ಮೊಬೈಲ್ ನೋಡ್ತಾ ಊಟ ಮಾಡೋದು ಹಾನಿಕಾರಕ; ಆಹಾರ-ಮನಸ್ಸಿನ ಸಂಬಂಧ ವಿವರಿಸಿದ ರಾಘವೇಶ್ವರ ಭಾರತೀ ಸ್ವಾಮೀಜಿ
ಗೋಕರ್ಣ: ಮನುಷ್ಯನ ದೇಹವನ್ನು ಸುಸ್ಥಿತಿಯಲ್ಲಿಡಲು ಆಹಾರ, ನಿದ್ರೆ ಮತ್ತು ಬ್ರಹ್ಮಚರ್ಯ ಎಂಬ ಮೂರು ಅಂಶಗಳು ಪ್ರಮುಖವಾಗಿವೆ. ಈ ಮೂರು ಸಮರ್ಪಕವಾಗಿದ್ದಾಗ ಶರೀರ ಸ್ವಸ್ಥವಾಗಿರಲು ಸಾಧ್ಯ. ಮೊಬೈಲ್ ನೋಡುತ್ತಾ ಆಹಾರ ಸೇವಿಸುವುದು ಮನಸ್ಸಿಗೆ ಮಾರಕವಾಗಿದ್ದು, ತಿನ್ನುವ ಆಹಾರದಂತೆ ಮನಸ್ಸು ವರ್ತಿಸುತ್ತದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.
ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ 'ಅನ್ನಬ್ರಹ್ಮ ಚಾತುರ್ಮಾಸ್ಯ'ದ ಧರ್ಮಸಭೆಯಲ್ಲಿ ಶನಿವಾರ ಪ್ರವಚನ ಅನುಗ್ರಹಿಸಿದ ಶ್ರೀಗಳು, ಆಹಾರ, ನಿದ್ರೆ ಮತ್ತು ಬ್ರಹ್ಮಚರ್ಯ ಎಂಬ ಮೂರು ಆಧಾರ ಸ್ತಂಭಗಳನ್ನು ಸಮತೋಲನದಲ್ಲಿ ಕಾಪಾಡಿಕೊಂಡರೆ ದೇಹವೂ ಆರೋಗ್ಯಕರವಾಗಿರುತ್ತದೆ. ಮನಸ್ಸು ಶಾಂತವಾಗಿರುತ್ತದೆ ಹಾಗೂ ಆಧ್ಯಾತ್ಮಿಕ ಪ್ರಗತಿಯೂ ಸಾಧ್ಯವಾಗುತ್ತದೆ ಎಂದು ಭಕ್ತರನ್ನು ಉದ್ದೇಶಿಸಿ ತಿಳಿಸಿದರು.

ಆಹಾರ, ನಿದ್ರೆ ಮತ್ತು ಬ್ರಹ್ಮಚರ್ಯ ಇವುಗಳಲ್ಲಿ ವ್ಯತ್ಯಯ ಉಂಟಾದರೆ ಅನೇಕ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳು ಆರಂಭವಾಗುತ್ತವೆ. ಇದರ ಜೊತೆಗೆ, ದೇಹವನ್ನು ನಿಲ್ಲಿಸುವ ಪ್ರಧಾನ ಸ್ತಂಭ 'ಕರ್ಮ'ವಾಗಿದೆ. ಕರ್ಮವೇ ಜೀವಿತಾವಧಿಯನ್ನು ನಿರ್ಧರಿಸುತ್ತದೆಯಾದರೂ, ಆಹಾರ, ನಿದ್ರೆ ಮತ್ತು ಬ್ರಹ್ಮಚರ್ಯ ಸರಿಯಾಗಿರದಿದ್ದರೆ ಆರೋಗ್ಯ ಹದಗೆಡುವುದು ಅನಿವಾರ್ಯ ಎಂದರು.
