ಈಶ್ವರ್ V/S ಸಿಂಹ: ಪ್ರದೀಪ್ ವಿರುದ್ಧ ಪ್ರತಾಪ್ ಮಾನನಷ್ಟ ಕೇಸ್ ದಾಖಲು
ಬೆಂಗಳೂರು ಫೆಬ್ರವರಿ 27: ಏಕವಚನದಲ್ಲಿ ನಿಂದಿಸಿದ್ದಾರೆಂದು ಆರೋಪಿಸಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಮೈಸೂರು ಸಂಸದ ಪ್ರತಾಪ್ ಸಿಂಹ ಮಾನನಷ್ಟ ಕೇಸ್ ದಾಖಲಿಸಿದ್ದಾರೆ. ತಮ್ಮ ವಿರುದ್ಧ ಏಕವಚನದಲ್ಲಿ ಅವಹೇಳನಕಾರಿ ಪದ ಬಳಸಿದ್ದಾರೆ ಎಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನಲ್ಲಿ ಕ್ರಿಮಿನಲ್ ಮಾನನಷ್ಟ ಕೇಸ್ ದಾಖಲಿಸುವಂತೆ ಖಾಸಗಿ ದೂರು ಸಲ್ಲಿಸಿದ್ದಾರೆ.
ಕಳೆದ ತಿಂಗಳು ಚಿಕ್ಕಬಳ್ಳಾಪುರದ ಅಗಲಗುರ್ಕಿಯಲ್ಲಿ ನಡೆದ ಗ್ರಾಂ.ಪಂ. ಕಟ್ಟಡ ಶಂಕುಸ್ಥಾಪನಾ ಕಾರ್ಯಕ್ರಮದ ವೇಳೆ ಪ್ರದೀಪ್ ಈಶ್ವರ್ ಸಂಸದ ಪ್ರತಾಪ್ ಸಿಂಹ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು. ಪ್ರತಾಪ್ ಸಿಂಹ್ ಒಬ್ಬ ದೊಡ್ಡ ಅಯೋಗ್ಯ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಮಾಜಿ ಸಚಿವ ಡಾ ಕೆ ಸುಧಾಕರ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ, ತಾನು ಕಾಂಗ್ರೆಸ್‌ನಿಂದ ಕಣಕ್ಕಿಳಿಯಲು ಸಿದ್ಧ ಎಂದು ಪ್ರತಾಪ್ ಈಶ್ವರ್ ಗುಡುಗಿದ್ದರು. ಸದ್ಯ ಈಗ ತಮ್ಮ ವಿರುದ್ಧ ಏಕವಚನದಲ್ಲಿ ಮಾತನಾಡಿದ್ದಾರೆ ಎಂದು ಪ್ರತಾಪ್ ಸಿಂಹ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕರಾದ ಪ್ರದೀಪ್ ಈಶ್ವರ್ ನನ್ನ ವಿರುದ್ಧ ಮಾಧ್ಯಮಗಳಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನನ್ನನ್ನು ದೇಶದ್ರೋಹಿ ಎಂದು ಕರೆದಿದ್ದಾರೆ. ಮುಠಾಳ, ಅಯೋಗ್ಯ ಎಂಬಿತ್ಯಾದಿ ನಿಂದನಾತ್ಮಕ ಶಬ್ದಗಳಿಂದ ತೇಜೋವಧ ಮಾಡಲು ಪ್ರಯತ್ನಿಸಿದ್ದಾರೆ.
ಸಾರ್ವಜನಿಕ ಜೀವನದಲ್ಲಿ ಕನಿಷ್ಠ ಸೌಜನ್ಯವನ್ನು ಕೂಡ ತೋರದ ಚಾರಿತ್ರ್ಯ ವಧೆ ಮಾಡುವ ಮಾತುಗಳನ್ನು ಆಡಿದ್ದಾರೆ. ಮಾಧ್ಯಮದಲ್ಲಿ ಪ್ರಸಾರವಾದ ವಿಡಿಯೋ ಸಾಕ್ಷಿಯನ್ನೂ ಕೂಡ ಪೇನ್‌ಡ್ರೈವ್ ಮೂಲಕ ಸಲ್ಲಿಸಿದ್ದಾರೆ. ಹಾಗೂ ದಿನಪತ್ರಿಕೆಗಳಲ್ಲಿ ಬಂದಿರುವ ಹೇಳಿಕೆಗಳನ್ನೂ ಸಹ ಸಾಕ್ಷಿಯಂತೆ ನೀಡಿದ್ದಾರೆ. ಹಾಗೂ ನನ್ನನ್ನು ಏಕವಚನದಲ್ಲಿ ನಿಂದಿಸಿದ್ದಾರೆ ಎಂದು ಪ್ರತಾಪ್ ಸಿಂಹ ಅವರು ಖಾಸಗಿ ದೂರು ಸಲ್ಲಿಸಿದ್ದಾರೆ.
ಈ ಹಿಂದೆ ಈಶ್ವರ್ ವಿರುದ್ಧ ಸುಧಾಕರ್ ದೂರು
ಕಳೆದ ವರ್ಷ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಮಾಜಿ ಸಚಿವ ಸುಧಾಕರ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಿದ ಸುಧಾಕರ್ ಅವರು ಖಾಸಗಿ ದೂರು ಸಲ್ಲಿಸಿದ್ದರು.
ಸಾರ್ವಜನಿಕವಾಗಿ ಮಾನಹಾನಿ ಮಾಡುವ ರೀತಿಯಲ್ಲಿ ಮಾತನಾಡುವುದರ ಜೊತೆಗೆ, ಸೋಶಿಯಲ್ ಮೀಡಿಯಾದಲ್ಲಿ ಹಾಗೂ ಮಾಧ್ಯಮಗಳ ಸಂದರ್ಶನದಲ್ಲಿ ಮಾನಹಾನಿ ರೀತಿ ಮಾತನಾಡುತ್ತಿದ್ದಾರೆ. ಈ ಮೂಲಕ ಘನತೆಗೆ ತೇಜೋವಧೆ ಮಾಡುತ್ತಾ ಇದ್ದಾರೆ. ಹೀಗಾಗಿ ಪ್ರದೀಪ್ ಈಶ್ವರ್ ವಿರುದ್ಧ ಕ್ರಮ ಕೈಗೊಳ್ಳಿ ಎಂದಿದ್ದರು. ಅಲ್ಲದೆ ತನ್ನ ವಿರುದ್ಧ ಮಾತನಾಡದಂತೆ ನಿರ್ಬಂಧ ಹೇರಲು ಸುಧಾಕರ್ ಮನವಿ ಮಾಡಿದ್ದರು.












Click it and Unblock the Notifications