
ಸೆರೆಹಿಡಿಯಲಾದ ಚಿರತೆ, ಹುಲಿಗಳಿಗೆ ಪುನರ್ವಸತಿ ಕೇಂದ್ರಗಳನ್ನು ನಿರ್ಮಿಸಲು ಅರಣ್ಯ ಇಲಾಖೆ ಪ್ರಸ್ತಾಪ
ರಾಜ್ಯದಲ್ಲಿ ಚಿರತೆ-ಮಾನವ ಸಂಘರ್ಷದ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಅರಣ್ಯ ಇಲಾಖೆಯು ಸೆರೆಹಿಡಿಯಲಾದ ಚಿರತೆಗಳು ಮತ್ತು ಹುಲಿಗಳಿಗೆ ಬಹು ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಲು ಯೋಜಿಸುತ್ತಿದೆ. ದೇಶದ ಇತರ ಭಾಗಗಳಲ್ಲಿ ಇದೇ ರೀತಿಯ ಸೌಲಭ್ಯಗಳ ಕುರಿತು ಇಲಾಖೆ ಅಧ್ಯಯನ ನಡೆಸುತ್ತಿದ್ದು, ಕೇಂದ್ರಗಳ ಅಂತಿಮ ಪ್ರಸ್ತಾವನೆಯನ್ನು ಶೀಘ್ರದಲ್ಲೇ ಸರ್ಕಾರಕ್ಕೆ ಸಲ್ಲಿಸುವುದಾಗಿ ಅರಣ್ಯ ಇಲಾಖೆ ತಿಳಿಸಿದೆ. 200 ರಿಂದ 250 ಚಿರತೆಗಳನ್ನು ಇರಿಸುವ ಸಾಮರ್ಥ್ಯದೊಂದಿಗೆ ಹಲವಾರು ಚಿರತೆ ಅಭಯಾರಣ್ಯಗಳನ್ನು ನಿರ್ಮಿಸುವ ಯೋಜನೆ ಇದಾಗಿದೆ. ಪ್ರಾಣಿಗಳಿಗೆ ಆರೈಕೆ ಮತ್ತು ದೀರ್ಘಾವಧಿಯ ಪುನರ್ವಸತಿಯನ್ನು ಒದಗಿಸುವ ಗುರಿಯನ್ನು ಹೊಂದಿದೆ.
ಚಿರತೆ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಲು ಮತ್ತು ಸೆರೆಹಿಡಿದ ಚಿರತೆಗಳನ್ನು ಸ್ಥಳಾಂತರಿಸುವ ಅಭ್ಯಾಸವನ್ನು ಕೈಬಿಡುವಂತೆ ಸಂರಕ್ಷಣಾ ಜೀವಶಾಸ್ತ್ರಜ್ಞ ಸಂಜಯ್ ಗುಬ್ಬಿ ಅವರ ಕರೆಗಳನ್ನು ಅನುಸರಿಸಿ ಈ ಕ್ರಮ ಕೈಗೊಳ್ಳಲಾಗಿದೆ. ದಿ ಹಿಂದೂ ಪ್ರಕಾರ, ಚಿರತೆಗಳು ಮತ್ತು ಮನುಷ್ಯರ ನಡುವಿನ ಸಂಘರ್ಷವನ್ನು ಪರಿಹರಿಸುವಲ್ಲಿ ಸ್ಥಳಾಂತರವು ಪರಿಣಾಮಕಾರಿಯಾಗಿಲ್ಲ ಎಂದು ಇಲಾಖೆಯು ಒಪ್ಪಿಕೊಳ್ಳುತ್ತದೆ. ಮೂಲ ಸೌಕರ್ಯಗಳು ಬಂದ ನಂತರ ಈ ಪ್ರಾಣಿಗಳಿಗೆ ಕ್ರಿಮಿನಾಶಕವನ್ನು ನೀಡಲು ಇಲಾಖೆ ಯೋಜಿಸಿದೆ.

ಬಾಲಕನ ಮೇಲೆ ಚಿರತೆ ದಾಳಿ
ರಾಜ್ಯದಲ್ಲಿ ಚಿರತೆ-ಮಾನವ ಸಂಘರ್ಷದ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಪ್ರಸ್ತಾವನೆ ಬಂದಿದೆ. ತೀರಾ ಇತ್ತೀಚಿನ ಘಟನೆಯಲ್ಲಿ, ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲೂಕಿನಲ್ಲಿ ಜನವರಿ 21 ರಂದು 11 ವರ್ಷದ ಬಾಲಕನನ್ನು ಚಿರತೆ ಕೊಂದಿತ್ತು. ಘಟನೆಯಿಂದಾಗಿ ಅರಣ್ಯಾಧಿಕಾರಿಗಳು ನಿವಾಸಿಗಳಿಗೆ ನಿರ್ದೇಶನಗಳನ್ನು ನೀಡುವಂತೆ ಸೂಚಿಸಿದ್ದು, ಕತ್ತಲಾದ ನಂತರ ತಿರುಗಾಡದಂತೆ ಮತ್ತು ಅರಣ್ಯ ಅಧಿಕಾರಿಗಳಿಗೆ ಯಾವುದೇ ಸೂಕ್ತ ಮಾಹಿತಿಯನ್ನು ಒದಗಿಸುವಂತೆ ಸೂಚಿಸಿದ್ದಾರೆ.

