ಖರ್ಗೆ ಅಧ್ಯಕ್ಷರಾದರೂ ಕೈ’ ನಾಯಕರು ಈಗಲೂ ಗಾಂಧಿ ಕುಟುಂಬದ ಜೀ ಹುಜೂರ್’ ಸಂಸ್ಕೃತಿಗೆ ಶರಣಾಗಿದ್ದಾರೆ : ಬಿಜೆಪಿ
ಬೆಂಗಳೂರು,ಡಿಸೆಂಬರ್ 13 : ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಅಧ್ಯಕ್ಷರಾಗಿದ್ದರೂ ನಿರ್ಧಾರಕ್ಕೆ ಈಗಲೂ ಗಾಂಧಿ ಕುಟುಂಬಕ್ಕೇ ಜೋತು ಬಿದ್ದಿರುವ ರಾಜ್ಯ ಕಾಂಗ್ರೆಸ್ ನಾಯಕರು ಸ್ವಂತಿಕೆಯನ್ನೇ ಮರೆತು "ಜೀ ಹುಜೂರ್" ಸಂಸ್ಕೃತಿಗೆ ಶರಣಾಗಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಕರ್ನಾಟಕ ಕಾಂಗ್ರೆಸ್ ಪಟಾಲಂ ದಿಲ್ಲಿಯಲ್ಲಿದೆ. 2013 ರಿಂದ 2018ರವರೆಗೆ ಏನಾಗಿತ್ತು ನೆನಪಿಸಿಕೊಳ್ಳಿ. ಕೆ.ಸಿ ವೇಣುಗೋಪಾಲ ಎಂಬ ಸೋನಿಯಾ ಗಾಂಧಿಯವರ ಅಂಚೆಯಣ್ಣನ ಪಾದಾರವಿಂದಗಳಿಗೆ ರಾಜ್ಯದ ಅಂದಿನ ಕಾಂಗ್ರೆಸ್ ಸರ್ಕಾರವನ್ನು ಅರ್ಪಿಸಲಾಗಿತ್ತು.
ಸಿದ್ದರಾಮಯ್ಯ ಅವರು ಕನ್ನಡ ಅಸ್ಮಿತೆಯನ್ನು ಅವರ ಮುಂದೆ ನೈವೇದ್ಯಕ್ಕಿಟ್ಟಿದ್ದರು. ಈಗ ಅಧಿಕಾರವಿಲ್ಲದಿದ್ದರೂ ಅದೇ ಸಂಸ್ಕೃತಿ ಮರುಕಳಿಸಿದೆ. ಈಗ ಅಧಿಕಾರವಿಲ್ಲದೇ ರಾಜಸ್ಥಾನದ ಹೊರತಾಗಿ ನೀರಿನಿಂದ ಹೊರತೆಗೆದ ಮೀನಿನಂತಾಗಿರುವ ಕಾಂಗ್ರೆಸ್ ನ ಸಂಪತ್ಭರಿತವಾಗಿರುವ ನಮ್ಮ ರಾಜ್ಯವನ್ನು ತಮ್ಮ ನಾಯಕರ ತಿಜೋರಿಗಳನ್ನು ತುಂಬಿಸಿಕೊಳ್ಳಲು ಎಟಿಎಂನಂತೆ ಬಳಸಿಕೊಳ್ಳಲು ತುದಿಗಾಲಲ್ಲಿ ನಿಂತಿದೆ ಎಂದು ಹೇಳಿದೆ.
ರಾಜ್ಯಾಧ್ಯಕ್ಷರಿಂದ ಹಿಡಿದು ಯುವ ಕಾಂಗ್ರೆಸ್ ಅಧ್ಯಕ್ಷರವರೆಗೂ ಬೇಲ್ ಮೇಲೆ ಬಾಳು ಸಾಗಿಸುತ್ತಿರುವ ಕಾಂಗ್ರೆಸ್ ನ ನಾಯಕರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪಕ್ಕದ ರಾಜ್ಯದಿಂದ ನಾಯಕರನ್ನು ಆಮದು ಮಾಡಿಕೊಂಡು ಅವರಿಂದಲೂ ರಾಜ್ಯವನ್ನು ಲೂಟಿ ಹೊಡೆಸಿ ಗೃಹಮಂತ್ರಿಗಳನ್ನಾಗಿಯೂ ಮಾಡಿದ್ದರು ಎಂದು ಕಿಡಿಕಾರಿದೆ.

ಡಬಲ್ ಎಂಜಿನ್ ವೇಗದ ಅಭಿವೃದ್ಧಿಯನ್ನು ರಾಜ್ಯಕ್ಕೆ ನೀಡಲು ತಲೆ ಕೆಳಗಾಗಿ ನಿಂತರೂ ಸಾಧ್ಯವಾಗದ ರಾಜ್ಯ ಕಾಂಗ್ರೆಸ್ ನಾಯಕರು ಯಾವ ಮಟ್ಟಕ್ಕಾದರೂ ಇಳಿದು ಅಧಿಕಾರಕ್ಕೆ ಬಂದು ರಾಜ್ಯವನ್ನು ಎಟಿಎಂ ಆಗಿ ಮಾಡಿಕೊಂಡು ಲೂಟಿ ಹೊಡೆಯಲು ಹವಣಿಸುತ್ತಿದೆ. ಕನ್ನಡಿಗರು ಇದನ್ನು ಎಂದಿಗೂ ಸಾಧ್ಯವಾಗಿಸುವುದಿಲ್ಲ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.












Click it and Unblock the Notifications