ಯಡಿಯೂರಪ್ಪ VS ಯತ್ನಾಳ್: ವಿಜಯೇಂದ್ರ ಕೈಮುಗಿದು ಹೇಳಿದ್ದೇನು?
ಬಿಜೆಪಿ ವರಿಷ್ಠರಿಗೆ ಕರ್ನಾಟಕ ರಾಜಕೀಯದಲ್ಲಿ ಕಾಂಗ್ರೆಸ್ ನಾಯಕರಿಗಿಂತ ತಮ್ಮದೇ ಪಕ್ಷದ ಎದುರಾಳಿಗಳು ತಲೆನೋವಾಗಿದ್ದಾರೆ. ಈ ಪೈಕಿ, ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ತಮ್ಮದೇ ಪಕ್ಷದ ನಾಯಕರ ವಿರುದ್ಧ ನೇರವಾಗಿ ಮಾತನಾಡುತ್ತಿದ್ದು ಸಂಕಟ ತರಿಸಿದೆ. ಇದೀಗ ಯಡಿಯೂರಪ್ಪ ಅವರ ಪುತ್ರ & ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು, ಯತ್ನಾಳ್ ಹೇಳಿಕೆಗೆ ರಿಯಾಕ್ಷನ್ ಕೊಟ್ಟಿದ್ದಾರೆ.
ಹೌದು, ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ನಡುವೆ ದೊಡ್ಡ ಬೆಂಕಿಯೇ ಹೊತ್ತಿಕೊಂಡಿದೆ. ಇಬ್ಬರೂ ಒಂದೇ ಪಕ್ಷದವರಾಗಿದ್ದಾರೆ. ಇಷ್ಟಾದರೂ ಪದೇ ಪದೆ ಯಡಿಯೂರಪ್ಪ ಮತ್ತು ಅವರ ಪುತ್ರ ಬಿ.ವೈ. ವಿಜಯೇಂದ್ರ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಇದು ಕಿಚ್ಚು ಹೊತ್ತಿಸಿದೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಒಗ್ಗಟ್ಟಿನಿಂದ ಹೋರಾಡಬೇಕಾದ ಸಮಯಕ್ಕೇ, ಕಮಲ ಪಾಳಯದ ಒಳಗೆ ಬೆಂಕಿ ಹೊತ್ತಿಕೊಂಡಿದೆ.

ಇನ್ನು ನಿನ್ನೆ ಯತ್ನಾಳ್ ಮತ್ತೊಂದು ಆರೋಪದ ಬಾಂಬ್ ಸಿಡಿಸಿದ್ದು, 2023 ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬೊಮ್ಮಾಯಿ ಸೇರಿ ಹಲವು ಹಿರಿಯ ನಾಯಕರಿಗೆ ವಿಜಯೇಂದ್ರ ಕಾಟ ಕೊಟ್ಟಿದ್ದಾರೆ ಎಂದಿದ್ರು. ಹೀಗೆ ಬಸನಗೌಡ ಪಾಟೀಲ್ ಯತ್ನಾಳ್ ಮಾಡಿದ್ದ ಆರೋಪಕ್ಕೆ ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಅವರು ಖಡಕ್ ರಿಯಾಕ್ಷನ್ ಕೊಟ್ಟಿದ್ದಾರೆ.
ಯತ್ನಾಳ್‌ಗೆ ಕೈಮುಗಿದ ವಿಜಯೇಂದ್ರ?
ಅಂದಹಾಗೆ ಇಂದು ಬೆಳಗಾವಿಯಲ್ಲಿ ಈ ಬಗ್ಗೆ ಬಿ.ವೈ. ವಿಜಯೇಂದ್ರ ರಿಯಾಕ್ಷನ್ ಕೊಟ್ಟು ಯತ್ನಾಳ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮಗಳ ಜೊತೆಗೆ ಮಾತನಾಡುವ ವೇಳೆ ಈ ಬಗ್ಗೆ ಪ್ರಶ್ನೆ ಎದುರಾದಾಗ, ದಿಢೀರ್ ಕೈಮುಗಿದ ಬಿ.ವೈ. ವಿಜಯೇಂದ್ರ ಅವರು. ಹೀಗೆ ದಿನಕ್ಕೆ ಒಂದು ಹೇಳಿಕೆ ಕೊಟ್ಟು ಪ್ರತಿಕ್ರಿಯೆ ನೀಡಲು ಆಗಲ್ಲ ಅಂದ್ರು. ಈ ಮೂಲಕ ತಮ್ಮ ಬಗ್ಗೆ ಮಾತನಾಡುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಪರೋಕ್ಷವಾಗಿ ಬಿ.ವೈ. ವಿಜಯೇಂದ್ರ ಅವರು ಗರಂ ಆದರು. ಹಾಗಾದರೆ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಮಾಜಿ ಸಿಎಂ ಯಡಿಯೂರಪ್ಪ & ಅವರ ಪುತ್ರ ವಿಜಯೇಂದ್ರ ವಿರುದ್ಧ ಹೇಳಿದ್ದಾದ್ರು ಏನು?

