Cauvery water: ಕಾವೇರಿ ನೀರಿಗಾಗಿ ಹೋರಾಟ: ನಾಳೆ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ!
ಬೆಂಗಳೂರು ಆಗಸ್ಟ್ 31: ರಾಜ್ಯದಲ್ಲಿ ಮಳೆ ಅಭಾವ, ಬೆಳೆ ಹಾನಿಯಿಂದ ರೈತರು ಸಂಕಷ್ಟದಲ್ಲಿ ಇದ್ದಾರೆ. ಹೀಗಿರುವಾಗ ತಮಿಳುನಾಡು ಹೆಚ್ಚುವರಿ ಕಾವೇರಿ ನೀರು ಬಿಡುಗಡೆಗೆ ಒತ್ತಾಯಿಸಿದೆ. ಇದನ್ನು ವಿರೋಧಿಸಿ ರೈತರು ಪ್ರತಿಭಟನೆಗೆ ಇಳಿದಿದ್ದಾರೆ. ಸದ್ಯ ಈ ವಿಚಾರ ಸುಪ್ರೀಂ ಕೋರ್ಟ್ ಅಂಗಳ ತಲುಪಿದ್ದು ಇದರ ಬಗ್ಗೆ ನಾಳೆ (ಸೆಪ್ಟೆಂಬರ್ 1) ವಿಚಾರಣೆ ನಡೆಯಲಿದೆ.
ಆಗಸ್ಟ್ 28 ರಂದು ನಡೆದ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ಸಭೆಯಲ್ಲಿ ತಮಿಳುನಾಡು 24,000 ಕ್ಯೂಸೆಕ್ ಬಿಡುಗಡೆಗೆ ಒತ್ತಡ ಹೇರಿತ್ತು. ಕರ್ನಾಟಕ ತಮಿಳುನಾಡಿಗೆ ನೀರನ್ನು ಬಿಡುವುದನ್ನು ತೀವ್ರವಾಗಿ ವಿರೋಧಿಸಿತು. ಅದರ ವಿರುದ್ಧ ಸುಪ್ರೀಕೋರ್ಟ್‌ಗೆ ಅರ್ಜಿಯನ್ನು ತಮಿಳುನಾಡು ಸರ್ಕಾರ ಸಲ್ಲಿಸಿದೆ.

ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ತಮಿಳುನಾಡು 24,000 ಕ್ಯೂಸೆಕ್ ಬಿಡುಗಡೆಗೆ ಹಠ ಹಿಡಿದಿದೆ. ಆದರೆ ಇದಕ್ಕೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ನಮ್ಮ ರಾಜ್ಯದಲ್ಲಿ ನೀರಿನ ಕೊರತೆ ಇದೆ. ಮಳೆಯ ಕೊರತೆಯಿಂದ ಬೆಳೆ ಹಾನಿಯಾಗಿ ರೈತರು ಸಂಕಷ್ಟದಲ್ಲಿರುವಾಗ ನೆರೆ ರಾಜ್ಯ ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ರೈತರು ನಿರಾಕರಿಸಿದ್ದಾರೆ.
ಆ. 28ರಂದು ನಡೆದಿದ್ದ ಕಾವೇರಿ ಪ್ರಾಧಿಕಾರದ ಸಭೆಯಲ್ಲಿ ನಿತ್ಯವೂ 5 ಸಾವಿರ ಕ್ಯೂಸೆಕ್ಸ್ ನೀರನ್ನು ಹರಿಸುವಂತೆ ಕರ್ನಾಟಕ್ಕೆ ಸೂಚನೆ ನೀಡಲಾಗಿತ್ತು. ಅದರಂತೆ, ಕಾವೇರಿ ನೀರನ್ನು ಹರಿಬಿಡಲಾಗುತ್ತಿದೆ. ಆದರೆ, ಇದು ಮೈಸೂರು ಹಾಗೂ ಮಂಡ್ಯ ರೈತರ ನಿದ್ದೆಗೆಡಿಸಿದ್ದು, ಕಾವೇರಿ ನದಿ ನೀರು ಹಂಚಿಕೆ ಪ್ರಾಧಿಕಾರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಳೆ ಸುಪ್ರಿಂಕೋರ್ಟ್ನಲ್ಲಿ ಕಾವೇರಿ ವಿಚಾರಣೆ ಹಿನ್ನೆಲೆ ಇಂದು ದೆಹಲಿಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ರಾಜ್ಯದ ವಕೀಲರು ಹಾಗೂ ಇಂಜಿನಿಯರ್ಗಳ ಜೊತೆ ಸಭೆ ನಡೆಸಿದರು. ಸಭೆಯಲ್ಲಿ ಸುಪ್ರಿಂಕೋರ್ಟ್ನಲ್ಲಿ ಕರ್ನಾಟಕ ಸಮರ್ಥ ವಾದ ಮಂಡಿಸುವಂತೆ ಡಿಕೆ ಶಿವಕುಮಾರ್ ಕರ್ನಾಟಕ ಪರ ವಕೀಲರಿಗೆ ಸೂಚನೆ ನೀಡಿದ್ದಾರೆ.
