2023ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಬೀಗಿದ ಅಪ್ಪ-ಮಕ್ಕಳ ಜೋಡಿ; ಇಲ್ಲಿದೆ ಸಂಪೂರ್ಣ ಪಟ್ಟಿ
ಶನಿವಾರ, ಮೇ 13ರಂದು 2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದಲ್ಲಿ ಅತಿ ಹೆಚ್ಚು 136 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಭರ್ಜರಿ ಬಹುಮತ ಪಡೆದಿದ್ದು, ಏಕಾಂಗಿಯಾಗಿ ಸರ್ಕಾರ ರಚಿಸಲಿದೆ.
ಇನ್ನು ಆಡಳಿತರೂಢ ಬಿಜೆಪಿ ಪಕ್ಷ ಕೇವಲ 64 ಸ್ಥಾನ ಗಳಿಸಿ ಭಾರೀ ಮುಖಭಂಗ ಅನುಭವಿಸಿದೆ. ಜೆಡಿಎಸ್ 20 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಇನ್ನು 4 ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆಯ ಹೊಡೆತಕ್ಕೆ ಬಿಜೆಪಿ ಪಕ್ಷ ಸಂಪೂರ್ಣ ನೆಲಕಚ್ಚಿದ್ದು, ರಾಜ್ಯದೆಲ್ಲೆಡೆ ಕಾಂಗ್ರೆಸ್ ಅಲೆ ಎದ್ದಿದೆ. ಅತಂತ್ರ ವಿಧಾನಸಭೆ ನಿರ್ಮಾಣ ಮಾಡದೆ, ಮತದಾರರು ಈ ಬಾರಿ ಒಂದೇ ಪಕ್ಷಕ್ಕೆ ಪೂರ್ಣ ಬಹುಮತ ನೀಡಿದ್ದಾರೆ.
ಇನ್ನು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ತಂದೆ-ಮಗ, ತಂದೆ-ಮಗಳು ಜೋಡಿಗಳು ವಿಧಾನಸೌಧ ಪ್ರವೇಶಿಸಲಿದ್ದಾರೆ. ಕುಟುಂಬ ರಾಜಕಾರಣ ಈ ದೇಶದಲ್ಲಿ ದೊಡ್ಡದಾಗಿ ಬೇರುಬಿಟ್ಟಿದೆ. ತಂದೆಯ ಉತ್ತರಾಧಿಕಾರಿಯಾಗಿ ಮಗ ಅಥವಾ ಮಗಳು ಅಧಿಕಾರಕ್ಕೇರುತ್ತಾರೆ.
ಆದರೆ, ಇದೀಗ ತಂದೆಯ ಜೊತೆ ಮಕ್ಕಳೂ ವಿಧಾನಸಭೆ ಪ್ರವೇಶಿಸಿದ್ದಾರೆ. ಗೆಲ್ಲುವ ಒಂದೇ ಕಾರಣದಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಒಂದೇ ಕುಟುಂಬಕ್ಕೆ ಟಿಕೆಟ್ ನೀಡಿದ್ದವು. ಅದರಲ್ಲಿ ಹಲವರು ಯಶಸ್ವಿಯಾಗಿದ್ದಾರೆ. ಅಂತಹ ಜೋಡಿಗಳ ಪಟ್ಟಿ ಇಲ್ಲಿದೆ.

ಶಾಮನೂರು ಶಿವಶಂಕರಪ್ಪ- ಎಸ್.ಎಸ್. ಮಲ್ಲಿಕಾರ್ಜುನ
ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅತೀ ಹಿರಿಯ ಸ್ಪರ್ಧಿಯೆಂದರೆ 92 ವರ್ಷದ ಶಾಮನೂರು ಶಿವಶಂಕರಪ್ಪ. ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಶಾಮನೂರು ಶಿವಶಂಕರಪ್ಪ ಅಖಾಡಕ್ಕಿಳಿದು ಗೆಲುವು ಸಾಧಿಸಿದ್ದರೆ, ದಾವಣಗೆರೆ ಉತ್ತರ ಕ್ಷೇತ್ರದಿಂದ ಅವರ ಮಗ ಎಸ್.ಎಸ್. ಮಲ್ಲಿಕಾರ್ಜುನ ಅವರು ಜಯ ಕಂಡಿದ್ದಾರೆ. ಇಬ್ಬರೂ ಕೂಡ ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸಿ, ವಿಧಾನಸೌಧ ಪ್ರವೇಶಿಸಿದ್ದಾರೆ.
