'ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಜಯವಾಗಲಿ'!!
ಬೆಂಗಳೂರು, ತುಮಕೂರು, ಅ 23: ಮನಿಲಾಂಡ್ರಿಂಗ್ ಕೇಸ್ ನಲ್ಲಿ ಜೈಲುಹಕ್ಕಿಯಾಗಿದ್ದ, ರಾಜ್ಯದ ಪ್ರಭಾವೀ ಮುಖಂಡ ಡಿ.ಕೆ.ಶಿವಕುಮಾರ್ ಅವರಿಗೆ ಕೊನೆಗೂ ಬೇಲ್ ಭಾಗ್ಯ ಸಿಕ್ಕಿದೆ.
ದೆಹಲಿ ಹೈಕೋರ್ಟ್, ಡಿಕೆಶಿಗೆ ಷರತ್ತುಬದ್ದು ಜಾಮೀನು ನೀಡಿದೆ. ಪ್ರತೀ ಬಾರಿ ಕೋರ್ಟ್ ನಲ್ಲಿ ವಿಚಾರಣೆ ನಡೆದಾಗಲೂ, ಇಂದು ಸಿಗಬಹುದು, ನಾಳೆ ಬೇಲ್ ಸಿಗಬಹುದು ಎಂದು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದ ಅವರ ಅಭಿಮಾನಿಗಳಿಗೆ ಮೂರು ದಿನಗಳ ಮುಂಚಿತವಾಗಿಯೇ ದೀಪಾವಳಿ ಬಂದಂತಾಗಿದೆ.
ಅನಾರೋಗ್ಯದ ಕಾರಣದಿಂದ ಕೋರ್ಟ್, ಡಿಕೆಶಿಗೆ ಜಾಮೀನು ನೀಡಿದ್ದು, ಬೇಲ್ ಸಿಗುತ್ತಿದ್ದಂತೆಯೇ, ಶ್ರೀರಾಮನಿಗೆ ಲಕ್ಷ್ಮಣನಂತಿರುವ ಅವರ ಸಹೋದರ ಡಿ.ಕೆ.ಸುರೇಶ್, ಕೋರ್ಟ್ ಆವರಣದಲ್ಲೇ ಕಣ್ಣೀರು ಹಾಕಿದ್ದಾರೆ.

48ದಿನಗಳ ನಂತರ ಬೇಲ್ ಸಿಕ್ಕಿರುವುದಕ್ಕೆ, ಅವರ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇಲ್ಲ. ರಾಮನಗರ, ಕುಣಿಗಲ್, ತುಮಕೂರು, ಮಳವಳ್ಳಿ, ಚಿಕ್ಕಬಳ್ಳಾಪುರ, ಮಂಡ್ಯದಲ್ಲಿ ಅವರ ಅಭಿಮಾನಿಗಳು ಕುಣಿದು ಕುಪ್ಪಳಿಸುತ್ತಿದ್ದಾರೆ. ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ನಿವಾಸದ ಮುಂದೆ ಸಂಭ್ರಮಾಚರಣೆ ನಡೆಯುತ್ತಿದೆ.
"ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಜಯವಾಗಲಿ" ಎಂದು ಅಭಿಮಾನಿಗಳ ಜಯಘೋಷ ಮುಗಿಲುಮುಟ್ಟಿದೆ. ದೀಪಾವಳಿ ಹಬ್ಬವನ್ನೂ ನಾಚಿಸುವಂತೆ, ಪಟಾಕಿಗಳು ಸದ್ದು ಮಾಡುತ್ತಿವೆ.
"ಡಿಕೆ ಬಾಸ್ ಗೆ ಜಯವಾಗಲಿ, ಕಾಂಗ್ರೆಸ್ ಪಕ್ಷಕ್ಕೆ ಜಯವಾಗಲಿ, ನ್ಯಾಯಕ್ಕೆ, ಸತ್ಯಕ್ಕೆ, ಬಡವರ ಬಂಧು ಡಿಕೆಶಿಗೆ ಜೈ" ಎಂದು ಅವರ ಅಭಿಮಾನಿಗಳು, ಒಬ್ಬರಿಗೊಬ್ಬರು ಸಿಹಿಹಂಚಿ ಸಂಭ್ರಮವನ್ನು ಆಚರಿಸುತ್ತಿದ್ದಾರೆ.












Click it and Unblock the Notifications