ಆಹಾರ- ಮನಸ್ಸಿನ ಮಧ್ಯೆ ಸಂಬಂಧ
ಪ್ರತಿಯೊಂದು ಜೀವಿಯೂ ಸೇವಿಸುವ ಅನ್ನವು ಅನ್ನಪೂರ್ಣೇಶ್ವರಿಯ ಕೃಪೆಯ ಫಲವೇ ಆಗಿದ್ದು, ಕೋಟ್ಯಂತರ ಜೀವಿಗಳಿಗೆ ನಿರಂತರವಾಗಿ ಅನ್ನದ ಭಿಕ್ಷೆಯನ್ನು ನೀಡುತ್ತಿರುವ ಶಕ್ತಿ ದೇವಿಯದ್ದು. ಮಾನವ ದೇಹವು ಅನ್ನದಿಂದಲೇ ರೂಪುಗೊಳ್ಳುತ್ತದೆ. ತಂದೆ-ತಾಯಿ ಸೇವಿಸುವ ಆಹಾರದಿಂದಲೇ ಶಿಶುವಿನ ಜನನವಾಗುತ್ತದೆ. ಹುಟ್ಟಿದ ನಂತರವೂ ದೇಹದ ಜೀವಕೋಶಗಳು ನಿರಂತರವಾಗಿ ನವೀಕರಣಗೊಳ್ಳುತ್ತದೆ. ಈ ಪ್ರಕ್ರಿಯೆಯ ಮೂಲವೂ ಆಹಾರವೇ ಆಗಿದೆ ಎಂದು ವಿವರಿಸಿದ ಶ್ರೀಗಳು, ಆಹಾರ ಮತ್ತು ಮನಸ್ಸಿನ ನಡುವೆ ಆಪ್ತ ಸಂಬಂಧವಿದೆ. ಯಾವ ರೀತಿಯ ಆಹಾರ ಸೇವಿಸುತ್ತೇವೆಯೋ, ಅದೇ ರೀತಿಯ ಮನೋಭಾವ ಬೆಳೆದು ಬರುತ್ತದೆ. ಸಾತ್ವಿಕ ಆಹಾರವು ಶಾಂತ ಮನಸ್ಸನ್ನು ಬೆಳೆಸಿದರೆ, ಅತಿಯಾದ ಖಾರ, ಹುಳಿ ಹಾಗೂ ಅಸಮತೋಲನ ಆಹಾರ ಮನಸ್ಸಿನ ಮೇಲೂ ಪರಿಣಾಮ ಬೀರುತ್ತದೆ ಎಂದು ವಿವರಿಸಿದರು.
ನಾವು ಏನು ತಿನ್ನುತ್ತೇವೆ ಎಂಬುದಷ್ಟೇ ಅಲ್ಲ, ಊಟ ಮಾಡುವಾಗ ಏನು ಯೋಚಿಸುತ್ತೇವೆ ಎನ್ನುವುದೂ ಅಷ್ಟೇ ಮುಖ್ಯ. ಆಹಾರ ಸೇವಿಸುವ ಸಮಯದಲ್ಲಿ ದೇವರ ಸ್ಮರಣೆ, ಶಾಂತ ಮನಸ್ಸು ಹಾಗೂ ಕೃತಜ್ಞತೆಯ ಭಾವ ಇರಬೇಕು. ದೂರದರ್ಶನ, ಮೊಬೈಲ್ ಅಥವಾ ಅಶಾಂತ ಚಿಂತನೆಗಳೊಂದಿಗೆ ಊಟ ಮಾಡುವುದರಿಂದ ಆಹಾರದ ಪಾವಿತ್ರ್ಯ ಹಾಳಾಗುತ್ತದೆ ಮಾತ್ರವಲ್ಲ ಅದು ಮನಸ್ಸಿನಮೇಲೂ ಪರಿಣಾಮ ಉಂಟು ಮಾಡುತ್ತದೆ ಎಂದು ಹೇಳಿದರು.
'ಭೂತಧಾತ್ರಿ' ದೇವಿಯ ಸ್ವರೂಪ: ನಿದ್ರೆಯ ಮಹತ್ವ
ಆಯುರ್ವೇದದಲ್ಲಿ ನಿದ್ರೆಯನ್ನು 'ಭೂತಧಾತ್ರಿ' ಎಂದು ಕರೆಯಲಾಗುತ್ತದೆ. ಅಂದರೆ ಎಲ್ಲಾ ಜೀವಿಗಳನ್ನು ಪೋಷಿಸುವ ತಾಯಿ ಎಂದರ್ಥ. ಸರಿಯಾದ ಸಮಯದಲ್ಲಿ ಬರುವ ನಿದ್ರೆ ದೇಹವನ್ನು ದುರಸ್ತಿ ಮಾಡಿ ಆರೋಗ್ಯವನ್ನು ವೃದ್ಧಿಸುತ್ತದೆ. ಸಮಯಕ್ಕೆ ನಿದ್ರೆ ಮಾಡದೇ ರಾತ್ರಿ ತಡವಾಗಿ ಮಲಗುವುದು ಮತ್ತು ಹಗಲಿನಲ್ಲಿ ನಿದ್ರೆ ಮಾಡುವುದರಿಂದ ಅದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ, ಈ ಅಭ್ಯಾಸ ಆರೋಗ್ಯಕ್ಕೆ ಹಾನಿಕಾರಕ ಎಂದರು.
