ಪ್ರಧಾನಿ ಮೋದಿ ಭೇಟಿಗೆ ಹೊರಟ ರಾಜ್ಯ ರೈತ ನಿಯೋಗ
ಬೆಂಗಳೂರು, ಜೂನ್ 12: ಕಳಸಾಬಂಡೂರಿ ನಾಲಾ ಜೋಡಣೆ, ಮಹದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಲು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲು ರಾಜ್ಯ ರೈತ ನಿಯೋಗ ದೆಹಲಿಗೆ ತೆರಳಲು ಸಜ್ಜಾಗಿದೆ.
ವಿಧಾನಸಭೆ ಚುನಾವಣಾ ಪ್ರಚಾರಕ್ಕೆ ರಾಜ್ಯಕ್ಕೆ ಬಂದ ಪ್ರಧಾನಿ ಅವರು ಮಹದಾಯಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಆದರೆ ಚುನಾವಣೆ ಮುಗಿದರೂ ತಾವು ಪ್ರಧಾನಿ ಕೊಟ್ಟ ಮಾತು ಈಡೇರಿಲ್ಲ. ಹೀಗಾಗಿ, ಮಹದಾಯಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಲು ಮೋದಿ ಭೇಟಿಗೆ ತೆರಳುವುದಾಗಿ ಮಹದಾಯಿ ಹೋರಾಟಗಾರರ ಸಮಿತಿ ಹೇಳಿದೆ.
ಕಳೆದ 1060 ದಿನಗಳಿಂದ ನಿರಂತರವಾಗಿ ಮಹದಾಯಿ ಹಾಗೂ ಕಳಸಾ ಬಂಡೂರಿಗಾಗಿ ಹೋರಾಟ ನಡೆಯುತ್ತಿದೆ. ನಾಲ್ಕು ಜಿಲ್ಲೆಯ 10 ತಾಲೂಕಿನ ರೈತರಿಗೆ ಮಹದಾಯಿ ಅಚ್ಚುಕಟ್ಟು ಪ್ರದೇಶದವರು ನಡೆಸುತ್ತಿರುವ ಹೋರಾಟಕ್ಕೆ ಬೆನ್ನಲುಬಾಗಿ ನಿಲ್ಲಲು ನಿವೃತ್ತ ನ್ಯಾ. ವೆಂಕಟಾಚಲಯ್ಯ ಅವರು ಮುಂದೆ ಬಂದಿದ್ದಾರೆ.

ಮಹದಾಯಿ ಸಮಸ್ಯೆಯನ್ನ ಮುಂದಿಟ್ಟುಕೊಂಡು ಅದೆಷ್ಟೋ ರಾಜಕೀಯ ನಾಯಕರು ತಮ್ಮ ರಾಜಕೀಯ ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ. ರಾಜಕೀಯ ಲಾಭಕ್ಕಾಗಿ ಯೋಜನೆಯನ್ನು ಬಳಸಿಕೊಳ್ಳುತ್ತಿರುವುದರ ಬಗ್ಗೆ ಪ್ರಶ್ನಿಸಿ, ಜೂನ್ 13 ಹಾಗೂ 14 ರಂದು ದೆಹಲಿಗೆ ಹೋಗಿ ಭೇಟಿ ನೀಡಿ ಮಾತುಕತೆ ನಡೆಸಲು ಮುಂದಾಗಿದ್ದಾರೆ.
ಮಹದಾಯಿ ಸಮಸ್ಯೆ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಆದರೆ, ಪ್ರಧಾನಿ ಮೋದಿ ಅವರು ಮೂರು ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆಸಿ ಸಮಸ್ಯೆ ಬಗೆಹರಿಸಬಹುದಾಗಿದೆ. ಹೀಗಾಗಿ, ಮಹಾದಾಯಿ ಹೋರಾಟಗಾರರ ಪೈಕಿ 23ಕ್ಕೂ ಅಧಿಕ ಮಂದಿ, ದೆಹಲಿಗೆ ತೆರಳಿ ಮೋದಿ ಹಾಗೂ ನೀರಾವರಿ ಸಚಿವರನ್ನು ಭೇಟಿ ಮಾಡಿ, ಮನವಿ ಮಾಡಲು ಮುಂದಾಗಿದ್ದಾರೆ.












Click it and Unblock the Notifications