ಕೇಂದ್ರದ GST ಪರಿಹಾರ ವಿಚಾರದಲ್ಲಿ ಸಿದ್ದರಾಮಯ್ಯ ಆರೋಪಕ್ಕೆ ಮಾಜಿ ಸಿಎಂ ಕೌಂಟರ್
ಹಾವೇರಿ, ಅಕ್ಟೋಬರ್ 04: ಕೇಂದ್ರ ಸರ್ಕಾರ ಇತ್ತೀಚೆಗೆ ಜಿಎಸ್‌ಟಿ ತರಿಗೆ ಸ್ಲಾಬ್‌ಗಳಲ್ಲಿ ಒಂದಷ್ಟು ಬದಲಾವಣೆ ಮಾಡಿ, ಮಧ್ಯಮ ಹಾಗೂ ಬಡವರಿಗೆ ಸಿಹಿ ಸುದ್ದಿ ನೀಡಿತ್ತು. ಇದಕ್ಕೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿ ಒಂದಷ್ಟು ಆರೋಪ ಮಾಡಿದ್ದರು. ಅದಕ್ಕೀಗ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಕೌಂಟರ್ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರದ ಜಿಎಸ್ ಟಿ ಪರಿಹಾರದ ವಿಚಾರದಲ್ಲಿ ಒಂದು ಸುಳ್ಳನ್ನು ನೂರು ಸಲ ಹೇಳಿ ಸತ್ಯ ಮಾಡಲು ಹೊರಟಿದ್ದಾರೆ. ಮನಸ್ಸಿನಲ್ಲಿ ಮಂಡಿಗಿ ತಿಂದರೆ ಲೆಕ್ಕ ಕೊಡುವವರು ಯಾರು? ಎಂದು ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಶ್ನಿಸಿದ್ದಾರೆ. ಈ ಮೂಲಕ ಸಿಎಂಗೆ ತಿರುಗೇಟು ನೀಡಿದ್ದಾರೆ.

ಜಿಲ್ಲೆಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 11 ಸಾವಿರ ಕೋಟಿ ಅಂತ ಹೇಳುತ್ತಾರೆ. ಯಾವ ಲೆಕ್ಕ ಇದೆ. ಹಲವಾರು ಬಾರಿ ಹೇಳಿದ್ದೆವೆ. 15 ನೇ ಹಣಕಾಸಿನಲ್ಲಿ 2014 ರಿಂದ 1 ಲಕ್ಷ ಕೋಟಿ ಹೆಚ್ಚು ಮೊತ್ತ ರಾಜ್ಯಕ್ಕೆ ಬರುತ್ತಿದೆ. ಪ್ರತಿ ವರ್ಷ ವರ್ಷಾಂತ್ಯದಲ್ಲಿ 3,000 ಕೋಟಿ ರೂಪಾಯಿ ಬರುತ್ತಿದೆ. ಕೇಂದ್ರದಿಂದ ಬಂದಿದ್ದನ್ನು ಸಿದ್ದರಾಮಯ್ಯ ಹೇಳುವುದಿಲ್ಲ ಎಂದು ದೂರಿದರು.
ಅರಾಜಕತೆ ಸೃಷ್ಟಿಯೇ ಒಂದು ವರ್ಗದ ಹುನ್ನಾರ!
ಬೆಳಗಾವಿಯಲ್ಲಿ ಕಲ್ಲು ತೂರಾಟ ಪ್ರಕರಣದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ದೇಶದಲ್ಲಿ ಅರಾಜಕತೆ, ಹಿಂಸೆ ಮಾಡಬೇಕು ಅನ್ನುವುದು ಒಂದು ವರ್ಗದ ಹುನ್ನಾರ. ಅದಕ್ಕೆ ಕೆಲವು ಶಕ್ತಿಗಳು ಬೆಂಬಲ ನೀಡುತ್ತಿದ್ದಾರೆ. ಉತ್ತರಪ್ರದೇಶದ ರಾಜ್ಯದಲ್ಲಿ ಇತ್ತು. ದಾವಣಗೆರೆ ಘಟನೆ ನಡೆದ ನಂತರ ಕರ್ನಾಟಕದಲ್ಲಿ ನಿಯಂತ್ರಣ ಮಾಡಬೇಕು ಅನ್ನುವ ಆಗ್ರಹ ಮಾಡಿದ್ದೇವು, ನಿಯಂತ್ರಣ ಮಾಡುತ್ತೇವೆ ಅಂದಿದ್ದರು. ಹೆಚ್ಚಿನ ಜಾಗೃತಿ ತೆಗೆದುಕೊಳ್ಳುವಲ್ಲಿ ಪೊಲೀಸರು ವಿಫಲವಾಗಿದ್ದಾರೆ. ಮಂಡ್ಯ, ಮದ್ದೂರು ಘಟನೆ ನೋಡಿದಾಗ ರಾಜ್ಯದಲ್ಲಿ ಸಂಪೂರ್ಣ ಕಾನೂನು ಸುವ್ಯವಸ್ಥಿತ ಕುಸಿದಿದೆ.
