ತಾಲೂಕು ಪಂಚಾಯಿತಿ ಗಡಿ ನಿಗದಿ; ಮಾರ್ಗಸೂಚಿ ಪ್ರಕಟ
ಬೆಂಗಳೂರು, ಜುಲೈ 26; ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ತಾಲೂಕು ಪಂಚಾಯಿತಿಗಳ ಗಡಿ ನಿಗದಿ ಮಾಡಲು ಮಾರ್ಗಸೂಚಿಯನ್ನು ಪ್ರಕಟಿಸಿದೆ. ಗಡಿ ನಿಗದಿಗೊಂಡು ಅಂತಿಮ ನಕ್ಷೆ ತಯಾರಾದ ಬಳಿಕ ರಾಜ್ಯ ಚುನಾವಣಾ ಆಯೋಗ ತಾಲೂಕು ಪಂಚಾಯಿತಿ ಚುನಾವಣೆಗೆ ವೇಳಾಪಟ್ಟಿ ಪ್ರಕಟಿಸುವ ನಿರೀಕ್ಷೆ ಇದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 5, 121, 122, 123, 124, 160, 161, 162, 163, 308ಕ್ಕೆ ತಿದ್ದುಪಡಿಗಳನ್ನು ಮಾಡಲಾಗಿದೆ. ಅಲ್ಲದೇ ಪ್ರಕರಣ 308-ಇ ರನ್ವಯ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವನ್ನು ರಚಿಸಲಾಗಿದೆ.

ರಾಜ್ಯ ಸರ್ಕಾರವು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದ ಪ್ರಕರಣ 308ಕ್ಕೆ ತಿದ್ದುಪಡಿ ತಂದಿದ್ದು, ಪ್ರಕರಣ 308-ಇ ರಿಂದ 308-ಎಂ ರವರೆಗೆ ಹೊಸ ಪಕರಣಗಳನ್ನು ಅಳವಡಿಸಿದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 308(ಜಿ)ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ಗಡಿ ಗುರುತಿಸುವಿಕೆಗೆ ಪರಿಷ್ಕೃತ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಈ ಅಧಿಸೂಚನೆಯು ತಾಲೂಕು ಪಂಚಾಯಿತಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಸೀಮಾ ನಿರ್ಣಯ ನಿಗದಿಪಡಿಸುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ. ಕರ್ನಾಟಕ ಗ್ರಾಮಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 121, 122ರನ್ವಯ ಚುನಾಯಿತ ಸದಸ್ಯರ ಸಂಖ್ಯೆಯನ್ನು ನಿಗದಿಪಡಿಸುವಾಗ 2.30 ಲಕ್ಷ ಮೀರಿದ ಗ್ರಾಮೀಣ ಜನಸಂಖ್ಯೆಯನ್ನು ಹೊಂದಿರುವ ತಾಲೂಕುಗಳಲ್ಲಿ ಪ್ರತಿ 12 ಸಾವಿರಕ್ಕೆ ಕಡಿಮೆಯಿಲ್ಲದ ಜನಸಂಖ್ಯೆಗೆ ಒಬ್ಬ ಚುನಾಯಿತ ಸದಸ್ಯನು ಇರತಕ್ಕದ್ದು.
ಒಂದು ಲಕ್ಷವನ್ನು ಮೀರಿದ ಆದರೆ ಎರಡು ಲಕ್ಷದ ಮೂವತ್ತು ಸಾವಿರ ಮೀರಿರದ ಗ್ರಾಮೀಣ ಜನಸಂಖ್ಯೆಯನ್ನು ಹೊಂದಿರುವ ತಾಲೂಕುಗಳಲ್ಲಿ ಪ್ರತಿ 10 ಸಾವಿರಕ್ಕೆ ಕಡಿಮೆಯಿಲ್ಲದ ಜನಸಂಖ್ಯೆಗೆ ಒಬ್ಬ ಚುನಾಯಿತ ಸದಸ್ಯನು ಇರತಕ್ಕದ್ದು ಹಾಗೂ ಅಲ್ಲಿ ಕನಿಷ್ಠ ಹನ್ನೊಂದು ಚುನಾಯಿತ ಸದಸ್ಯರಿರತಕ್ಕದ್ದು ಮತ್ತು ಐವತ್ತು ಸಾವಿರವನ್ನು ಮೀರಿದ ಆದರೆ ಒಂದು ಲಕ್ಷವನ್ನು ಮೀರಿರದ ಗ್ರಾಮೀಣ ಜನಸಂಖ್ಯೆಯನ್ನು ಹೊಂದಿರುವ ತಾಲೂಕುಗಳಲ್ಲಿ ಕನಿಷ್ಠ ಒಂಬತ್ತು ಚುನಾಯಿತ ಸದಸ್ಯರಿರತಕ್ಕದ್ದು.
ಐವತ್ತು ಸಾವಿರಕ್ಕಿಂತ ಕಡಿಮೆಯಿರುವ ಗ್ರಾಮೀಣ ಜನಸಂಖ್ಯೆಯನ್ನು ಹೊಂದಿರುವ ತಾಲ್ಲೂಕುಗಳಲ್ಲಿ ಕನಿಷ್ಠ ಏಳು ಚುನಾಯಿತ ಸದಸ್ಯರಿರತಕ್ಕದ್ದು ಎಂದು ಅಧಿಸೂಚನೆ ಹೇಳಿದೆ.
