ಲೋಕಸಭೆ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಕುರಿತು ಮಹತ್ವದ ಹೇಳಿಕೆ ನೀಡಿದ ಸಿದ್ದರಾಮಯ್ಯ
ಬೆಂಗಳೂರು, ಫೆಬ್ರವರಿ 20: ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಜಿಲ್ಲಾ ಮಟ್ಟದಲ್ಲಿ ಸ್ಥಳೀಯ ನಾಯಕರು, ಶಾಸಕರು, ಪಕ್ಷದ ಸಮಿತಿಯವರು ಸೂಚಿಸಿದ ಅಭ್ಯರ್ಥಿಯು ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ. ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಪ್ರಾಥಮಿಕ ಸಭೆಯಾಗಿದ್ದು, ಮೊದಲ ಪಟ್ಟಿ ಸಧ್ಯದಲ್ಲಿಯೇ ಬಿಡುಗಡೆ ಮಾಡಲಿರುವುದಾಗಿ ತಿಳಿಸಿದರು.

ಈಗಿನ ಸರ್ಕಾರದಲ್ಲಿಯೂ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಭ್ರಷ್ಟಾಚಾರವನ್ನು ಕಡಿಮೆ ಮಾಡುವ ಉದ್ದೇಶ ಸರ್ಕಾರಕ್ಕಿದೆ. ಆದ್ದರಿಂದ ಭ್ರಷ್ಟಾಚಾರದಲ್ಲಿ ತೊಡಗಿರುವವರನ್ನು ಪತ್ತೆಹಚ್ಚಿ ಶಿಕ್ಷಿಸುವ ಕೆಲಸವನ್ನು ಮಾಡುತ್ತೇವೆ. ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸುವುದು ಅಸಾಧ್ಯ, ಭ್ರಷ್ಟಾಚಾರ ಇಲ್ಲ ಎಂದು ಯಾರು ಹೇಳಿದರು? ಭ್ರಷ್ಟಾಚಾರ ಮುಕ್ತವಾಗುವುದು ಅಸಾಧ್ಯ. ಕಪ್ಪು ಕುರಿಗಳು ಯಾವಾಗಲೂ ಇರುತ್ತವೆ. ಆದರೆ ಭಷ್ಟ್ರಾಚಾರಿಗಳನ್ನು ಗುರುತಿಸಿ ಶಿಕ್ಷಿಸಲಾಗುತ್ತದೆ ಎಂದು ಹೇಳಿದರು.
ವೈದ್ಯಕೀಯ ಕಾಲೇಜುಗಳು ಪ್ರಾರಂಭ ಆಗಿರುವುದರಿಂದ, ತನಿಖೆಯು ಮುಂದುವರಿಯಲಿದ್ದರೂ, ಕೆಲಸ ಮಾಡಿರುವ ಗುತ್ತಿಗೆದಾರರ ಬಾಕಿ ಬಿಲ್ ಗಳನ್ನು ಷರತ್ತುಬದ್ಧವಾಗಿ ತನಿಖೆ ವರದಿಯನ್ನು ನಿರೀಕ್ಷಿಸಿ ಪಾವತಿಸಲು ಸಚಿವಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಕಾಲೇಜುಗಳ ಕಾಮಗಾರಿ ನಿಲ್ಲಬಾರದು ಎಂಬ ದೃಷ್ಟಿಯಿಂದ ಈ ತೀರ್ಮಾನ ಕೈಗೊಂಡಿರುವುದಾಗಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಹಿಂದುಳಿದ ವರ್ಗಗಳ ವಸತಿ ನಿಲಯಗಳಿಗೆ ಅಕ್ಕಿ ಕೊರತೆ ಕಾಡುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಅಕ್ಕಿ ಹಾಸ್ಟೆಲ್ ಗಳಿಗಾಗಲಿ, ಫಲಾನುಭವಿಗಳಿಗಾಗಲಿ ನೀಡುವ ಅಕ್ಕಿಸರಬರಾಜಿಗೆ ಕೊರತೆ ಇಲ್ಲ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು. ತುಂಗಭದ್ರಾ ನದಿದಂಡೆಯಲ್ಲಿ ಮರಳು ದಂಧೆ ಅವ್ಯಾಹತವಾಗಿ ನಡೆಯುತ್ತಿರುವ ಬಗ್ಗೆ ಪ್ರಶ್ನಿಸಲಾಗಿ, ಮರಳು ದಂಧೆ ನಡೆಯುತ್ತಿದ್ದಲ್ಲಿ , ಕಾರಣಕರ್ತರನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಕ್ರಮ ಮರಳು ದಂಧೆಯನ್ನು ನಿಲ್ಲಿಸಲಾಗುವುದು ಎಂದರು.
ಸಂಕಷ್ಟದಲ್ಲಿರುವ ರೈತರಿಗೆ ಬರಪರಿಹಾರ ಸಮರ್ಪಕವಾಗಿ ತಲುಪುತ್ತಿಲ್ಲ ಎಂಬ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರಿಸಿ, ಸರ್ಕಾರ 5 ತಿಂಗಳ ಹಿಂದೆ ಕೇಂದ್ರ ಸರ್ಕಾರಕ್ಕೆ ಮೂರು ಮನವಿಗಳನ್ನು ಸಲ್ಲಿಸಿದೆ. 35 ಸಾವಿರ ಕೋಟಿ ರೂ.ಗಳ ಬೆಳೆ ನಷ್ಟವಾಗಿದ್ದು, ಎನ್ ಡಿ ಆರ್ ಎಫ್ ಮಾರ್ಗಸೂಚಿಗಳ ಪ್ರಕಾರ , ರಾಜ್ಯ ಸರ್ಕಾರ 18171 ಕೋಟಿ ರೂ.ಗಳ ಬರಪರಿಹಾರವನ್ನು ಕೇಂದ್ರಕ್ಕೆ ಕೋರಿದೆ. ಆದರೆ ಇಂದಿನವರೆಗೆ ಕೇಂದ್ರದಿಂದ ಹಣಬಿಡುಗಡೆ ಸೇರಿದಂತೆ ಯಾವುದೇ ಕ್ರಮ ಆಗಿಲ್ಲ ಎಂದು ಹೇಳಿದರು.












Click it and Unblock the Notifications