ಕರ್ನಾಟಕದಲ್ಲಿ ತುರ್ತು ಪರಿಸ್ಥಿತಿಯ 2ನೇ ಅಧ್ಯಾಯ ಆರಂಭ: ಕಾಂಗ್ರೆಸ್‌ಗೆ ವಿಜಯೇಂದ್ರ ಎಚ್ಚರಿಕೆ
ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ಖಂಡಿಸಿ ಬಿಜೆಪಿಯು ಇತ್ತೀಚೆಗೆ ಮಾಧ್ಯಮಗಳಿಗೆ ನೀಡಿದ್ದ ಜಾಹೀರಾತು ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಕಾಂಗ್ರೆಸ್ ಮುಂದಾಗಿದೆ. ಈ ಬಗ್ಗೆ ಖಂಡನೆ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಕರ್ನಾಟಕದಲ್ಲಿ ತುರ್ತು ಪರಿಸ್ಥಿತಿಯ 2ನೇ ಅಧ್ಯಾಯ ಆರಂಭವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಜನವಿರೋಧಿ ನಡೆಯನ್ನು ಪ್ರಶ್ನಿಸಿ ಒಂದು ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಮಾಧ್ಯಮಗಳ ಮೂಲಕ ಜಾಹಿರಾತು ಬಿಡುಗಡೆ ಮಾಡಿದರೆ, ಅದರಿಂದ ವಿಚಲಿತಗೊಂಡು ಮಾನನಷ್ಟ ಮೊಕದ್ದಮೆ ಹೂಡಲು ಹೊರಟಿದೆ ಎಂದು ಟೀಕಿಸಿದೆ.
ಕಾಂಗ್ರೆಸ್ ಪಕ್ಷದ್ದು ಪ್ರಜಾಪ್ರಭುತ್ವ ವ್ಯವಸ್ಥೆಯ ಕತ್ತು ಹಿಸುಕಲು ಭಾರತದದಲ್ಲಿ ತುರ್ತು ಪರಿಸ್ಥಿತಿ ಹೇರಿದ ಕರಾಳ ಇತಿಹಾಸ. ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗವಾಗಿರುವ ವಿರೋಧ ಪಕ್ಷವನ್ನು ದಮನ ಮಾಡಲು ವಿರೋಧಿ ರಾಜಕೀಯ ನೇತಾರರು, ಪ್ರಮುಖರನ್ನು ಜೈಲಿಗೆ ತಳ್ಳಿದ ಕುಖ್ಯಾತಿ ಕಾಂಗ್ರೆಸ್ ಪಕ್ಷದ್ದು. ತುರ್ತು ಪರಿಸ್ಥಿತಿ ಹೆಸರಿನಲ್ಲಿ ಮಾಧ್ಯಮ ಕಚೇರಿಗಳಿಗೆ ಬೀಗ ಜಡಿದು, ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕಿ, ಸಂವಿಧಾನದ ಆಶಯದ ಮೇಲೆ ಅಟ್ಟಹಾಸ ಮೆರೆದ ಇತಿಹಾಸ ಕಾಂಗ್ರೆಸ್ ಪಕ್ಷದ್ದು ಎಂದು ಹರಿಹಾಯ್ದಿದ್ದಾರೆ.

ಅಧಿಕಾರಕ್ಕೆ ಬಂದಾಗಲೆಲ್ಲ ಪಾಳೆಗಾರಿಕೆಯ ಗುಂಗಿನಲ್ಲಿ ವರ್ತಿಸುವ ಕಾಂಗ್ರೆಸ್‌ನವರು ಕರ್ನಾಟಕದಲ್ಲಿ ಕಳೆದ ಎರಡು ವರ್ಷಗಳಲ್ಲಿ ನಿರಂಕುಶ ಪ್ರಭುತ್ವ ಸಾಧಿಸಲು ಹವಣಿಸುತ್ತಿದ್ದಾರೆ. ಸರಣಿ ಭ್ರಷ್ಟಾಚಾರಗಳು, ಅಭಿವೃದ್ಧಿ ಶೂನ್ಯ ಆಡಳಿತ ಪ್ರಶ್ನಿಸಿ ಹೋರಾಡುತ್ತಿರುವ ವಿರೋಧ ಪಕ್ಷಗಳನ್ನು ಈವರೆಗೂ ಪೊಲೀಸ್ ವ್ಯವಸ್ಥೆ ದುರ್ಬಳಕೆ ಮಾಡಿಕೊಂಡು ಬೆದರಿಸುತ್ತಿದ್ದ ಕಾಂಗ್ರೆಸ್, ವಿಧಾನಸಭೆಯ ಅಧ್ಯಕ್ಷರನ್ನು ಬಳಸಿಕೊಂಡು, ವಿರೋಧ ಪಕ್ಷದ 18 ಸದಸ್ಯರನ್ನು ಸುದೀರ್ಘ ಅವಧಿಗೆ ಅಮಾನತು ಮಾಡಿ ಸಭಾಧ್ಯಕ್ಷ ಪೀಠವನ್ನು ತನ್ನ ಸರ್ವಾಧಿಕಾರತನ ಪ್ರದರ್ಶಿಸಲು ಬಳಸಿಕೊಂಡಿತ್ತು ಎಂದು ದೂರಿದ್ದಾರೆ.
ಇದೀಗ ತಮ್ಮ ಸಾಧನೆಯ ಹೆಸರಿನಲ್ಲಿ ರಾಜ್ಯದ ಜನರಿಗೆ ಸುಳ್ಳು ಹೇಳಲು ಹೊರಟು, ಬರಿದಾಗಿರುವ ಬೊಕ್ಕಸವನ್ನು ಮತ್ತಷ್ಟು ಬರಿದು ಮಾಡಲು ದುಂದುವೆಚ್ಚದಲ್ಲಿ ʼಸಾಧನ ಸಮಾವೇಶʼ ಮಾಡಲು ಹೊರಟಿತ್ತು. ಈ ಜನವಿರೋಧಿ ನಡೆಯನ್ನು ಪ್ರಶ್ನಿಸಿ ಒಂದು ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಬಿಜೆಪಿ ಮಾಧ್ಯಮಗಳ ಮೂಲಕ ಜಾಹಿರಾತು ಬಿಡುಗಡೆ ಮಾಡಿದರೆ, ಅದರಿಂದ ವಿಚಲಿತಗೊಂಡು ಮಾನನಷ್ಟ ಮೊಕದ್ದಮೆ ಹೂಡಲು ಹೊರಟಿದೆ ಎಂದು ಗುಡುಗಿದ್ದಾರೆ.
ಇದಕ್ಕೆ ಸರ್ಕಾರದ ವ್ಯವಸ್ಥೆ ಹಾಗೂ ಅಧಿಕಾರಿಗಳನ್ನು ನಿಯೋಜಿಸುವ ಮೂಲಕ ಇದೇ ಪ್ರಥಮ ಬಾರಿಗೆ ಕರ್ನಾಟಕದಲ್ಲಿ ವಿರೋಧ ಪಕ್ಷ ಹಾಗೂ ಮಾಧ್ಯಮದವರನ್ನು ಬೆದರಿಸುವ ಕರಾಳ ಅಧಿಸೂಚನೆ ಹೊರಡಿಸಿದೆ. ಕೇವಲ ಜಾಹಿರಾತಿಗೆ ಇಷ್ಟೊಂದು ಹೆದರಿರುವ ಕಾಂಗ್ರೆಸ್ ಸರ್ಕಾರದ ನಡೆ ಪಲಾಯನವಾದ ಹಾಗೂ ʼಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡಂತೆ ಎಂಬುದನ್ನು ಪ್ರತಿಬಿಂಬಿಸುತ್ತಿದೆ ಎಂದಿದ್ದಾರೆ.
