ಸಿಟಿ ರವಿ ಮೇಲೆ ಎಫ್‌ಐಆರ್: ಸರ್ಕಾರದಿಂದ ಮಹತ್ವದ ಮಾಹಿತಿ!
ಮಂಡ್ಯದ ಮದ್ದೂರಿನ ಸಾಮೂಹಿಕ ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣ ಮಾಡಿರುವ ಆರೋಪದ ಮೇಲೆ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ಧ ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಳ್ಳಲಾಗಿದೆ. ಈ ಬಗ್ಗೆ ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ನನ್ನ ರಕ್ತ ಪ್ಯೂರ್ ಹಿಂದುತ್ವ ಬೆರಕೆ ಅಲ್ಲ ಎಂದಿದ್ದಾರೆ. ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಜಿ. ಪರಮೇಶ್ವರ್ ಅವರು ಸಹ ಮಾತನಾಡಿದ್ದಾರೆ. ಅಲ್ಲದೇ ಎಬಿವಿಪಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎನ್ನುವ ಬಗ್ಗೆಯೂ ಜಿ. ಪರಮೇಶ್ವರ್ ಅವರು ಮಾತನಾಡಿದ್ದಾರೆ.
ನಾನು ಯಾವುದೇ ಎಬಿವಿಪಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿ ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಿಪಟೂರು ತಾಲ್ಲೂಕು ಪ್ರಗತಿ ಪರಿಶೀಲನಾ ಸಭೆಗಾಗಿ ಹೋಗಿದ್ದೆ. ಸಭೆ ಮುಗಿಸಿಕೊಂಡು ವಾಪಸ್ ಆಗುವಾಗ ರಾಣಿ ಅಬ್ಬಕ್ಕ ಅವರ ಮೆರವಣಿಗೆ ಬರುತ್ತಿತ್ತು. ಸ್ಥಳೀಯ ಶಾಸಕರಾದ ಷಡಕ್ಷರಿ ಅವರು ಜೊತೆಗಿದ್ದರು. ಹೂ ಸಮರ್ಪಿಸುವಂತೆ ಕೇಳಿಕೊಂಡ ಹಿನ್ನೆಲೆಯಲ್ಲಿ ಕಾರು ನಿಲ್ಲಿಸಿ ಹೂ ಹಾಕಿ ಬಂದಿದ್ದೇನೆ. ಯಾವ ಎಬಿವಿಪಿ ಕಾರ್ಯಕ್ರಮದಲ್ಲಿಯೂ ಭಾಗವಹಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೇ ವಿವಾದ ಮಾಡುವುದಿದ್ದರೆ ಮಾಡಲಿ, ತೊಂದರೆ ಇಲ್ಲ. ನನ್ನ ಸೈದ್ಧಾಂತಿಕ ಬದ್ಧತೆಯನ್ನು ಯಾರು ಪ್ರಶ್ನೆ ಮಾಡಲು ಆಗುವುದಿಲ್ಲ. ನಾನು ನಿಷ್ಠಾವಂತ ಕಾಂಗ್ರೆಸ್ ಸದಸ್ಯ. ನಾನು ಕಾಂಗ್ರೆಸ್ ಸದಸ್ಯನಾಗಿಯೇ ಸಾಯುತ್ತೇನೆ. (I am a true Congress man. I will die as a Congress man). ಕೀಳು ರಾಜಕೀಯ ಮಾಡುವವರು ಮಾಡಲಿ. ಪರಮೇಶ್ವರ ಏನು ಅಂತ ಇಡೀ ರಾಜ್ಯದಲ್ಲಿ ಪ್ರತಿಯೊಬ್ಬರಿಗೆ ಗೊತ್ತಿದೆ. ಕಳೆದ ಮೂವತ್ತೈದು ವರ್ಷದಿಂದ ಜನರಿಗೆ ನನ್ನ ರಾಜಕಾರಣ ಏನೆಂಬುದು ಗೊತ್ತಿದೆ. ಅದನ್ನು ಮತ್ತೆ ಸಾಬೀತುಪಡಿಸಲು ಹೋಗುವುದಿಲ್ಲ ಎಂದಿದ್ದಾರೆ.
ಒಳ ಮೀಸಲಾತಿ ಕುರಿತು ಪ್ರತಿಕ್ರಿಯಿಸಿರುವ ಅವರು, ಎಲ್ಲ ರೀತಿಯ ಲೆಕ್ಕಚಾರ ಮಾಡಿ ಜಾತಿಸಂಖ್ಯೆಯ ಆಧಾರದ ಮೇಲೆ, ಜಸ್ಟೀಸ್ ನಾಗಮೋಹನ್ ದಾಸ್ ಅವರ ಆಯೋಗ ಮಾಡಿದ್ದ ವರ್ಗದ ಹಿನ್ನೆಲೆಯಲ್ಲಿ ಸಚಿವ ಸಂಪುಟ ನಿರ್ಧಾರ ತೆಗೆದುಕೊಂಡಿದೆ. ಮೂರು ವರ್ಗಗಳನ್ನು ಮಾಡಿ 6, 6, 5 ಮೀಸಲಾತಿ ಮಾಡಿದ್ದಾರೆ. ಅವರಿಗೆ ಒಪ್ಪಿಗೆಯಾಗಿಲ್ಲ ಎಂಬ ಕಾರಣದಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಇದು ಮುಖ್ಯಮಂತ್ರಿಗಳ ಗಮನಕ್ಕೆ ಹೋಗಿದೆ. ಮುಖ್ಯಮಂತ್ರಿಗಳು ಮತ್ತು ಸರ್ಕಾರ ಯಾವ ರೀತಿ ತೀರ್ಮಾನ ಮಾಡುತ್ತಾರೆ ನೋಡಬೇಕು. ನಾವು ಒಬ್ಬರೆ ತೀರ್ಮಾನ ಮಾಡಲು ಆಗುವುದಿಲ್ಲ ಎಂದು ಹೇಳಿದ್ದಾರೆ.
ಸಿಟಿ ರವಿ ಪ್ರಕರಣದ ಬಗ್ಗೆ ಜಿ ಪರಮೇಶ್ವರ್ ಹೇಳಿದ್ದೇನು ?
ಇನ್ನು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಅವರ ಬಗ್ಗೆಯೂ ಗೃಹ ಸಚಿವ ಜಿ. ಪರಮೇಶ್ವರ್ ಅವರು ಪ್ರಚೋದನಾತ್ಮಕ ಭಾಷಣ ಮಾಡಿದ ಆರೋಪದ ಮೇಲೆ ಸಿ.ಟಿ.ರವಿ ಅವರ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ. ಪೊಲೀಸರು ಮುಂದಿನ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.












Click it and Unblock the Notifications