ಹುಲಿ ಉಗುರು ವಿವಾದ: ನಕಲಿನೂ ಹಾಕಿಕೊಳ್ಳಬಾರದು ಎಂದ ಅರಣ್ಯ ಸಚಿವ ಈಶ್ವರ್ ಖಂಡ್ರೆ
ಬೆಂಗಳೂರು,ಅಕ್ಟೋಬರ್26: ರಾಜ್ಯದಲ್ಲಿ ಹುಲಿ ಉಗುರಿನ ಪೆಂಡೆಂಟ್ ಪ್ರಕರಣ ಸದ್ದು ಹೆಚ್ಚಾಗಿದ್ದು, ನಕಲಿನೂ ಹಾಕಿಕೊಳ್ಳಬಾರದು, ಅದನ್ನು ಹಾಕಿಕೊಂಡ್ರೆ ಬೇರೆಯವರಿಗೆ ಪ್ರಚೋದನೆ ಮಾಡಿದಂತೆ. ಅವಾಗ ಪ್ರಾಣಿಗಳ ಹತ್ಯೆಯ ಪ್ರಯತ್ನಗಳು ಆಗುತ್ತವೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದರು.
ಈ ಕುರಿತು ವಿಕಾಸಸೌಧದಲ್ಲಿ ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಹುಲಿ ಉಗುರಿನ ನಕಲಿ ಸಹಿತ ಈ ರೀತಿಯ ಪೆಂಡೆಂಟ್ ಹಾಕಿಕೊಳ್ಳಬಾರದೆಂದು ಮನವಿ ಮಾಡುತ್ತೇನೆ. ನಕಲಿಯಿಂದಲೂ ಪ್ರೇರಣೆ ಆಗುತ್ತದೆ, ನಕಲಿ ಹಾಕಿಕೊಂಡವರ ವಿರುದ್ಧ ಕ್ರಮದ ಬಗ್ಗೆ ಕಾಯಿದೆಯಲ್ಲಿ ಇಲ್ಲ. ಆದರೆ, ನಕಲಿ ಪೆಂಡೆಂಟ್ ಗಳನ್ನು ಯಾರು ಹಾಕಿಕೊಳ್ಳಬಾರದೆಂದು ಮನವಿ ಮಾಡಿದರು.

ಹುಲಿ ಉಗುರಿನ ಲಾಕೆಟ್ ಇರುವ ಸರ ಧರಿಸಿರುವವರ ವಿರುದ್ಧ ನಿತ್ಯ ದೂರುಗಳು ಬರುತ್ತಿದ್ದು, ಬಹುತೇಕರಿಗೆ ಇದು ಅಪರಾಧ ಎಂಬ ಅರಿವೇ ಇಲ್ಲ ಎಂಬುದು ಗೋಚರವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಕ್ರಮವಾಗಿ ವನ್ಯಜೀವಿ ಉತ್ಪನ್ನಗಳನ್ನು ಇಟ್ಟುಕೊಂಡಿರುವವರು ಅವುಗಳನ್ನು ಸರ್ಕಾರಕ್ಕೆ ಮರಳಿಸಲು ಕೊನೆಯ ಅವಕಾಶ ನೀಡುವ ಕಾನೂನು ಸಾಧ್ಯತೆಗಳನ್ನು ಪರಾಮರ್ಶಿಸಲಾಗುತ್ತಿದೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ತಮ್ಮ ಪೂರ್ವಜರು ಹೊಂದಿದ್ದ ವನ್ಯಜೀವಿ ಅಂಗಾಂಗದಿಂದ ಮಾಡಿದ ಟ್ರೋಫಿ, ಫಲಕ, ಪೆಂಡೆಂಟ್ ಸೇರಿದಂತೆ ಯಾವುದೇ ಉತ್ಪನ್ನಗಳನ್ನು ಅರಣ್ಯ ಇಲಾಖೆಯಿಂದ ದೃಢೀಕರಿಸಿಕೊಂಡು ಮಾಲೀಕತ್ವದ ಹಕ್ಕು ಪಡೆದುಕೊಳ್ಳಲು 2003ರವರೆಗೆ ಹಲವು ಅವಕಾಶ ನೀಡಲಾಗಿತ್ತು. ಹಲವರು ತಮ್ಮ ಬಳಿ ಇದ್ದ ವನ್ಯಜೀವಿ ಉತ್ಪನ್ನಗಳಿಗೆ ಮಾಲೀಕತ್ವದ ಹಕ್ಕು ಪಡೆದಿದ್ದಾರೆ. ಇನ್ನೂ ಅನೇಕರು ದೃಢೀಕರಣ ಮತ್ತು ಪ್ರಮಾಣ ಪತ್ರ ಪಡೆದಿಲ್ಲ ಎಂದು ಹೇಳಿದರು.
