ಶ್ರೀಗಳ ಪ್ರಕರಣ, ಗಾಯಕಿ ಬಟ್ಟೆಯಲ್ಲಿ ವೀರ್ಯಾಣು ಪತ್ತೆ
ಬೆಂಗಳೂರು, ನ.21 : ಅತ್ಯಾಚಾರ ಆರೋಪ ಎದುರಿಸುತ್ತಿರುವ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿಗಳ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಪ್ರೇಮಲತಾ ಅವರು ಸಿಐಡಿ ಅಧಿಕಾರಿಗಳಿಗೆ ನೀಡಿರುವ ಬಟ್ಟೆಯ ಮೇಲೆ ವೀರ್ಯಾಣುವಿನ ಅಂಶ ಪತ್ತೆಯಾಗಿದೆ. ಈ ಕುರಿತು ವಿಧಿ ವಿಜ್ಞಾನ ಪ್ರಯೋಗಾಲಯ ಸಿಐಡಿಗೆ ವರದಿ ನೀಡಿದೆ.
ರಾಘವೇಶ್ವರ ಶ್ರೀಗಳು ತಮ್ಮ ಮೇಲೆ ನಿರಂತರವಾಗಿ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಿರುವ ಗಾಯಕಿ ಪ್ರೇಮಲತಾ ದಿವಾಕರ್ ಶಾಸ್ತ್ರೀ ಅವರು, ಈ ಆರೋಪಕ್ಕೆ ಪೂರಕವಾಗಿ ಅತ್ಯಾಚಾರದ ಸಂದರ್ಭದಲ್ಲಿ ಧರಿಸಿದ್ದ ಉಡುಪನ್ನು ಸಿಐಡಿ ಅಧಿಕಾರಿಗಳಿಗೆ ನೀಡಿದ್ದರು. [ರಾಘವೇಶ್ವರ ಶ್ರೀಗಳಿಗೆ ಜಾಮೀನು]

ಉಡುಪನ್ನು ಪ್ರಮುಖ ಸಾಕ್ಷಿಯಾಗಿ ಪರಿಗಣಿಸಿದ್ದ ಸಿಐಡಿ ಅಧಿಕಾರಿಗಳು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಅದನ್ನು ಪರೀಕ್ಷೆಗಾಗಿ ಕಳುಹಿಸಿದ್ದರು. ಪ್ರಯೋಗಾಲಯ ಈ ಕುರಿತ ವರದಿ ನೀಡಿದ್ದು, ಸಿಐಡಿ ಅಧಿಕಾರಿಗಳು ವರದಿಯನ್ನು ನ್ಯಾಯಾಲಯಕ್ಕೆ ನೀಡಿದ್ದಾರೆ. [ಸಂದರ್ಶನದಲ್ಲಿ ಪ್ರೇಮಲತಾ ದಿವಾಕರ್ ಹೇಳಿದ್ದೇನು?]
ಆದರೆ, ಉಡುಪಿನ ಮೇಲೆ ಪತ್ತೆಯಾಗಿರುವ ವೀರ್ಯ ರಾಘವೇಶ್ವರ ಸ್ವಾಮಿಗಳದ್ದಾ? ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಶ್ರೀಗಳ ವೈದ್ಯಕೀಯ ಪರೀಕ್ಷೆ ನಡೆದು ಅದರ ವರದಿ ಬಂದ ನಂತರ ಈ ಬಗ್ಗೆ ಸತ್ಯಾಂಶ ತಿಳಿಯಲಿದೆ. ಶ್ರೀಗಳ ವೈದ್ಯಕೀಯ ಪರೀಕ್ಷೆಗೆ ಹೈಕೋರ್ಟ್ ಏಕ ಸದಸ್ಯ ಪೀಠ ತಡೆಯಾಜ್ಞೆ ನೀಡಿದೆ. [ಆರೋಪಗಳನ್ನು ಎದುರಿಸಲು ಸಿದ್ಧ : ರಾಘವೇಶ್ವರ ಶ್ರೀ]
ತಡೆಯಾಜ್ಞೆಯನ್ನು ತೆರವುಗೊಳಿಸಿ ಎಂದು ಸಿಐಡಿ ಅಧಿಕಾರಿಗಳು ನ್ಯಾಯಾಲಕ್ಕೆ ಮಾನವಿ ಮಾಡಿದ್ದು, ಈ ಕುರಿತ ವಿಚಾರಣೆ ಬುಧವಾರ ನಡೆದಿದ್ದು, ಇಂದಿಗೆ ವಿಚಾರಣೆ ಮುಂದೂಡಲಾಗಿದೆ. ನ್ಯಾಯಮೂರ್ತಿ ವೇಣುಗೋಪಾಲ್ ಗೌಡ ಅವರ ಏಕ ಸದಸ್ಯಪೀಠ ಈ ಬಗ್ಗೆ ಇಂದು ವಿಚಾರಣೆ ಮುಂದುವರೆಸಲಿದೆ.











Click it and Unblock the Notifications