ಟಪಾಲಿಗೆ ಮಣಿದ ಸರಕಾರ: ಹಿರೇಮಠ್ ವಿರುದ್ಧವೇ ತನಿಖೆ

ಸಚಿವ ಸಂತೋಷ್ ಲಾಡ್ ಅಕ್ರಮ ಗಣಿಗಾರಿಕೆ ನಡೆಸಿದ್ದಾರೆಂದು ಹಿರೇಮಠ್ ಅವರು ಕಂತುಕಂತುಗಳಲ್ಲಿ ದಾಖಲೆಗಳನ್ನು ಮಂಡಿಸುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಹಠಹಿಡಿದು ಸಿಎಂ ಸಿದ್ದು ಮಗುಮ್ಮಾಗಿ ಕುಳಿತಿದ್ದಾರೆ.
ಆದರೆ ಬಳ್ಳಾರಿಯ ಗಣಿ ಉದ್ಯಮಿ ಟಪಾಲ್ ಗಣೇಶ್ ಅ. 24ರಂದು ಪತ್ರಿಕಾಗೋಷ್ಠಿ ನಡೆಸಿ, ಬಾಯಿಮಾತಿನಲ್ಲಿ ಸಲ್ಲಿಸಿದ್ದ ದಾಖಲೆಗಳನ್ನೇ ಮುಂದಿಟ್ಟುಕೊಂಡು ಹಿರೇಮಠ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಹಕಾರ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿಗೆ ಆದೇಶ ನೀಡಿದ್ದಾರೆ.
ಎಫ್ ಸಿಆರ್ ಎ ನಿಯಮಗಳನ್ನು ಉಲ್ಲಂಘಿಸಿ ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬುದು ಎಸ್ಆರ್ ಹಿರೇಮಠ್ ವಿರುದ್ಧ ಕೇಳಿಬಂದಿರುವ ಆರೋಪ.
ಟಪಾಲ್ ಗಣೇಶ್ ದೂರೇನು?:
ಸಮಾಜ ಪರಿವರ್ತನಾ ಸಮುದಾಯದ (ಸಪಸ) NGO ಸಂಸ್ಥೆಯು ವಿದೇಶಿ ಹಣವನ್ನು ಪಡೆದು ಎಫ್ ಸಿಆರ್ ಎ ನಿಯಮವನ್ನು ಉಲ್ಲಂಘಿಸಿದೆ. ಸಂಸ್ಥೆಯ ಲೆಕ್ಕ ಪರಿಶೋಧಕರ ವರದಿಯಲ್ಲಿ 2006-07ರಿಂದ 15.79 ಲಕ್ಷ ರೂ. ಹಣ ವಿವಿಧ ರೀತಿಯಲ್ಲಿ ದುರುಪಯೋಗವಾಗಿದೆ ಎಂದು ಉಲ್ಲೇಖಿಸಿದ್ದು, ಹಿರೇಮಠ್ ಅವರು ಹಣವನ್ನು ಡಿಪಾಜಿಟ್ ಮಾಡಿದ್ದಾರೆ. ವಿದೇಶಿ ಹಣ ದುರುಪಯೋಗದ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಿ ಸಿಬಿಐ ತನಿಖೆ ನಡೆಸಬೇಕಾಗುತ್ತದೆ.
ಸಂಸ್ಥೆಯಲ್ಲಿ ಹಣಕಾಸು ಅವ್ಯವಹಾರ ನಡೆದಿದ್ದು, ಸಂಸ್ಥೆಯ ಎಲ್ಲಾ ಹಣಕಾಸು ವ್ಯವಹಾರಗಳನ್ನು ತನಿಖೆಗೆ ಒಳಪಡಿಸಬೇಕು - ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಟಪಾಲ್ ಗಣೇಶ್ ಕಳೆದ ಶುಕ್ರವಾರ ಮನವಿ ಸಲ್ಲಿಸಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಖ್ಯೆ ಸಿಎಂ 66747/ ಆರ್‌ಇಪಿ-ಜಿಇಎನ್/ 2013ರಲ್ಲಿ 'ಸಮಾಜ ಪರಿವರ್ತನಾ ಸಮುದಾಯ ಸಂಸ್ಥೆ ಧಾರವಾಡ ಇವರು Foreign Contribution (Regulation) Act - FCRA ಉಲ್ಲಂಘಿಸಿರುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಹಕಾರ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಅವರಿಗೆ ಆದೇಶ ನೀಡಿದ್ದರು. ಸದರಿ ಆದೇಶವನ್ನು ಮುಖ್ಯಮಂತ್ರಿಯ ಅಧೀನ ಕಾರ್ಯದರ್ಶಿ ಆಂಡ್ರೂಸ್ ಅವರು ಅ. 25 (ಮನವಿ ಸಲ್ಲಿಸಿದ ಮಾರನೇ ದಿನ) ರಂದು ಸಹಕಾರ ಇಲಾಖೆಯ ಮುಖ್ಯಕಾರ್ಯದರ್ಶಿಗೆ ಸೂಕ್ತ ತನಿಖೆಗೆ ಸೂಚಿಸಿ ಆದೇಶ ರವಾನಿಸಿದ್ದಾರೆ.












Click it and Unblock the Notifications