಟಿಕೆಟ್ ಸಿಗುವುದು ಪಕ್ಕಾ ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಎಸ್.ಐ.ಚಿಕ್ಕನಗೌಡ ವೇದಿಕೆ ಮೇಲೆ ಭಾವನಾತ್ಮಕವಾಗಿ ಭಾಷಣ ಮಾಡಿದ್ದಾರೆ.

ಇದೊಂದು ಬಾರಿ ನಾನು ಟಿಕೆಟ್ ಕೊಡುವಂತೆ ನಾಯಕರ ಬಳಿ ಬೇಡಿಕೆ ಇಟ್ಟಿದ್ದೇನೆ. ಕಾಲಿಗೆ ಬೀಳುತ್ತೇನೆ, ಕೈ ಮುಗಿಯುತ್ತೇನೆ ನನಗೇ ಟಿಕೆಟ್ ಕೊಡಿ. ನನ್ನ ಪರಿಸ್ಥಿತಿ ಸರಿಯಿಲ್ಲ. ನಾನು ಕಳೆದ ಎರಡು ಚುನಾವಣೆಗಳಲ್ಲಿ ಕಡಿಮೆ ಮತಗಳ ಅಂತರದಿಂದ ಸೋತಿದ್ದೇನೆ. 2018ರಲ್ಲಿ 634 ಮತಗಳಿಂದ, 2019ರಲ್ಲಿ ನಡೆದ ಉಪಚುನಾವಣೆಯಲ್ಲಿ ಸಮ್ಮಿಶ್ರ ಸರ್ಕಾರ ಇದ್ದರೂ ಕೇವಲ 1601 ಮತಗಳ ಅಂತರದಿಂದ ಪರಾಭವಗೊಂಡಿದ್ದೇನೆ. ಆದರೂ ನಾನು ಧೃತಿಗೆಡಲಿಲ್ಲ. ನನ್ನ ಕೆಲಸ ನಾನು ಮಾಡುತ್ತಿದ್ದೇನೆ. ಮತ್ತೊಮ್ಮೆ ನಿಮ್ಮ ಆಶೀರ್ವಾದ ಕೇಳುತ್ತಿದ್ದೇನೆ ಎಂದು ಜನರ ಬಳಿ ಹೇಳಿದರು.
ಈ ಕ್ಷೇತ್ರದ ಜನರು ಇದೊಂದು ಬಾರಿ ನನಗೆ ಆಶೀರ್ವಾದ ಮಾಡಲಿ. ಜನರು ತೀರ್ಮಾನ ಮಾಡಿದರೆ, ಯಾರೇ ಬಂದರೂ ಏನೂ ಮಾಡಲಿಕ್ಕೆ ಆಗುವುದಿಲ್ಲ. ದಯವಿಟ್ಟು ಆಶೀರ್ವದಿಸಿ ಎಂದು ವೇದಿಕೆ ಮೇಲಿಂದ ಜನರಿಗೆ ಕಣ್ಣೀರಿಡುತ್ತಾ ಮನವಿ ಮಾಡಿದ್ದಾರೆ.
ಈಗಾಗಲೇ ಬಿಜೆಪಿ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು, ಟಿಕೆಟ್ ಗಾಗಿ ಈಗಾಗಲೇ ಸಾಕಷ್ಟು ನಾಯಕರು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನವರ ಬಳಿ ಲಾಭಿ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.












Click it and Unblock the Notifications