ಕರ್ನಾಟಕ ಗ್ರಾಮ ಸ್ಮರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪುಕರಣ 124ರನ್ವಯ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಯನ್ನು ನಿರ್ಧರಿಸುವಾಗ ತಾಲೂಕಿನಲ್ಲಿರುವ ನಗರ ಸ್ಥಳೀಯ ಸಂಸ್ಥೆಗೆ ಸೇರ್ಪಡೆಯಾಗಿರುವ/ ನಗರ ಸ್ಥಳೀಯ ಸಂಸ್ಥೆಗಳಾಗಿ ಪರಿವರ್ತನಗೊಂಡಿರುವ ಪ್ರದೇಶಗಳನ್ನು ಹೊರತುಪಡಿಸಿ, ಉಳಿದ ಗ್ರಾಮೀಣ ಪ್ರದೇಶಗಳನ್ನು ಮಾತ್ರ ಗಣನಗೆ ತೆಗೆದುಕೊಳ್ಳಬೇಕು.
ತಾಲೂಕಿನಲ್ಲಿರುವ ಒಂದು ಜಿಲ್ಲಾ ಪಂಚಾಯತಿ ಕ್ಷೇತ್ರದೂಳಗೆ ಎಷ್ಟು ತಾಲೂಕು ವಂಚಾಯತಿ ಕ್ಷೇತ್ರಗಳನ್ನು ರಚಿಸಬಹುದೋ ಅಷ್ಟು ಕ್ಷೇತ್ರಗಳನ್ನು ಆ ಜಿಲ್ಲಾ ಪಂಚಾಯತ್ ಕ್ಷೇತ್ರದ ವ್ಯಾಪ್ತಿಯೊಳಗೆ ಅಳವಡಿಸಿ ರಚಿಸಬೇಕು.
ಜಿಲ್ಲಾ ಪಂಚಾಯತ್ ಕ್ಷೇತ್ರದೊಳಗ ಬರುವ ಪೂರ್ಣ ಗ್ರಾಮ ಪಂಚಾಯಿತಿಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಒಟ್ಟುಗೂಡಿಸಿ, ತಾಲೂಕು ಪಂಚಾಯಿತಿ ಕ್ಷೇತ್ರಗಳನ್ನು ನಿರ್ಧರಿಸಬೇಕು ಸಾಧ್ಯವಾಗದಿದ್ದರೆ ಗ್ರಾಮಗಳನ್ನು ಗುಂಪು ಮಾಡುವುದು, ಗ್ರಾಮಗಳನ್ನು ಗುಂಪು ಮಾಡುವ ಸಂದರ್ಭದಲ್ಲಿ ಮೂಲ ಗ್ರಾಮವನ್ನು ವಿಭಜಿಸತಕ್ಕದಲ್ಲ ಹಾಗೂ ಕಂದಾಯ ಗ್ರಾಮದ ದಾಖಲೆ ಗ್ರಾಮಗಳನ್ನು ಬೇರೆಯಾಗಿ ವಿಂಗಡಿಸದ ಕಂದಾಯ ಗ್ರಾಮದೊಂದಿಗೆ ಇರುವಂತೆ ನೋಡಿಕೊಳ್ಳತಕ್ಕದ್ದು.
ತಾಲೂಕು ಪಂಚಾಯಿತಿಗಳನ್ನು ಜಿಲ್ಲಾ ಪಂಚಾಯತಿ ಕ್ಷೇತ್ರದೊಳಗೆ ಒಟ್ಟುಗೂಡಿಸುವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ, ಒಂದು ತಾಲೂಕು ಪಂಚಾಯತಿ ಕ್ಷೇತ್ರವು ಎರಡು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿಗೆ ವಿಭಜಿಸಿ ಸೇರಿಸತಕ್ಕದ್ದಲ್ಲ. ಪ್ರತಿಯೊಂದು ಚುನಾವಣಾ ಕ್ಷೇತ್ರಗಳ ಜನಸಂಖ್ಯೆಯಲ್ಲಿ ಸಾಧ್ಯವಾಗುವಷ್ಟರ ಮಟ್ಟಿಗೆ ಹಚ್ಚಿನ ವ್ಯತ್ಯಾಸವಿರದಂತೆ ನಿಗಾವಹಿಸತಕ್ಕದ್ದು ಎಂದು ತಿಳಿಸಲಾಗಿದೆ.
ಹೊಸದಾಗಿ ರಚಿಸುವ ತಾಲೂಕು ಪಂಚಾಯತ್ ಕ್ಷೇತ್ರಗಳ ಹೆಸರನ್ನು ನಿಗದಿಪಡಿಸುವಾಗ 2015ರ ಅಧಿಸೂಚನೆಯಲ್ಲಿ ಇದ್ದಂತೆ ನಿಗದಿಪಡಿಸುವುದು, 2015ರ ಅಧಿಸೂಚನೆಯಲ್ಲಿ ಇಲ್ಲದಿದ್ದಲ್ಲಿ ಸದರಿ ಕ್ಷೇತ್ರಗಳಲ್ಲಿನ ಅತಿ ಹೆಚ್ಚು ಜನಸಂಖ್ಯೆಯಿರುವ ಗ್ರಾಮದ ಹೆಸರನ್ನು ಆ ಚುನಾವಣಾ ಕ್ಷೇತ್ರದ ಹೆಸರನ್ನಾಗಿ ಪರಿಗಣಿಸತಕ್ಕದ್ದು, ಜೊತೆಗೆ ಅತೀ ಹೆಚ್ಚು ಜನಸಂಖ್ಯೆ ಇರುವ ಗ್ರಾಮದ ಹೆಸರನ್ನಲ್ಲದೇ, ಐತಿಹಾಸಿಕ, ಶೈಕ್ಷಣಿಕ, ಸಾಂಸ್ಕೃತಿಕ, ವಾಣಿಜ್ಯ ಇತ್ಯಾದಿ ಮಹತ್ವವಿರುವ ಗ್ರಾಮದ ಹೆಸರನ್ನು ಪರಿಗಣಿಸತಕ್ಕದ್ದು ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ.












Click it and Unblock the Notifications