EWS ಕೋಟಾ ಜಾರಿ: ಕೇಂದ್ರ, ರಾಜ್ಯಕ್ಕೆ ಹೈಕೋರ್ಟ್ ನೋಟಿಸ್
ಬೆಂಗಳೂರು, ಫೆಬ್ರವರಿ 22: ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲು ನೀಡುವ ಕುರಿತಂತೆ ಸಂವಿಧಾನಕ್ಕೆ ತಂದಿರುವ 103ನೇ ತಿದ್ದುಪಡಿ ಅನುಸಾರ ಮೀಸಲಾತಿ ಜಾರಿ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ. ಅಲ್ಲದೆ, ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಪ್ರತಿವಾದಿಗಳಿಗೆ ಸೂಚನೆ ನೀಡಿ ವಿಚಾರಣೆ ಮುಂದೂಡಿದೆ.
ವಕೀಲ ಗಿರೀಶ್ ಭಾರದ್ವಾಜ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ. ಎಸ್. ದಿನೇಶ್ ಕುಮಾರ್ ಮತ್ತು ನ್ಯಾಯಮೂರ್ತಿ ಟಿ. ಜೆ. ಶಿವಶಂಕರೇಗೌಡ ಅವರಿದ್ದ ವಿಭಾಗೀಯ ಪೀಠ ಈ ಅದೇಶ ಮಾಡಿದೆ. ಅರ್ಜಿದಾರರ ಪರ ವಕೀಲರು, ಕೇಂದ್ರ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿ ತಂದು ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10 ರಷ್ಟು ಮೀಸಲಾತಿ ನೀಡಿದೆ. ಇದು ಅನುಷ್ಟಾನಕ್ಕೆ ಬಂದಿಲ್ಲ. ಈ ಸಂಬಂಧ 2024ರ ಜನವರಿ 14ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸೇರಿದಂತೆ ಸಮಾಜ ಕಲ್ಯಾಣ ಇಲಾಖೆಗೆ ಮನವಿ ಮಾಡಿದ್ದಾರೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಅರ್ಜಿದಾರರಿಗೂ ಈ ವಿಚಾರಕ್ಕೂ ಏನು ಸಂಬಂಧ ಎಂದು ಪ್ರಶ್ನಿಸಿತು. ಅಲ್ಲದೆ, ಸರ್ಕಾರದ ಕ್ರಮದಿಂದ ತೊಂದರೆಯಾದವರು ಮನವಿ ಸಲ್ಲಿಸಿ ಪರಿಹಾರ ಪಡೆದುಕೊಳ್ಳಲಿದ್ದಾರೆ. ಹೀಗಾಗಿ ಅರ್ಜಿ ವಿಚಾರಣೆಗೆ ಪರಿಗಣಿಸಲಾಗದು ಎಂದು ತಿಳಿಸಿತು. ಅರ್ಜಿದಾರ ಪರ ವಕೀಲರು, ಈ ಸೌಲಭ್ಯವನ್ನು ಪಡೆಯಲು ಅರ್ಹರಿರುವವರು ಆರ್ಥಿಕವಾಗಿ ಹಿಂದುಳಿದಿದ್ದಾರೆ ಎಂದು ತಿಳಿಸಿದರು.
ಪ್ರಕರಣದ ಹಿನ್ನೆಲೆ: ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ.10ರಷ್ಟುಮೀಸಲಾತಿ ನೀಡುವ ಸಂಬಂಧ ಕೇಂದ್ರ ಸರ್ಕಾರ 2019ರ ಜನವರಿ 12ರಂದು 103ನೇ ಸಂವಿಧಾನಕ್ಕೆ ತಿದ್ದುಪಡಿ ತಂದು ಪರಿಚ್ಛೇದ 14 ಮತ್ತು 16(6)ನೇ ವಿಧಿಗೆ ಸೇರ್ಪಡಿಸಿದೆ. ಕೇಂದ್ರದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದ ಸುಪ್ರೀಂಕೋರ್ಟ್ ಕೇಂದ್ರದ ಕ್ರಮವನ್ನು ಎತ್ತಿಹಿಡಿದ್ದು, ಈ ನಿರ್ಧಾರಕ್ಕೆ ಸಂವಿಧಾನದ ಮಾನ್ಯತೆ ಸಿಕ್ಕಂತಾಗಿದೆ. ಆದರೆ, ಸಂವಿಧಾನ ಬದ್ಧವಾಗಿರುವ ಈ ಮೀಸಲಾತಿ ಜಾರಿ ಮಾಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಅರ್ಜಿಯಲ್ಲಿ ದೂರಲಾಗಿದೆ.
ಜತೆಗೆ ಇದರಿಂದ ಆರ್ಥಿಕವಾಗಿ ಹಿಂದುಳಿದಿರುವ ವರ್ಗಕ್ಕೆ ದೊಡ್ಡ ಮಟ್ಟದ ತೊಂದರೆಯಾಗುತ್ತಿದೆ. ರಾಜ್ಯದಲ್ಲಿ ಈ ರೀತಿಯ ವಿಳಂಬದಿಂದ ವಿದ್ಯಾರ್ಥಿಗಳ ಶಿಕ್ಷಣ ಮತ್ತು ಸರ್ಕಾರದ ಸೇವೆಗೆ ಸೇರ್ಪಡೆಯಾಗಬಯಸುವವರ ಮೇಲೆ ಪರಿಣಾಮ ಭೀರಲಿದೆ. ಹೀಗಾಗಿ ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10 ಮೀಸಲಾತಿಯನ್ನು ಜಾರಿ ಮಾಡಬೇಕು.
ಜತೆಗೆ, ಕೇಂದ್ರ ಸರ್ಕಾರದ ಈ ನಿರ್ಧಾರ ಆರ್ಥಿಕವಾಗಿವಾಗಿ ಹಿಂದುಳಿದ ಪ್ರತಿಭಾವಂತರಾಗಿದ್ದು ಅರ್ಹರಿರುವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲು ನೀಡಬೇಕಾಗುತ್ತದೆ. ಇದರಿಂದಾಗಿ ಈ ವರ್ಗದವರ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿ ಸುಧಾರಣೆಗೆ ನೆರವಾಗಲಿದೆ. ಆದ್ದರಿಂದ ಮುಂದಿನ ಶೈಕ್ಷಣಿಕ ವರ್ಷ ಪ್ರಾರಂಭವಾಗುತ್ತಿದ್ದು, ನ್ಯಾಯಪೀಠ ಮಧ್ಯಪ್ರವೇಶ ಮಾಡಬೇಕು. ಆದ್ದರಿಂದ ತಕ್ಷಣ ಮೀಸಲಾತಿ ಸೌಲಭ್ಯಗಳು ಜಾರಿಯಾಗುವಂತೆ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿದ್ದಾರೆ.












Click it and Unblock the Notifications