ಸ್ವಾತಂತ್ರ್ಯ ದಿನಾಚರಣೆಗೆ 6-7 ದಿನ: ಪ್ಲಾಸ್ಟಿಕ್ ಬಾವುಟಕ್ಕೆ ನೋ ಎನ್ನೋಣವೇ?
ದೇಶದ ಸ್ವಾತಂತ್ರ್ಯ ದಿನಾಚರಣೆಗೆ ಇನ್ನೂ ಆರೇಳು ದಿವಸಗಳಿರುವಂತೆಯೇ ಮೂರು ಬಣ್ಣದ ರಾಷ್ಟ್ರಧ್ವಜಗಳ ಮಾರಾಟ ಬೆಂಗಳೂರಿನಲ್ಲಿ ಆರಂಭವಾಗಿದೆ. ಮಾಲುಗಳಲ್ಲಿ, ಮಾರುಕಟ್ಟೆಗಳಲ್ಲಿ, ಮೂಲೆಯಂಗಡಿಯಲ್ಲಿ, ಮುಖ್ಯವಾಗಿ ಟ್ರಾಫಿಕ್ ಸಿಗ್ನಲ್ ನಲ್ಲಿ ಬಾವುಟ ಮಾರಾಟ ಭರಾಟೆ ಕಣ್ಣಿಗೆ ಎದ್ದು ಕಾಣುತ್ತಿದೆ.
ಸೈಕಲ್ ಹ್ಯಾಂಡಲ್ಲಿಗೆ, ಮೋಟರ್ ಬೈಕ್ ಕನ್ನಡಿಗೆ, ಕಾರುಗಳ ಡ್ಯಾಶ್ ಬೋರ್ಡಿಗೆ, ಆಟೋರಿಕ್ಷ ಹೆಗಲ ಮೇಲೆ, ಲಾರಿಗಳ ತಲೆ ಮೇಲೆ ಧ್ವಜಾರೋಹಣಕ್ಕೆ ಅಣಿಯಾಗಲು ವಾಹನ ಚಾಲಕರ ಬಾವುಟ ಖರೀದಿ ನಿಧಾನವಾಗಿ ಚುರುಕುಗೊಳ್ಳುತ್ತಿದೆ. ಕರ್ನಾಟಕ ಸರ್ಕಾರ ಪ್ಲಾಸ್ಟಿಕ್ ರಾಷ್ಟ್ರಧ್ವಜದ ಬಳಕೆ ನಿಷೇಧಿಸಿ ಆದೇಶ ಹೊರಡಿಸಿದೆ. ಧ್ವಜವನ್ನು ಮಾರಾಟ ಮಾಡಿದರೆ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದರೂ ಇದರ ಬಳಕೆ ಮುಂದುವರಿಯುತ್ತಿದೆ.

ನೀವೂ ತ್ರಿವರ್ಣ ಧ್ವಜ ಹಾರಿಸುತ್ತೀರೇನು? ನಿಮ್ಮ ಮನೆಯ ಓವರ್ ಹೆಡ್ ಟ್ಯಾಂಕಿನ ಮೇಲೆ ಒಂದು ಬಾವುಟ ಹಾರಿಸಿದರೆ ಹೇಗೆ? ಅಥವಾ ಹೋದ ವರ್ಷ ಕೊಂಡ ಪ್ಲಾಸ್ಟಿಕ್ ಬಾವುಟ ಶೋ ಕೇಸಿನಲ್ಲಿ ಕುಳಿತಲ್ಲೇ ಹಾರುತ್ತಿದೆಯೇನು? ಬಾವುಟ ಯಾವುದೇ ಆಗಿರಲಿ, ಅದು ಹಾರುತ್ತಿರಬೇಕು. ಸ್ಟಾಟಿಕ್ ಆಗಿದ್ದರೆ ಅದನ್ನು ಬಾವುಟ ಎಂದು ಕರೆಯುವುದಕ್ಕೆ ಮನಸ್ಸು ಒಪ್ಪದು.
