ನವೀಕರಣಕ್ಕೆ ಅಗ್ನಿ ಸುರಕ್ಷತಾ ಪ್ರಮಾಣಪತ್ರ: ಹೈಕೋರ್ಟ್ ರೂಲಿಂಗ್, ಖಾಸಗಿ ಶಾಲೆಗಳು ನಿರಾಳ
ಬೆಂಗಳೂರು, ಸೆಪ್ಟಂಬರ್ 23: ಖಾಸಗಿ ಶಾಲೆಗಳ ಮಾನ್ಯತೆ ನವೀಕರಣಕ್ಕೆ ಕಟ್ಟಡದಲ್ಲಿ ಅಗ್ನಿ ಸುರಕ್ಷತಾ ಕ್ರಮ ಪಾಲಿಸುವ ಮೂಲಕ ಅಗ್ನಿ ಸುರಕ್ಷತಾ ಪ್ರಮಾಣಪತ್ರ ವಿಚಾರದಲ್ಲಿ ಖಾಸಗಿ ಶಾಲೆಗಳಲ್ಲಿ ಹೈಕೋರ್ಟ್ ನಲ್ಲಿ ಗೆಲುವು ದೊರೆತಿದೆ. ಎನ್ ಒಸಿ ಪಡೆಯಬೇಕೆಂದು ಕಡ್ಡಾಯಗೊಳಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿದ್ದ ಎರಡು ಪ್ರತ್ಯೇಕ ಸುತ್ತೋಲೆಗಳನ್ನು ಹೈಕೋರ್ಟ್ ರದ್ದುಪಡಿಸಿದೆ.
ಇದರಿಂದಾಗಿ ಖಾಸಗಿ ಶಾಲೆಗಳು ಸದ್ಯಕ್ಕೆ ನಿರಾಳರಾಗುವಂತಾಗಿದೆ, ಇಲ್ಲವಾದರೆ ಅಗ್ನಿಶಾಮಕ ಪ್ರಮಾಣಪತ್ರ ಪಡೆಯಲು ಹರಸಾಹಸ ಪಡಬೇಕಾಗಿತ್ತು ಮತ್ತು ಸಾವಿರಾರು ರೂಪಾಯಿ ಹಣ ಖರ್ಚು ಮಾಡಬೇಕಿತ್ತು. ನ್ಯಾಯಾಲಯದ ಆದೇಶದಿಂದಾಗಿ ಅದೆಲ್ಲಾ ತಪ್ಪಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ ಸುತ್ತೋಲೆಗಳನ್ನು ಪ್ರಶ್ನಿಸಿ ಪ್ರಜ್ಞಾ ಎಜುಕೇಷನ್ ಸೊಸೈಟಿ ಸೇರಿದಂತೆ 22 ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಸಲ್ಲಿಸಿದ್ದ ತಕರಾರು ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಅಶೋಕ್ ಎಸ್.ಕಿಣಕಿ ಅವರ ಪೀಠ ಈ ಆದೇಶ ಮಾಡಿದೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, 2020-21ಕ್ಕಿಂತ ಮೊದಲು ಕಾರ್ಯನಿರ್ವಹಿಸುತ್ತಿದ್ದ ರಾಜ್ಯ ಪಠ್ಯಕ್ರಮದ ಖಾಶಗಿ ಶಾಲೆಗಳಿಗೆ ಸರ್ಕಾರದ ಸುತ್ತೋಲೆಗಳು ಅನ್ವಯಿಸುವುದಿಲ್ಲ ಎಂದು ತಿಳಿಸಿ, ಎರಡೂ ಸುತ್ತೋಲೆಗಳನ್ನು ರದ್ದುಪಡಿಸಿದೆ.
ಪ್ರಕರಣದ ಹಿನ್ನಲೆ
ಸಾರ್ವಜನಿಕ ಶಿಕ್ಷಣ ಇಲಾಖೆ 2020ರ ನ.10ರಂದು ಮತ್ತು 2021ರ ಮಾ.10ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿ, ಖಾಸಗಿ ಶಾಲೆಗಳ ಮಾನ್ಯತೆ ನವೀಕರಣಕ್ಕೆ ಕಡ್ಡಾಯವಾಗಿ ಅಗ್ನಿ ಸುರಕ್ಷತಾ ಕ್ರಮಗಳನ್ನು ಕೈಗೊಂಡು, ಆ ಕುರಿತು ಪ್ರಮಾಣಪತ್ರ ಪಡೆದುಕೊಳ್ಳಬೇಕು.
ಜೊತೆಗೆ ರಾಷ್ಟ್ರೀಯ ಕಟ್ಟಡ ಸಂಹಿತೆ ಪ್ರಕಾರ ಎಂಜಿನಿಯರ್ ಗಳಿಂದ ಮೌಲ್ಯಮಾಪನ ಮಾಡಿಸಬೇಕು. ಆದರೆ, ಈ ನಿಯಯ ಸರ್ಕಾರಿ ಶಾಲೆಗಳಿಗೆ ಅನ್ವಯವಾಗುವುದಿಲ್ಲ ಎಂಬುದಾಗಿ ಹೇಳಿದೆ. ಆ ಮೂಲಕ ತಾರತಮ್ಯ ಎಸಗಲಾಗಿದೆ ಎಂದು ಅರ್ಜಿ ಸಲ್ಲಿಸಿದ್ದ ಶಾಲೆಗಳು ಆಕ್ಷೇಪಿಸಿದ್ದವು.












Click it and Unblock the Notifications