ಫೆಬ್ರವರಿ, ಮಾರ್ಚ್ ತಿಂಗಳ ಗೃಹಲಕ್ಷ್ಮಿ ಹಣ ಕ್ರೋಡಿಕರಿಸಲು ಅಬಕಾರಿ ಇಲಾಖೆ ಟಾರ್ಗೆಟ್: ಬಿ ವೈ ವಿಜಯೇಂದ್ರ
ಬೆಂಗಳೂರು: ಗೃಹಲಕ್ಷ್ಮಿ ಯೋಜನೆ ವಿಚಾರದಲ್ಲಿ ಸಚಿವೆ ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಫೆಬ್ರವರಿ, ಮಾರ್ಚ್ ತಿಂಗಳಿನ 5 ಸಾವಿರ ಕೋಟಿ ಫಲಾನುಭವಿಗಳಿಗೆ ಸಿಕ್ಕಿಲ್ಲ. ಹಣಕಾಸು ಸಚಿವರಾದ ಮುಖ್ಯಮಂತ್ರಿಗಳು ಈ ಕುರಿತು ಉತ್ತರ ಕೊಡಬೇಕಿತ್ತಲ್ಲವೇ? ಗ್ಯಾರಂಟಿ ಯೋಜನೆಗೆ ಹಣ ಕ್ರೋಡೀಕರಿಸಲು ಸಾಧ್ಯ ಆಗದೇ ಮುಖ್ಯಮಂತ್ರಿಗಳು ಅಬಕಾರಿ ಟಾರ್ಗೆಟ್ ಅನ್ನು ಶೇ 35ರಷ್ಟು ಏರಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ಕಾಂಗ್ರೆಸ್ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.
ಮಾಧ್ಯಮ ಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ಕರ್ನಾಟಕವನ್ನು ಕುಡುಕರ ರಾಜ್ಯ ಮಾಡಲು ಹೊರಟಿದ್ದಾರೆ ಎಂದು ಆಕ್ಷೇಪಿಸಿದರು. ಡಾಬಾ, ಪೆಟ್ಟಿಗೆ ಅಂಗಡಿಗಳಲ್ಲೂ ಮದ್ಯ ಮಾರಾಟ ಆಗುತ್ತಿದೆ ಎಂದು ದೂರಿದರು. ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಅಕ್ರಮ ಮನೆಗಳ ತೆರವು ವಿಚಾರದಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಇದೀಗ ಯೂಟರ್ನ್ ಹೊಡೆದಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಟೀಕಿಸಿದ್ದಾರೆ.

ಕಾಂಗ್ರೆಸ್ ಸರಕಾರದ ನೀತಿಯಿಂದ ರಾಜ್ಯದ ಜನರು ದಂಗೆ ಏಳುವಂಥ ಸ್ಥಿತಿ ಇದೆ. ಜನವರಿ 5ರಂದು ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ಇದೆ. ಡ್ರಗ್ ಮಾಫಿಯ, ಕನ್ನಡಿಗರಿಗೆ ಅಪಮಾನ, ಗೃಹಲಕ್ಷ್ಮಿ ಯೋಜನೆಯ ಅಕ್ರಮದ ಕುರಿತು ಸಮಗ್ರವಾಗಿ ಚರ್ಚಿಸಿ ಬಿಜೆಪಿ ರಾಜ್ಯಾದ್ಯಂತ ಬೀದಿಗಿಳಿದು ಹೋರಾಟ ಮಾಡುವ ಬಗ್ಗೆ ರೂಪುರೇಷೆಗಳನ್ನು ನಿರ್ಧರಿಸಲಿದ್ದೇವೆ ಎಂದು ತಿಳಿಸಿದರು.
