ಬಿ ರಿಪೋರ್ಟ್ ಸಲ್ಲಿಕೆ ಆರೋಪಮುಕ್ತವಲ್ಲ: ಕರ್ನಾಟಕ ಹೈಕೋರ್ಟ್
ಬೆಂಗಳೂರು, ನ.23: ಅಪರಾಧ ಪ್ರಕರಣದಲ್ಲಿ ಆರೋಪಗಳಿಗೆ ಸಾಕ್ಷ್ಯಧಾರಗಳಿಲ್ಲ ಎಂದು ತಿಳಿಸಿ ಪೊಲೀಸರು ಸಲ್ಲಿಸಿದ 'ಬಿ' ರಿಪೋರ್ಟ್ ನ್ಯಾಯಾಲಯದ ಅಂಗೀಕಾರಕ್ಕೆ ಬಾಕಿಯಿರುವಾಗ ಆರೋಪಿತರು ಪ್ರಕರಣದಿಂದ ದೋಷಮುಕ್ತನೆಂದು ಅರ್ಥವಲ್ಲ ಎಂದು ಹೈಕೋರ್ಟ್ ಹೇಳಿದೆ.
ಅಲ್ಲದೆ, ಅಂತಹ ಸಂದರ್ಭದಲ್ಲಿ ಆರೋಪಿಗೆ ಪಾಸ್‌ಪೋರ್ಟ್ ಅಥವಾ ಪ್ರಯಾಣ ದಾಖಲೆ ವಿತರಿಸುವುದಕ್ಕೆ ನಿರಾಕರಿಸಲು ಪಾಸ್‌ಪೋರ್ಟ್ ಪ್ರಾಧಿಕಾರಕ್ಕೆ ಅಧಿಕಾರವಿರುತ್ತದೆ ಎಂದೂ ಸಹ ಆದೇಶಿಸಿದೆ.
ಅಪರಾಧ ಪ್ರಕರಣದಲ್ಲಿ ಆರೋಪಿಯಾಗಿದ್ದ ಹಿನ್ನೆಲೆಯಲ್ಲಿ ಪಾಸ್‌ಪೋರ್ಟ್ ತಮ್ಮ ಸುಪರ್ದಿಗೆ ಒಪ್ಪಿಸುವಂತೆ ಬೆಂಗಳೂರು ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿ ನೀಡಿದ್ದ ಸೂಚನೆ ಪ್ರಶ್ನಿಸಿ ಮೈಸೂರು ನಿವಾಸಿ ಕಾಜಲ್ ನರೇಶ್ ಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಹೈಕೋರ್ಟ್ ಏನು ಹೇಳಿದೆ? "ಪಾಸ್‌ಪೋರ್ಟ್ ಕಾಯ್ದೆ-1967ರ ಸೆಕ್ಷನ್ 6(2)(ಎಫ್) ಪ್ರಕಾರ, ಕ್ರಿಮಿನಲ್ ಆರೋಪ ಹೊತ್ತಿರುವವರ ವಿರುದ್ಧ ಭಾರತದ ಯಾವುದೇ ನ್ಯಾಯಾಲಯದಲ್ಲಿ ವಿಚಾರಣೆ ಬಾಕಿಯಿರುವಾಗ ಆರೋಪಿತರಿಗೆ ಪಾಸ್‌ಪೋರ್ಟ್ ಅಥವಾ ಪ್ರಯಾಣ ದಾಖಲೆಯನ್ನು ನಿರಾಕರಿಸುವ ಅಧಿಕಾರ ಪಾರ್ಸ್‌ಪೋಟ್ ಪ್ರಾಧಿಕಾರ ಹೊಂದಿರುತ್ತದೆ. ಆದರೆ, ಕ್ರಿಮಿನಲ್ ಪ್ರಕರಣದ ವಿಚಾರಣಾ ಪ್ರಕ್ರಿಯೆ ಎದುರಿಸುತ್ತಿರುವ ಅರ್ಜಿದಾರರು, ಖುಲಾಸೆಗೊಂಡರೆ ಅಥವಾ ಆರೋಪ ಮುಕ್ತರಾದರೆ ಅಥವಾ ಅವರ ವಿರುದ್ಧದ ಪ್ರಕರಣ ರದ್ದಾದರೆ, ಕಾಯ್ದೆಯ ಸೆಕ್ಷನ್ 6(2)(ಎಫ್) ಅನ್ನು ತೀವ್ರತೆ ಕಡಿಮೆಯಾಗುತ್ತದೆ'' ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಅಲ್ಲದೆ, ವಿದೇಶಕ್ಕೆ ತೆರಳುವ ಅಗತ್ಯವಿದ್ದರೆ ಆ ಕುರಿತು ಅಗತ್ಯ ನಿರ್ದೇಶನಕ್ಕಾಗಿ ಅರ್ಜಿದಾರರು ಪಾಸ್ ಅಧಿಕಾರಿಗಳ ಮುಂದೆ ಮತ್ತು ಪ್ರಕರಣ ಬಾಕಿಯಿರುವ ವಿಚಾರಣಾ ನ್ಯಾಯಾಲಯದ ಅರ್ಜಿ ಸಲ್ಲಿಸಬಹುದು ಎಂದು ಅರ್ಜಿದಾರರಿಗೆ ಅವಕಾಶ ಕಲ್ಪಿಸಿದ ನಾಯಪೀಠ ಅರ್ಜಿಯನ್ನು ಇತ್ಯರ್ಥಪಡಿಸಿದೆ.
ಅರ್ಜಿದಾರರ ಪರ ವಕೀಲರು ವಾದಿಸಿ, ಕಾಜಲ್ ನರೇಶ್ ಕುಮಾರ್ ವಿರುದ್ಧದ ಕ್ರಿಮಿನಲ್ ಪ್ರಕರಣದಲ್ಲಿ ಪೊಲೀಸರು ಈಗಾಗಲೇ ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಪಾರ್ಸ್‌ಪೋರ್ಟ್ ಕಾಯ್ದೆ ಸೆಕ್ಷನ್ 12(ಬಿ) ಪ್ರಕಾರ ಅರ್ಜಿದಾರರು ಯಾವುದೇ ಸುಳ್ಳು ಮಾಹಿತಿ ನೀಡಿರುವುದು ಸಾಬೀತಾದರೆ ಮಾತ್ರ ಪಾಸ್‌ಪೋರ್ಟ್ ಶರಣಾಗತಿ ಮಾಡಬೇಕಾಗುತ್ತದೆ. ಈ ನಿಯಮ ಪ್ರಕರಣದಲ್ಲಿ ಅನ್ವಯವಾಗುತ್ತಿಲ್ಲ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಪರ ವಕೀಲರು, ಪಾಸ್‌ಪೋರ್ಟ್ ಅವಧಿ ಮುಗಿದ ಕಾರಣ ಮರು ವಿತರಣೆ ಮಾಡಬೇಕಿತ್ತು. ಈ ಸಂದರ್ಭದಲ್ಲಿ ಕಾಯ್ದೆಯ ನಿಯಮಗಳ ಪ್ರಕಾರ, ಅಪರಾಧ ಪ್ರಕರಣಗಳಿಂದ ಮುಕ್ತರಾಗಿರಬೇಕು. ಬಿ ರಿಪೋರ್ಟ್ ಸಲ್ಲಿಸಿದ ಮಾತ್ರಕ್ಕೆ ಅಪರಾಧದಿಂದ ಮುಕ್ತರಾಗಿದ್ದಾರೆ ಎಂಬುದಾಗಿ ಪರಿಗಣಿಸಬೇಕು. ಬಿ ರಿಫೋರ್ಟ್ ಅನ್ನು ವಿಚಾರಣಾ ನ್ಯಾಯಾಲಯ ಅಂಗೀಕರಿಸಬಹುದು ಅಥವಾ ತಿರಸ್ಕರಿಸಬಹುದು ಎಂದು ಕೋರ್ಟ್ ಗಮನಕ್ಕೆ ತಂದಿದ್ದರು.