ಸರಿಯಾದ ಸಮಯದಲ್ಲಿ ನಿದ್ದೆ ಮಾಡಬೇಕು. ಸರಿ ಅಲ್ಲದ ಸಮಯದಲ್ಲಿ ಮಾಡುವ ನಿದ್ದರೆಯು ಆಯುರ್ವೇದದಲ್ಲಿ 'ಕಾಲರಾತ್ರಿ'ಗೆ ಹೋಲಿಕೆ ಮಾಡಲಾಗುತ್ತದೆ. ಇಂತಹ ಜೀವನಶೈಲಿ ದೇಹದ ವಾತ, ಪಿತ್ತ ಮತ್ತು ಕಫ ಸಮತೋಲನವನ್ನು ಹಾಳುಮಾಡಿ, ಜೀರ್ಣಕ್ರಿಯೆ ಹಾಗೂ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಅನ್ನವನ್ನು ದೇವರ ಪ್ರಸಾದವೆಂದು ಗೌರವಿಸಬೇಕು.ಸಮಯಕ್ಕೆ ಸರಿಯಾಗಿ ಊಟ ಮಾಡುವುದು, ಶಾಂತ ಮನಸ್ಸಿನಿಂದ ಆಹಾರ ಸೇವಿಸುವುದು, ನಿಯಮಿತ ನಿದ್ರೆ ಹಾಗೂ ಶಿಸ್ತಿನ ಜೀವನಶೈಲಿಯೇ ಆರೋಗ್ಯಕರ ಬದುಕಿನ ನಿಜವಾದ ರಹಸ್ಯ ಎಂದು ಅಭಿಪ್ರಾಯಪಟ್ಟರು.
ಶ್ರೀಕ್ಷೇತ್ರ ಹೊರನಾಡಿನ ಧರ್ಮದರ್ಶಿಗಳಾದ ಶ್ರೀ ಜಿ. ಭೀಮೇಶ್ವರ ಜೋಶಿ ದಂಪತಿಗಳು ಶ್ರೀಗುರುಭಿಕ್ಷಾ ಸೇವೆ ಸಮರ್ಪಿಸಿ, ಅನ್ನಪೂರ್ಣೇಶ್ವರಿಯ ಪ್ರಸಾದ ರೂಪದಲ್ಲಿ ಅನ್ನಬ್ರಹ್ಮ ಚಾತುರ್ಮಾಸ್ಯಕ್ಕೆ ಸುವಸ್ತುಗಳನ್ನು ಸಮರ್ಪಿಸಿದರು. ಹೊರನಾಡಿನ ಧರ್ಮದರ್ಶಿಗಳ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.
ಶ್ರೀಗಳ ವರ್ಧಂತಿಯ ಅಂಗವಾಗಿ ಅರುಣ ಮಂತ್ರ ಪೂರ್ವಕ ಗುರು ~ ಅರುಣ ನಮಸ್ಕಾರ ವಿಶೇಷವಾಗಿ ನೆರವೇರಿತು. ಅರುಣಪ್ರಶ್ನ ಪಾರಾಯಣ, ಅರುಣ ಹವನ, ಆಯುಷ್ಕಾಮೇಷ್ಠಿ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಶ್ರೀಮಾತೆ ಶ್ರೀಮತಿ ವಿಜಯಲಕ್ಷ್ಮೀ ಭಟ್ ಅವರಿಗೆ ಮಾತೆಯರು ಭಾಗಿನ ಸಮರ್ಪಿಸಿ, ಗೌರವಸಲ್ಲಿಸಿದರು.ಶ್ರೀಮಠದ ಧರ್ಮಕರ್ಮ ಖಂಡದ ಸಮರ್ಥ ಭಟ್ಟ ಮಂಕಳಲೆ, ವಿನಾಯಕ ಬೆಟ್ಕೂರು, ಕೇಶವಕಿರಣ, ಡಾ. ರಾಮಕೃಷ್ಣ ಭಟ್ ಕೂಟೇಲು, ಮಾತೃತ್ವಂನ ಪ್ರಮುಖರಾದ ಈಶ್ವರೀ ಬೇರ್ಕಡವು, ಸ್ವಾತಿ ಭಾಗ್ವತ್, ಗೀತಾ ಯಾಜಿ, ದಿನ ಪ್ರಧಾನರಾದ ಕೃಷ್ಣಾನಂದ ಭಟ್ ದಂಪತಿಗಳು ಉಪಸ್ಥಿತಿತರಿದ್ದರು.


Click it and Unblock the Notifications