ಅಕ್ರಮ ವಲಸಿಗರಿಗೆ ಬೈಯಪ್ಪನಹಳ್ಳಿಯ ರಾಜೀವ್ ಗಾಂಧಿ ಹೌಸಿಂಗ್ ಸೊಸೈಟಿಯ ಮನೆಗಳನ್ನು ಕೊಡುವುದಾಗಿ ನಿರ್ಧರಿಸಿದ್ದಾಗಿ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ನಮ್ಮ ರಾಜ್ಯದ ನೀತಿ ನಿರ್ಧಾರಗಳನ್ನು ದೆಹಲಿಯಲ್ಲಿ ಕುಳಿತ ಕೇರಳ ಮೂಲದ ಕೆ.ಸಿ.ವೇಣುಗೋಪಾಲ್ ತೀರ್ಮಾನಿಸಬೇಕೇ? ಈ ರಾಜ್ಯದ ಮುಖ್ಯಮಂತ್ರಿಗಳು ನಿರ್ಧರಿಸಬೇಕೇ? ಬೈಯಪ್ಪನಹಳ್ಳಿಯ ಮನೆಗಳನ್ನು ಕನ್ನಡಿಗರಿಗೆ, ಬಡವರಿಗೆ ಕೊಡಲು ಕಟ್ಟಲಾಗಿದೆ. ಹೈಕಮಾಂಡಿಗೆ ಬೆದರಿ, ಕುರ್ಚಿ ಉಳಿಸಿಕೊಳ್ಳಲು ಮನಸೋಇಚ್ಛೆ ತೀರ್ಮಾನ ಮಾಡಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು. ಸಿಎಂ ನಿರ್ಧಾರಕ್ಕೆ ಕಾನೂನಿನಡಿ ಅಧಿಕಾರ ಇದೆಯೇ? ಎಂದು ಕೇಳಿದರು.
ನಿಯಮಗಳನ್ನು ಗಾಳಿಗೆ ತೂರಿ, ಅಕ್ರಮ ವಲಸಿಗರಿಗೆ ಅಕ್ರಮವಾಗಿ ಮನೆ ಕೊಡುವುದಾಗಿ ಘೋಷಿಸಿದ್ದು ಖಂಡಿತಕ್ಕೂ ಕಾನೂನಿನ ವಿರುದ್ಧವಾದುದು. ಸಿಎಂ, ಡಿಸಿಎಂ ನಿರ್ಧಾರವೇ ಅಕ್ರಮ. ಕನ್ನಡಿಗರ ಆತ್ಮಗೌರವಕ್ಕೆ ಧಕ್ಕೆ ಆಗುವಂತೆ ಯಾಕೆ ಇಂಥ ನಿರ್ಧಾರ ಮಾಡುತ್ತೀರಿ ಎಂದು ಪ್ರಶ್ನೆ ಮಾಡಿದರು. ರಾಜ್ಯದ ತೆರಿಗೆದಾರರ ಹಣದಿಂದ ಕಟ್ಟಿದ ಮನೆಗಳನ್ನು ನೀವು ಖುಷಿ ಬಂದಂತೆ ತೀರ್ಮಾನ ಮಾಡುವುದು ಸರಿಯೇ ಮುಖ್ಯಮಂತ್ರಿಗಳೇ ಎಂದು ಪ್ರಶ್ನಿಸಿದರು.
ಕೇರಳದ ಮುಖ್ಯಮಂತ್ರಿ ಪಿಣರಾಯಿಯವರ ಹೇಳಿಕೆ, ನಂತರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳಿಗೆ ಬೆದರಿಕೆ ಹಾಕಿದ ಬಳಿಕ ಹೀಗಾಗಿದೆ. ಸಿಎಂ ಅವರು ತಮ್ಮ ಕುರ್ಚಿ ಉಳಿಸುವ ಸಂದಿಗ್ಧ ಪರಿಸ್ಥಿತಿಯಲ್ಲಿದ್ದರೆ, ಉಪ ಮುಖ್ಯಮಂತ್ರಿಗಳು ಸಿಎಂ ಕುರ್ಚಿ ಪಡೆದುಕೊಳ್ಳುವ ಸಂದಿಗ್ಧ ಪರಿಸ್ಥಿತಿಯಲ್ಲಿ ಇದ್ದಾರೆ. ಹಿಂದೆ ಕೇರಳದ ವಯನಾಡಿನಲ್ಲಿ ಭೀಕರ ಪ್ರವಾಹ ಆದಾಗ 100 ಮನೆಗಳನ್ನು ಕಟ್ಟಿಸಿಕೊಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಘೋಷಿಸಿದ್ದರು. ವಯನಾಡಿನ ಆನೆ ತುಳಿತ ಸಾವಿಗೆ ತಕ್ಷಣ 15 ಲಕ್ಷ ಪರಿಹಾರ ನೀಡಿದ್ದರು. ಕೇರಳದಲ್ಲಿ ಮನೆ ಕಟ್ಟಿಸಿಕೊಡುವ, ಪರಿಹಾರ ಕೊಡುವ ನಿಮಗೆ ನಮ್ಮ ರಾಜ್ಯದ ಬಡವರೇನು ಅನ್ಯಾಯ ಮಾಡಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ಅವರು ಕೇಳಿದ್ದಾರೆ.












Click it and Unblock the Notifications