ಕೋಣವನ್ನು ಕೊಂದ ಚಿರತೆ
ಮೈಸೂರಿನ ಸಿದ್ದನಹುಂಡಿ ಗ್ರಾಮದಲ್ಲಿ ಎರಡು ಬಿಡಾಡಿ ಕೋಣಗಳ ಮೇಲೆ ಚಿರತೆ ದಾಳಿ ನಡೆಸಿ ಒಂದು ಕೋಣವನ್ನು ಕೊಂದು ಹಾಕಿರುವುದು ಕಳೆದ ದಿನ ಬೆಳಕಿಗೆ ಬಂದಿದೆ. ಸಿದ್ದನಹುಂಡಿ ಗ್ರಾಮದ ರತ್ನಮ್ಮ ಎಂಬುವರಿಗೆ ಸೇರಿದ ಎರಡು ಬಿಡಾಡಿ ಕೋಣಗಳು ಸೋಮವಾರ ರಾತ್ರಿ ಊರಿನ ಹೊರವಲಯದಲ್ಲಿ ಮೇಯುತ್ತಿದ್ದಾಗ ಚಿರತೆ ದಾಳಿ ನಡೆಸಿರಬಹುದೆಂದು ಹೇಳಲಾಗಿದೆ. ಒಂದು ಕೋಣದ ಮುಕ್ಕಾಲು ಭಾಗ ದೇಹವನ್ನು ಚಿರತೆ ತಿಂದು ಹಾಕಿದ್ದು ,ಮತ್ತೊಂದು ಕೋಣದ ಕುತ್ತಿಗೆಯ ಭಾಗವನ್ನು ಕಚ್ಚಿ ತೀವ್ರ ಗಾಯಗೊಳಿಸಿದೆ. ನಿರಂತರ ಚಿರತೆ ದಾಳಿಯಿಂದ ಜನತೆ ಘಾಸಿಯಾಗಿದ್ದು, ಚಿರತೆ ಸೆರೆಗೆ ಅರಣ್ಯ ಇಲಾಖೆ ತುರ್ತು ಕಾರ್ಯಾಚರಣೆ ನಡೆಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಬಂದು ಸ್ಥಳ ಪರಿಶೀಲನೆ ನಡೆಸಿ ,ಜನರಿಂದ ಮಾಹಿತಿ ಪಡೆದರು.

ರಾಜ್ಯದಲ್ಲಿ ಹೆಚ್ಚಾದ ಚಿರತೆ ಅಟ್ಟಹಾಸ
ತಿ.ನರಸೀಪುರ ತಾಲೂಕಿನಲ್ಲಿ ಮತ್ತೆ ಚಿರತೆ ದಾಳಿ ಮಾಡಿರುವ ಘಟನೆ ನಡೆದಿದ್ದು, ಮಹಿಳೆಯೊಬ್ಬರು ಸಾವಿಗೀಡಾಗಿದ್ದಾರೆ. ಕೆಲವು ತಿಂಗಳಿಂದ ಈ ಭಾಗದಲ್ಲಿ ಚಿರತೆಯ ಅಟ್ಟಹಾಸ ಹೆಚ್ಚಾಗಿದೆ. ಕನ್ನನಾಯಕನಹಳ್ಳಿ ಗ್ರಾಮದ ಸಿದ್ದಮ್ಮ (60) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.

ಗ್ರಾಮಸ್ಥರಿಂದ ಆಕ್ರೋಶ
ಮನೆಯಾಚೆಯಿದ್ದ ಸೌದೆ ಎತ್ತಿಕೊಳ್ಳಲು ಬಂದಿದ್ದ ವೇಳೆ ಈ ಘಟನೆ ನಡೆದಿದೆ. ಚಿರತೆ ದಿಢೀರ್ ದಾಳಿ ಮಾಡಿ ಸಿದ್ದಮ್ಮ ಅವರನ್ನು ಎಳೆದೊಯ್ದಿದೆ. ಈ ವೇಳೆ ಗ್ರಾಮಸ್ಥರು ಸುತ್ತುವರಿದು ಗಲಾಟೆ ಜೋರಾಗುತ್ತಿದ್ದಂತೆ ಮಹಿಳೆಯ ದೇಹ ಬಿಟ್ಟು ಚಿರತೆ ನಾಪತ್ತೆಯಾಗಿದೆ. ಘಟನಾ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಘಟನೆ ನಡೆದು ಗಂಟೆಗಳು ಕಳೆದರೂ ಸ್ಥಳಕ್ಕೆ ಆಗಮಿಸದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾಳಿ ನಡೆದ ಕೆಲವೇ ನಿಮಿಷಗಳಲ್ಲಿ ಸಿದ್ದಮ್ಮ ಮೃತಪಟ್ಟಿದ್ದಾರೆ. ಚಿರತೆ ದಾಳಿ ಮಾಡಿ ಕುತ್ತಿಗೆ ಭಾಗವನ್ನು ಕಚಿದ್ದು, ರಕ್ತ ಸುರಿದಿದೆ ಹಾಗೂ ಉಗುರಿನಿಂದ ಪರಚಿದೆ ಗಾಯಗಳಾಗಿವೆ. ತೀವ್ರ ರಕ್ತಸ್ರಾವವಾಗಿ ಸಿದ್ದಮ್ಮ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.