ಕಾನೂನು, ಪೊಲೀಸ್ ಭಯ ಇಲ್ಲ
ಕಾನೂನು ಭಯ, ಪೊಲೀಸರ ಭಯ ಜನರಲ್ಲಿ ಇಲ್ಲ. ಸರ್ಕಾರ ಹಲವು ಪ್ರಕರಣಗಳನ್ನು ನಿಭಾಯಿಸುವಲ್ಲಿ ವಿಫಲಗೊಂಡಿದೆ. ಗೃಹ ಸಚಿವರು ಈ ಘಟನೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಜಾತಿ, ಧರ್ಮ, ಮತ ಪಂಥ ಹೆಸರಿನಲ್ಲಿ ದೇಶ ಒಡೆಯಲು ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ ಎಂದು ಹೇಳಿದರು.
ಎರಡು ಪಟ್ಟು ಬೆಳೆಹಾನಿ ಕೊಟ್ಟಿದ್ದೇನೆ: ಬೊಮ್ಮಾಯಿ
ರಾಜ್ಯದಲ್ಲಿ ಉಂಟಾದ ಪ್ರವಾಹದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಳೆದ ಬಾರಿ ಮಳೆಹಾನಿ
ಪರಿಹಾರ ಕೊಡುವುದಕ್ಕೆ, ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದ ನಂತರ ಹಣ ನೀಡಿದ್ದಾರೆ. ಈ ಬಾರಿ ಬೆಳೆಹಾನಿ ಘೋಷಣೆ ಮಾಡಿದ್ದಾರೆ. ಇನ್ನೂ ನೀಡಿಲ್ಲ. ನಾನು ಸಿ.ಎಂ ಇದ್ದಾಗ ಎರಡುಪಟ್ಟು ಹೆಚ್ಚು ಬೆಳೆಹಾನಿ ನೀಡಿದ್ದೆ. ಕೇಂದ್ರದ ಹಣವನ್ನ ಕಾಯಲಿಲ್ಲ. ಇವರಿಗೆ ರೈತರ ಬಗ್ಗೆ ನಿಜವಾದ ಕಾಳಜಿ ಇದ್ದರೆ, ಕೂಡಲೇ ಬಿಡುಗಡೆ ಮಾಡಬೇಕು. ಕೇಂದ್ರದ ಬಗ್ಗೆ ನೆಪ ಹೇಳಬಾರದು ಎಂದು ಆಗ್ರಹಿಸಿದರು.
ಸಿಎಂ ಸಿದ್ದರಾಮಯ್ಯ ಇನ್ನೂ ಎರಡುವರೆ ವರ್ಷ ನಾನೇ ಮುಖ್ಯಮಂತ್ರಿ ಎಂಬ ಹೇಳಿಕೆ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ಆಗಲೀ ಯಾರು ಬೇಡ ಅಂದವರು, ಮುಖ್ಯಮಂತ್ರಿ ಆಗಿರುತ್ತಾರೋ ಇಲ್ಲವೋ ಅನ್ನೋದು ಕಾಂಗ್ರೆಸ್ ಉತ್ತರ ಕೊಡಬೇಕು. ಮುಖ್ಯಮಂತ್ರಿಯಾಗಿ ರಾಜ್ಯವನ್ನು ಅದೋಗತಿಗೆ ತೆಗೆದುಕೊಂಡು ಹೋಗಿದ್ದಕ್ಕೆ ಯಾರು ಜವಾಬ್ದಾರರು. ರಾಜ್ಯ ದಿವಾಳಿ ಆಗಿದೆ. ಯಾವುದೇ ಅಭಿವೃದ್ಧಿ ಕಾರ್ಯ ಆಗಿಲ್ಲ. ಶಾಸಕರಿಂದ ಲಿಸ್ಟ್ ಕೇಳಿದ್ದಾರೆ. ಲಿಸ್ಟ್ ಕೊಟ್ಟರೆ ಅಭಿವೃದ್ದಿ ಕೆಲಸ ಆಗಲ್ಲ. ಗುತ್ತಿಗೆದಾರರು ಮತ್ತೆ ಕಮಿಷನ್ ಎರಡುಪಟ್ಟು ಆಗಿದೆ ಎಂದು ಆರೋಪಿಸಿದ್ದಾರೆ. ಇದಕ್ಕೆ ತಕ್ಕ ಉತ್ತರ ಕೊಡಲಿ. ಭ್ರಷ್ಟಾಚಾರ ರಹಿತ ಅಭಿವೃದ್ಧಿ ಮಾಡಲಿ, ಆ ಮೇಲೆ ಅವರು ಎರಡು ವರ್ಷ ಇರುತ್ತಾರೋ, 3 ವರ್ಷ ಇರುತ್ತಾರೋ ನೋಡೋಣ ಎಂದು ಹೇಳಿದರು.












Click it and Unblock the Notifications