FIR on Minister: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿ ಮೂವರಿಗೆ ಸಂಕಷ್ಟ, ಬಂಧನ ಸಾಧ್ಯತೆ!
ಬೆಳಗಾವಿ, ನವೆಂಬರ್ 06: ಬೆಳಗಾವಿ ತಹಶೀಲ್ದಾರ ಕಚೇರಿಯಲ್ಲಿ ಸೋಮವಾರ ತಡರಾತ್ರಿ ನಡೆದ ಪ್ರಕರಣದಿಂದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಖಾತೆ ಸಚಿವೆ ಲಕ್ಮೀ ಹೆಬ್ಬಾಳ್ಕರ್ ಸೇರಿದಂತೆ ಮೂವರಿಗೆ ಕಾನೂನು ಸಂಕಷ್ಟ ಎದುರಾಗಿದೆ. ಸಚಿವೆ ಸೇರಿ ಮೂವರ ವಿರುದ್ಧ ಪೊಲೀಸರು FIR ದಾಖಲಿಸಿದ್ದಾರೆ. ಪ್ರಕರಣದ ತನಿಖೆಯು ಚುರುಕಿನಿಂದ ಸಾಗಿದ್ದು, ಆರೋಪಿಗಳನ್ನು ಬಂಧಿಸುವ ಸಾಧ್ಯತೆಯು ಇದೆ ಎನ್ನಲಾಗುತ್ತಿದೆ.
ಬೆಳಗಾವಿ ತಾಲೂಕು ಕಚೇರಿಯಲ್ಲಿ ನಡೆಯುತ್ತಿರುವ ಅನ್ಯಾಯದ, ಕೊಟ್ಟ ಕಿರುಕುಳ ತಾಳಲಾರದೇ ತಹಶೀಲ್ದಾರ ಕೊಠಡಿಯಲ್ಲಿ ದ್ವಿತೀಯ ದರ್ಜೆ ಸಹಾಯಕ ರುದ್ರಣ್ಣ ಯಡವಣ್ಣವರ ಸೋಮವಾರ ತಡರಾತ್ರಿ ನೇಣಿಗೆ ಕೊರಳೊಡ್ಡಿದ್ದ ಪ್ರಕರಣ ಬೆಳಕಿಗೆ ಬಂದಿತ್ತು.

ಈ ಅಧಿಕಾರಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವೆ ಲಕ್ಮೀ ಹೆಬ್ಬಾಳ್ಕರ್ ಸೇರಿದಂತೆ ಮೂವರ ವಿರುದ್ಧ ಖಡೇಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಿದ್ದಾರೆ. ಶೀಘ್ರವೇ ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಪ್ತ ಸೋಮು, ತಹಶೀಲ್ದಾರ ಬಸವರಾಜ ನಾಗರಾಳ ಮತ್ತು ದಿವಂಗತ ರುದ್ರಣ್ಣ ಸಹೋದ್ಯೋಗಿ ಅಶೋಕ ಕಬ್ಬಲಿಗೇರ ಮೇಲೆ ದಿ. ರುದ್ರಣ್ಣನ ತಾಯಿ ಮಲ್ಲವ್ವ ಅವರು ದೂರು ನೀಡಿದ್ದಾರೆ. ತಮ್ಮ ಮಗನ ಸಾವಿಗೆ ಇವರೇ ಕಾರಣ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮೃತ ಅಧಿಕಾರಿಯ ತಾಯಿಯು ಕೊಟ್ಟಿರುವ ದೂರು ಪರಿಗಣಿಸಿದ ಖಡೇಬಜಾರ್ ಠಾಣೆ ಪೊಲೀಸರು ನೂತನ ಬಿಎನ್‌ಎಸ್ ಕಾಯ್ದೆ ಅಡಿಯಲ್ಲಿ ಮೂವರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.
ಇನ್ನೂ ಕಚೇರಿಯಲ್ಲಿ ಸಾಕಷ್ಟು ಅನ್ಯಾಯ ನಡೆಯುತ್ತಿದೆ ಎಂದು ಡೆತ್ ನೋಟ್ ಬರೆದಿಟ್ಟು, ವಾಟ್ಸಾಪ್ ಗ್ರೂಪ್‌ನಲ್ಲಿ ಸಂದೇಶ ಕಳುಹಿಸಿದ್ದ ಅಧಿಕಾರಿಗೆ ತಹಶೀಲ್ದಾರ್ ಕೊಠಡಿಯಲ್ಲೇ ನೇಣಿಗೆ ಕೊರಳೊಡ್ಡಿದ್ದರು. ತಡರಾತ್ರಿ ಸಾಯುವ ಮುನ್ನ ರುದ್ರಣ್ಣ ಅವರು ಅಧಿಕಾರಿ/ ಸಿಬ್ಬಂಧಿಗಳ ವಾಟ್ಸಪ್ ಗ್ರೂಪ್‌ನಲ್ಲಿ ನನ್ನ ಸಾವಿಗೆ ಮೂರು ಜನ ಕಾರಣವೆಂದು ಬರೆದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ವಾಟ್ಸಾಪ್ ಗ್ರೂಪ್‌ನಲ್ಲಿ ಮೆಸೇಜ್ ನೋಡಿಯೂ ನಿರ್ಲಕ್ಷ್ಯ
ಹೀಗೆ ವಾಟ್ಸಾಪ್ ಗ್ರೂಪ್‌ನಲ್ಲಿ ರುದ್ರಣ್ಣ ಅವರು ಸಂದೇಶ ಬರುತ್ತಿದ್ದಂತೆ ಅದನ್ನು ನಿರ್ಲಕ್ಷ್ಯ ಮಾಡಿದ ತಹಶೀಲ್ದಾರ್ ಬಸವರಾಜ ನಾಗರಾಳ ಮೃತ ಅಧಿಕಾರಿಯನ್ನು ಗ್ರೂಪ್‌ನಿಂದ ರಿಮೂವ್ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಸ್ಕ್ರೀನ್ ಶಾಟ್ ಪೊಲೀಸರಿಗೆ ಲಭ್ಯವಾಗಿದೆ.
ಅಲ್ಲದೇ, ಅಧಿಕಾರಿ ಬರೆದಿಟ್ಟ ಡೆತ್‌ನೋಟ್, ಸಂದೇಶ ಇನ್ನಿತರ ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇತ್ತೀಚೆಗೆ ಶಿವಮೊಗ್ಗ ಅಧಿಕಾರಿಯೊಬ್ಬರು ಸಹ ವಾಲ್ಮಿಕಿ ನಿಗಮದ ಹಗರಣ ಸಂಬಂಧ ಆತ್ಮಹತ್ಯೆ ಮಾಡಿಕೊಂಡಿದ್ದರು. ಅದರ ಬೆನ್ನಲ್ಲೆ ಮತ್ತೊಬ್ಬರು ಸಾವಿಗೀಡಾಗಿದ್ದಾರೆ.












Click it and Unblock the Notifications