ನಮ್ಮ ಬದುಕಿನ ಎಲ್ಲ ಮಗ್ಗಲುಗಳಿಗೂ ಪ್ಲಾಸ್ಟಿಕ್ ಬಳಕೆ ನುಗ್ಗಿರುವುದರಿಂದ ಸಹಜವಾಗಿಯೇ ಅದು ನಮ್ಮ ರಾಷ್ಟ್ರಧ್ವಜವನ್ನೂ ಆವರಿಸದೆ ಬಿಟ್ಟಿಲ್ಲ. ಪ್ಲಾಸ್ಟಿಕ್ ಬಳಕೆ ಮಿತಿ ಮೀರಿರುವುದರಿಂದ ಮತ್ತು ಬಳಸಿ ಬಿಸಾಕಿದ ಪ್ಲಾಸ್ಟಿಕ್ ವಸ್ತುಗಳ ವಿಲೇವಾರಿ ಸಮಾಜಕ್ಕೆ ತಲೆನೋವಾಗಿರುವ ಅರಿವು ನಮಗಿದ್ದೇ ಇದೆ. ಆದರೆ, ಅದರ ಹಾವಳಿಯಿಂದ ಬಿಡುಗಡೆಯಾಗುವ ಮಾರ್ಗೋಪಾಯಗಳು ಕಾಣಿಸುತ್ತಿಲ್ಲ.
ಹತ್ತಿ ಬಟ್ಟೆಯಿಂದ ತಯಾರಿಸಿದ ಬಾವುಟದ ಮೈಮಾಟವೇ ಚೆನ್ನ. ಅದನ್ನೇ ಕೊಳ್ಳಬೇಕು ಮತ್ತು ಹಾರಿಸುತ್ತಿರಬೇಕು ಎನ್ನುವುದು ನಮ್ಮ ಅಪೇಕ್ಷೆ. ಈ ಔದ್ಯೋಗಿಕ ಕೆಲಸಗಳನ್ನು ಖಾದಿ ಮತ್ತು ಗ್ರಾಮೋದ್ಯೋಗ ಮಂಡಲಿ ಮಾಡಬೇಕು. ಹಾಗಾದಲ್ಲಿ ಮಾತ್ರ ರೆಕ್ಸೀನು, ಪ್ಲಾಸ್ಟಿಕ್ಕು, ಪಾಲಿಥೀನಿನಿಂದ ತಯಾರಿಸಿದ ರಾಷ್ಟ್ರಧ್ವಜಗಳನ್ನು ನಿರಾಕರಿಸುವುದು ಸುಲಭ.
ಪ್ಲಾಸ್ಟಿಕ್ ಹಾವಳಿಯನ್ನು ವಿರೋಧಿಸುವುದಕ್ಕೆ ಪ್ಲಾಸ್ಟಿಕ್ ಬಾವುಟಗಳ ನಿಷೇಧ ಭಾರತ ಜನನಿಯ ತನುಜಾತೆ ಕರ್ನಾಟಕದ ರಾಷ್ಟ್ರೀಯ ಸಂಕೇತವಾಗಲೂಬಹುದು. ಹತ್ತಿಯಿಂದ ಮಾಡಿದ ಬಾವುಟಗಳನ್ನು ದೇಶವಾಸಿಗಳು ಬಳಸಲು ಆರಂಭಿಸಿದರೆ ಉತ್ತರ ಕರ್ನಾಟಕದ ಗರಗದ ಧ್ವಜ ತಯಾರಕರು ಮತ್ತು ವಿದರ್ಭದ ಹತ್ತಿ ಬೆಳೆಗಾರರು ಸಂತೋಷಪಡಬಹುದು.
ನಾವು 365 ದಿನ ಪ್ಲಾಸ್ಟಿಕ್ ಬಳಸುತ್ತಿರುವಾಗ ಆಗಸ್ಟ್ 15ರ ಒಂದು ದಿನ ಮಾತ್ರಕ್ಕೆ ಪ್ಲಾಸ್ಟಿಕ್ ನಿರಾಕರಿಸಿ ಏನು ಪ್ರಯೋಜನ ಎಂದು ಮರುಪ್ರಶ್ನೆ ಹಾಕುವವರೂ ಇದ್ದಾರೆ. ಅದಕ್ಕೆ ನಮ್ಮ ಬಳಿ ಉತ್ತರವಿಲ್ಲ.












Click it and Unblock the Notifications