ಎಂ.ಕೃಷ್ಣಪ್ಪ-ಪ್ರಿಯಾಕೃಷ್ಣ
ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಕಂಡ ಮತ್ತೊಂದು ಅಪ್ಪ-ಮಗ ಜೋಡಿಯೆಂದರೆ, ಅದು ಎಂ.ಕೃಷ್ಣಪ್ಪ ಮತ್ತು ಪ್ರಿಯಾಕೃಷ್ಣ. ಬೆಂಗಳೂರಿನ ವಿಜಯನಗರ ಕ್ಷೇತ್ರದಿಂದ ಎಂ.ಕೃಷ್ಣಪ್ಪ ಮತ್ತು ಗೋವಿಂದರಾಜನಗರ ಕ್ಷೇತ್ರದಿಂದ ಪ್ರಿಯಾಕೃಷ್ಣ ಅವರು ಗೆಲುವು ಸಾಧಿಸಿದ್ದಾರೆ. ಇಬ್ಬರೂ ಕಾಂಗ್ರೆಸ್‌ನಿಂದ ಜಯ ಕಂಡಿದ್ದಾರೆ.
ರಾಮಲಿಂಗಾರೆಡ್ಡಿ-ಸೌಮ್ಯ ರೆಡ್ಡಿ
ಇನ್ನು 2023ರ ಚುನಾವಣೆಯಲ್ಲಿ ತಂದೆ ಮಗ ಜೋಡಿಯ ಜೊತೆ ತಂದೆ-ಮಗಳು ಜೋಡಿಯೂ ಗೆಲುವು ಕಂಡಿದ್ದಾರೆ. ಬೆಂಗಳೂರಿನ ಬಿಟಿಎಂ ಲೇಔಟ್ ಕ್ಷೇತ್ರದಿಂದ ರಾಮಲಿಂಗಾರೆಡ್ಡಿ ಮತ್ತು ಅವರ ಮಗಳು ಸೌಮ್ಯ ರೆಡ್ಡಿ ಜಯನಗರದಿಂದ ಆಯ್ಕೆಯಾಗಿದ್ದಾರೆ. ಇಬ್ಬರು ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ್ದಾರೆ. ಸೌಮ್ಯ ರೆಡ್ಡಿ ಅತ್ಯಲ್ಪ 160 ಮತಗಳ ಅಂತರದಿಂದ ಜಯ ಕಂಡಿದ್ದಾರೆ.
ಕೆ.ಎಚ್.ಮುನಿಯಪ್ಪ-ರೂಪಾ ಶಶಿಧರ್
ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ತಂದೆ-ಮಗಳ ಜೋಡಿಯಲ್ಲಿ ಕೆ.ಎಚ್.ಮುನಿಯಪ್ಪ-ರೂಪಾ ಶಶಿಧರ್ ಕೂಡ ಒಬ್ಬರಾಗಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ದೇವನಹಳ್ಳಿ ಕ್ಷೇತ್ರದಲ್ಲಿ ಕೆ.ಎಚ್.ಮುನಿಯಪ್ಪ ಗೆಲುವು ಸಾಧಿಸಿದರೆ, ಕೆಜಿಎಫ್ ಕ್ಷೇತ್ರದಲ್ಲಿ ರೂಪಾ ಶಶಿಧರ್ ಗೆದ್ದಿದ್ದಾರೆ.
ಜಿಟಿ ದೇವೇಗೌಡ-ಜಿಡಿ ಹರೀಶ್ ಗೌಡ
ಈ ಹಿಂದೆ ಜೆಡಿಎಸ್ ಹಾಲಿ ಶಾಸಕ ಜಿ.ಟಿ. ದೇವೇಗೌಡ ಅವರು ಚಾಮುಂಡೇಶ್ವರಿ ಕ್ಷೇತ್ರದಿಂದ ಮತ್ತೊಮ್ಮೆ ಗೆಲುವು ದಾಖಲಿಸಿದ್ದರೆ, ಅವರ ಮಗ ಜಿ.ಡಿ. ಹರೀಶ್ ಗೌಡ ಕೂಡ ಜೆಡಿಎಸ್‌ನಿಂದ ಹುಣಸೂರು ಕ್ಷೇತ್ರದಲ್ಲಿ ಗೆಲುವು ಕಂಡಿದ್ದಾರೆ.
ಎ. ಮಂಜು- ಮಂಥರ್ ಗೌಡ
ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ಜೆಡಿಎಸ್ ಪಕ್ಷದಿಂದ ಎ. ಮಂಜು ಗೆಲುವು ಕಂಡಿದ್ದರೆ, ಬಿಜೆಪಿಯ ಭದ್ರಕೋಟೆ ಎನಿಸಿದ್ದ ಕೊಡಗಿನ ಮಡಿಕೇರಿಯಲ್ಲಿ ಅವರ ಮಗ ಕಾಂಗ್ರೆಸ್ ಪಕ್ಷದಿಂದ ಡಾ. ಮಂಥರ್ ಗೌಡ ಜಯ ದಾಖಲಿಸಿದ್ದಾರೆ. ಇಬ್ಬರೂ ಬೇರೆ ಬೇರೆ ಪಕ್ಷಗಳಿಂದ ಸ್ಪರ್ಧಿಸಿ ಗೆಲುವು ಸಾಧಿಸಿರುವುದು ವಿಶೇಷವಾಗಿದೆ.












Click it and Unblock the Notifications