ಗ್ರಾಮೀಣ ಪ್ರದೇಶದ ಕೆಲವರ ಮನೆಗಳಲ್ಲಿ ಜಿಂಕೆ ಚರ್ಮ, ಆನೆ ದಂತದಿಂದ ಮಾಡಿದ ಕಲಾಕೃತಿಗಳು, ಜಿಂಕೆ ಮತ್ತು ಸಾರಂಗದ ಕೊಂಬು ಇತ್ಯಾದಿಗಳನ್ನು ಇಟ್ಟುಕೊಂಡಿರುತ್ತಾರೆ. ಇದು ಅಪರಾಧ ಎಂಬುದೂ ಅವರಿಗೆ ತಿಳಿದಿಲ್ಲ. ವರ್ತೂರು ಸಂತೋಷ ಪ್ರಕರಣ ವರದಿಯಾದ ಬಳಿಕ, ವನ್ಯಜೀವಿ ಉತ್ಪನ್ನಗಳ ಅಕ್ರಮ ದಾಸ್ತಾನಿನ ಬಗ್ಗೆ ಹೆಚ್ಚಾಗಿ ದೂರುಗಳು ಬರುತ್ತಿವೆ. ಕಾನೂನಿನ ಅರಿವಿಲ್ಲದ ಶ್ರೀಸಾಮಾನ್ಯರಿಗೆ ಆಗುವ ತೊಂದರೆ ತಪ್ಪಿಸಲು ಒಂದು ಬಾರಿ ಕೊನೆಯದಾಗಿ ಇಂತಹ ಅಕ್ರಮ ಸಂಗ್ರಹಣೆ/ದಾಸ್ತಾನಿನ ಬಗ್ಗೆ ಘೋಷಣೆ ಮಾಡಿಕೊಳ್ಳಲು ಮತ್ತು ಸರ್ಕಾರಕ್ಕೆ ಮರಳಿಸಲು ಅವಕಾಶ ನೀಡುವ ಬಗ್ಗೆ ಪರಾಮರ್ಶಿಸಿ, ಇದಕ್ಕೆ ಇತಿಶ್ರೀ ಹಾಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಅಳಿವಿನಂಚಿನಲ್ಲಿರುವ, ಅಮೂಲ್ಯ ಮತ್ತು ಅಪರೂಪದ ವನ್ಯ ಜೀವಿಗಳಾದ ಹುಲಿ, ಚಿರತೆ, ಚಿಂಕಾರ, ಕೃಷ್ಣಮೃಗ, ಸಾಂಬಾರ್, ಕರಡಿ ಸೇರಿದಂತೆ ಹಲವು ಕಾಡು ಪ್ರಾಣಿಗಳನ್ನು ಪರಿಶಿಷ್ಟ 1ರಲ್ಲಿ ಪಟ್ಟಿ ಮಾಡಲಾಗಿದ್ದು, ಇಂತಹ ಪ್ರಾಣಿಗಳನ್ನು ಕೊಲ್ಲುವುದು, ಬೇಟೆ ಆಡುವುದು, ಅಂತಹ ಪ್ರಾಣಿಗಳ ದೇಹದ ಯಾವುದೇ ಭಾಗದಿಂದ ತಯಾರಿಸಿದ ವಸ್ತುವನ್ನು ಅಲಂಕಾರಿಕವಾಗಿ ಮನೆಯಲ್ಲಿಡುವುದು, ಧರಿಸುವುದು ಕೂಡ ಅಪರಾಧವಾಗಿರುತ್ತದೆ ಎಂದು ತಿಳಿಸಿದರು.
ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ಎಲ್ಲರಿಗೂ ಕಾನೂನು ಸಮಾನವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಗಣ್ಯರೂ ಸೇರಿದಂತೆ ಹಲವರಿಗೆ ನೋಟಿಸ್ ನೀಡಲಾಗಿದೆ. ಅಧಿಕಾರಿಗಳು ಕಾನೂನು ರೀತ್ಯ ಮತ್ತು ಆಯಾ ಸಂದರ್ಭಕ್ಕೆ ಅನುಗುಣವಾಗಿ ತಮ್ಮ ವಿವೇಚನಾಧಿಕಾರ ಬಳಸಿ ಕ್ರಮ ಜರುಗಿಸಲಿದ್ದಾರೆ ಎಂದರು.
ಚಿತ್ರನಟರು, ಗಣ್ಯರು ನಕಲಿ ಹುಲಿ ಉಗುರಿನ ಲಾಕೆಟ್ ಕೂಡ ಧರಿಸಿದರೂ ಇತರರಿಗೆ ಪ್ರೇರಣೆ ಸಿಗುತ್ತದೆ. ಅವರಿಗೆ ಸಾವಿರಾರು ಅಭಿಮಾನಿಗಳು ಇರುತ್ತಾರೆ. ಅವರು ಕೂಡ ತಮ್ಮ ನಾಯಕನಂತೆ ಹುಲಿ ಉಗುರಿನ ಲಾಕೆಟ್ ಧರ ಧರಿಸಲು ಬಯಸುತ್ತಾರೆ. ಆಗ ಬೇಡಿಕೆ ಹೆಚ್ಚುತ್ತದೆ. ವನ್ಯಜೀವಿಗಳ ಹತ್ಯೆ ಆಗುತ್ತದೆ. ಇದಕ್ಕೆ ಪರೋಕ್ಷ ಕುಮ್ಮಕ್ಕು ನೀಡಿದಂತೆ ಆಗುತ್ತದೆ. ಹೀಗಾಗಿ ಸಾಮಾಜಿಕ ಬದ್ಧತೆಯ ದೃಷ್ಟಿಯಿಂದ ಗಣ್ಯರು, ನಟರು ನಕಲಿ ಪೆಂಡೆಂಟ್ ಕೂಡ ಧರಿಸಬಾರದು ಎಂದು ಮನವಿ ಮಾಡಿದರು.












Click it and Unblock the Notifications