ಅದನ್ನು ಪರಿಗಣಿಸಿದ ನ್ಯಾಯಾಲಯ, ಅರ್ಜಿದಾರರಿಗೆ ಪಾರ್ಸ್ ಪೋರ್ಟ್ ಅನ್ನು ಮರು ವಿತರಣೆ ಮಾಡಲಾಗಿದೆ. ಮರು ವಿತರಣೆಗೆ ಕೋರಿದಾಗ ಅರ್ಜಿದಾರರು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣ ಬಾಕಿಯಿರುವ ವಿಚಾರವನ್ನು ಮುಚ್ಚಿಟ್ಟಿದಾರೆ. ಈ ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧ ಪೊಲೀಸರು ಸಲ್ಲಿಸಿರುವ ಬಿ ರಿಫೋರ್ಟ್ ಅನ್ನು ವಿಚಾರಣಾ ನ್ಯಾಯಾಲಯ ಅಂಗೀಕರಿಸಬೇಕಿದೆ.
ಹಾಗಾಗಿ, ಬಿ ರಿಪೋರ್ಟ್ ಸಲ್ಲಿಕೆಯಾದ ಮಾತ್ರಕ್ಕೆ ಅರ್ಜಿದಾರರು ಆರೋಪದಿಂದ ಮುಕ್ತರಾಗಿದ್ದಾರೆ ಎಂಬುದಾಗಿ ಹೇಳಲು ಸಾಧ್ಯವಿಲ್ಲ. ಆದ್ದರಿಂದ ಅರ್ಜಿದಾರರು ಪಾಸ್‌ಪೋರ್ಟ್ ಅನ್ನು ವಶಕ್ಕೆ ನೀಡುವಂತೆ ಆರ್‌ಒಪಿ ನೀಡಿರುವ ಸೂಚನೆಯಲ್ಲಿ ಯಾವುದೇ ತಪ್ಪು ಕಂಡು ಬರುತ್ತಿಲ್ಲ ಎಂದು ತಿಳಿಸಿದರು.
ಪ್ರಕರಣದ ಹಿನ್ನೆಲೆ: ಪಾಸ್‌ಪೋರ್ಟ್ ಅವಧಿ ಮುಗಿದ ಹಿನ್ನೆಲೆಯಲ್ಲಿ ಮರು ವಿತರಣೆಗೆ ಕೋರಿ ಅರ್ಜಿದಾರರು ಅರ್ಜಿ ಸಲ್ಲಿಸಿದ್ದರು. ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿ (ಆರ್‌ಪಿಒ) ಅರ್ಜಿದಾರರಿಗೆ ಪಾಸ್‌ಪೋರ್ಟ್ ಮರು ವಿತರಣೆ ಮಾಡಿದ್ದರು. ಈ ಕುರಿತು ಪೊಲೀಸರು ತಪಾಸಣೆ ನಡೆಸಿದ್ದರು.
ಈ ವೇಳೆ ಅರ್ಜಿದಾರರ ವಿರುದ್ಧ ಕ್ರಿಮಿನಲ್ ಪ್ರಕರಣವಿದ್ದು, ಅದನ್ನು ಅವರು ಮರೆಮಾಚಿರುವ ಸಂಗತಿ ಬೆಳಕಿಗೆ ಬಂದಿತ್ತು. ಕ್ರಿಮಿನಲ್ ಪ್ರಕರಣ ಬಾಕಿಯಿರುವ ವಿಚಾರ ಮುಚ್ಚಿಟ್ಟು ಪಾಸ್‌ಪೋರ್ಟ್ ಪಡೆದಿದ್ದಾರೆ. ಹಾಗಾಗಿ, ಪಾಸ್‌ಪೋರ್ಟ್ ತಮ್ಮ ಸುಪರ್ದಿಗೆ ನೀಡಬೇಕು ಎಂದು ಆರ್‌ಪಿಒ ಸೂಚಿಸಿದ್ದರು. ಅದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.












Click it and Unblock the Notifications