ಪ್ರಾಧಿಕಾರದ ಆದೇಶದಂತೆ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ಹರಿಸಲು ಸಾಧ್ಯವಿಲ್ಲ ಅಂತಾ ರಾಜ್ಯ ಸರ್ಕಾರ ಹೇಳಿದೆ. ಆದರೆ ಈ ನಡುವೆ ನಮಗೆ 5 ಸಾವಿರ ಕ್ಯೂಸೆಕ್ ನೀರು ಸಾಕಾಗಲ್ಲ. 24 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಒತ್ತಡ ಹೇರುತ್ತಿದೆ. ನಾಳೆ ಸುಪ್ರಿಂಕೋರ್ಟ್ನಲ್ಲಿ ಎರಡು ರಾಜ್ಯದ ಪರ ವಕೀಲರು ಈ ಬಗ್ಗೆ ವಾದ ಮಂಡಿಸಲಿದ್ದಾರೆ.
3000ಕ್ಕಿಂತ ಹೆಚ್ಚಿನ ನೀರನ್ನು ಪ್ರತಿದಿನ ಹರಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ವಾದ ಮಾಡಲು ಸಿದ್ಧತೆ ನಡೆಸುತ್ತಿದೆ. ಈಗ ಕರ್ನಾಟಕವು ಸಂಕಷ್ಟದ ಸಮಯದಲ್ಲಿ ನೀರಿನ ಬಿಕ್ಕಟ್ಟನ್ನು ತಗ್ಗಿಸುವಂತೆ ಮೇಕೆದಾಟು ಯೋಜನೆಗೆ ಬಲವಾಗಿ ಒತ್ತು ನೀಡಲು ಚಿಂತಿಸುತ್ತಿದೆ.
ಇಂದು ದೆಹಲಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲರು, ಅಡ್ವೊಕೇಟ್ ಜನರಲ್, ಕರ್ನಾಟಕದ ಕಾನೂನು ತಂಡ ಮತ್ತು ಡಬ್ಲ್ಯುಆರ್‌ಡಿಯ ಹಿರಿಯ ಅಧಿಕಾರಿಗಳ ಸಭೆ ನಡೆಯಿತು. ತೀವ್ರ ಸಮಾಲೋಚನೆಗಳ ನಂತರ, ಕರ್ನಾಟಕವನ್ನು ಪ್ರತಿನಿಧಿಸುವ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲರು, ಕರ್ನಾಟಕದಲ್ಲಿ ಚಾಲ್ತಿಯಲ್ಲಿರುವ ಸಂಕಷ್ಟದ ಪರಿಸ್ಥಿತಿಯ ಬೆಳಕಿನಲ್ಲಿ ತನ್ನ ನಿರ್ಧಾರವನ್ನು ಮರುಪರಿಶೀಲಿಸಲು CWMA ಮುಂದೆ ವಿಮರ್ಶೆಯನ್ನು ಸಲ್ಲಿಸಲು ಸಲಹೆ ನೀಡಿದರು. ನಾಲೆ ಈ ಬಗ್ಗೆ ಸುಪ್ರೀ ಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದ್ದು ಕೋರ್ಟ್ ಯಾವ ತೀರ್ಮಾನ ಕೈಗೊಳ್ಳಲಿದೆ ಕಾದು ನೋಡಬೇಕಿದೆ.












Click it and Unblock the Notifications