ಯತ್ನಾಳ್ ಹೇಳಿದ್ದು ಏನು?
ನಿನ್ನೆ ಬೆಳಗಾವಿಯಲ್ಲಿ ಮಾತನಾಡಿದ್ದ ಯತ್ನಾಳ್, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ಧ ಆರೋಪಗಳ ಸರಣಿ ಮುಂದುವರೆಸಿದ್ದರು. ಬಿಎಸ್‌ವೈ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಜೊತೆ ಅಡ್ಜಸ್ಟ್‌ಮೆಂಟ್ ರಾಜಕಾರಣ ಮಾಡುತ್ತಿದ್ದಾರೆ ಅಂತಲೇ ಮತ್ತೊಂದು ಆರೋಪದ ಬಾಂಬ್ ಸಿಡಿಸಿದ್ದರು. ಅಲ್ಲದೆ ಬ್ಲಾಕ್‌ಮೇಲ್ ಮಾಡುವ ಮೂಲಕ, ವಿಜಯೇಂದ್ರ ಅಧ್ಯಕ್ಷರಾಗಿದ್ದಾರೆ. ನಮ್ಮ ಪಕ್ಷದಲ್ಲಿ ಅವರನ್ನು ಯಾರೂ ಒಪ್ಪಿಲ್ಲ. ನಾವೆಲ್ಲಾ ಏನು ಗುಲಾಮರಾ..? ಮೇಲಿನ ನಾಯಕರು ಯಾಕೆ ಹೆದರಿದರೋ ಗೊತ್ತಿಲ್ಲ ಎಂದು ಬಿ.ವೈ. ವಿಜಯೇಂದ್ರ ವಿರುದ್ಧ ಗಂಭೀರ ಆರೋಪ ಮಾಡಿದ್ದರು ಯತ್ನಾಳ್.
ಅಲ್ಲದೆ ಪಂಚಮಸಾಲಿ ಲಿಂಗಾಯತರಿಗೆ 2ಎ ಮೀಸಲಾತಿ ನೀಡಲು ಬಿಎಸ್‌ವೈ ವಿರೋಧಿಸಿದ್ದರು ಎನ್ನುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ ಯತ್ನಾಳ್. ಡಿಸೆಂಬರ್ 13 ಕ್ಕೆ ಪಂಚಮಸಾಲಿ ಸಮಾಜಕ್ಕೆ '2 ಎ' ಮೀಸಲಾತಿ ನೀಡುವಂತೆ, ಬೆಳಗಾವಿಯಲ್ಲಿ ನಡೆಯುವ ಹೋರಾಟದಲ್ಲೂ ಭಾಗಿ ಆಗಲಿದ್ದೇನೆ ಅಂತಾ ನಿನ್ನೆ ಯತ್ನಾಳ್ ತಿಳಿಸಿದ್ದರು. ಇದೀಗ, ಯತ್ನಾಳ್ ಮಾಡಿರುವ ಆರೋಪಗಳಿಗೆ ವಿಜಯೇಂದ್ರ ಕೈಮುಗಿದು ರಿಯಾಕ್ಷನ್ ಕೊಟ್ಟಿದ್ದಾರೆ.
ವಿಜಯೇಂದ್ರ ಆಯ್ಕೆಗೆ ಅಸಮಾಧಾನ?
ಮಾಜಿ ಸಿಎಂ ಯಡಿಯೂರಪ್ಪ ಅವರು ಕರ್ನಾಟಕ ರಾಜಕೀಯ ಅಖಾಡದಲ್ಲಿ ದೊಡ್ಡದಾದ ಗೆಲುವು ಸಾಧಿಸಿದ್ದಾರೆ. ತಮ್ಮ ಪುತ್ರ ಬಿ.ವೈ. ವಿಜಯೇಂದ್ರ ಅವರನ್ನು ಕರ್ನಾಟಕ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆ ಮಾಡಿಸುವಲ್ಲಿ ಗೆದ್ದು ಬೀಗಿದ್ದಾರೆ. ಆದರೆ ಇದನ್ನೆಲ್ಲ ಯಡಿಯೂರಪ್ಪ ಅವರ ವಿರೋಧಿ ಬಣಕ್ಕೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿಯೇ ಅಸಮಾಧಾನ ಕೂಡ ಸ್ಫೋಟಗೊಂಡಿದೆ. ಇಷ್ಟೆಲ್ಲದರ ನಡುವೆ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮದೇ ಪಕ್ಷದ ರಾಜ್ಯಾಧ್ಯಕ್ಷರ ವಿರುದ್ಧ ಮನಸ್ಸಿಗೆ ಬಂದಂತೆ ಹೇಳಿಕೆ ನೀಡುತ್ತಿರುವುದು ಭಾರಿ ಗೊಂದಲದ ವಾತಾವರಣ ಸೃಷ್ಟಿ ಮಾಡಿದೆ.












Click it and Unblock the Notifications