ಕಾಂಗ್ರೆಸ್ ಸರ್ಕಾರದ ಯಾವುದೇ ಬೆದರಿಕೆಗೂ ಬಿಜೆಪಿ ಅಂಜುವ ಪ್ರಶ್ನೆಯೇ ಇಲ್ಲ. ಪೊಲೀಸ್ ಹಾಗೂ ಕಾನೂನಿನ ಹೆಸರಿನಲ್ಲಿ ವಿರೋಧ ಪಕ್ಷಗಳ ಬಾಯಿ ಮುಚ್ಚಿಸಬಹುದು ಎಂದು ನೀವು ಭಾವಿಸಿದ್ದರೆ, ಅದು ನಿಮ್ಮ ಮೂರ್ಖತನದ ಪರಮಾವಧಿಯಲ್ಲದೇ ಬೇರೆನೂ ಅಲ್ಲ. ನಿಮ್ಮ ಸರ್ವಾಧಿಕಾರಿ ಮನಃಸ್ಥಿತಿಗೆ ಭಟ್ಟಂಗಿಗಳ ಹಾಗೂ ಅವಿವೇಕಿಗಳ ಸಲಹೆಯನ್ನು ಆಧರಿಸಿ, ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿರುವುದು ಕೇವಲ ಬಿಜೆಪಿ ವಿರುದ್ಧವಷ್ಟೇ ಅಲ್ಲ, ಮಾಧ್ಯಮಗಳ ವಿರುದ್ಧವೂ ಸೇಡು ತೀರಿಸಿಕೊಳ್ಳಲು ಹೊರಟಿರುವುದು ಸ್ಪಷ್ಟವಾಗಿದೆ ಎಂದು ಆರೋಪಿಸಿದ್ದಾರೆ.
ಕರ್ನಾಟಕದಲ್ಲಿ ತುರ್ತು ಪರಿಸ್ಥಿತಿಯ 2ನೇ ಅಧ್ಯಾಯ ಆರಂಭವಾಗಿದೆ. ಅದನ್ನು ಹಿಮ್ಮೆಟ್ಟಿಸುವ ಶಕ್ತಿ ಪ್ರಜಾಪ್ರಭುತ್ವಕ್ಕಿದೆ ಹಾಗೂ ಕರ್ನಾಟಕದ ಜನರಿಗಿದೆ, ನಮ್ಮ ವಿರೋಧ ಪಕ್ಷಗಳಿಗಿದೆ ಹಾಗೂ ಮಾಧ್ಯಮಗಳಿಗಿದೆ ಎಂಬುದನ್ನು ಶೀಘ್ರದಲ್ಲಿ ಸರ್ಕಾರ ನೋಡಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ವಾಕ್ ಸ್ವಾತಂತ್ರ್ಯ ಕಸಿಯುವುದು ಸಂವಿಧಾನದಲ್ಲಿದೆಯೇ?
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಸರ್ಕಾರದ ಈ ಕ್ರಮವನ್ನು ಖಂಡಿಸಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಹಿಟ್ಲರ್ ಆಡಳಿತ ಜಾರಿಗೆ ಬಂದಿದೆಯಾ ಅನ್ನೊ ಪ್ರಶ್ನೆ ಬಿಟ್ಟುಬಿಡದೆ ಕಾಡುತ್ತಿದೆ. ಸಂವಿಧಾನದ ಕುರಿತು ಬಾಬಾ ಸಾಹೇಬರ ಬಗ್ಗೆ, ಅವರ ನೀತಿಗಳನ್ನು ಪಾಲಿಸುತ್ತೇವೆ ಅಂತಾ ಹೇಳುವ ಕಾಂಗ್ರೆಸ್ ಸರ್ಕಾರದ ನಡೆ ಹಿಟ್ಲರ್ ಆಡಳಿತಕ್ಕಿಂತಲೂ ಕಡೆಯಾಗಿದೆ. ವಾಕ್ ಸ್ವತಂತ್ರ ಕಿತ್ತುಕೊಳ್ಳುವುದು ಸಂವಿಧಾನದಲ್ಲಿ ಬರೆದಿದೆಯಾ ಸಿದ್ದರಾಮಯ್ಯನವರೇ? ಎಂದು ಪ್ರಶ್ನಿಸಿದ್ದಾರೆ.
ನಿಮ್ಮ ಸರ್ಕಾರದ ವೈಫಲ್ಯಗಳ ಬಗ್ಗೆ ಮಾತನಾಡಿದರೆ ನಿಮಗೆ ಯಾಕೆ ಸಂಕೋಚ ಡಿಕೆ ಶಿವಕುಮಾರ್ ಅವರೇ? ಎಂದಿದ್ದಾರೆ. ನಿಮ್ಮ ಸರ್ಕಾರದ ದುರಾಡಳಿತವನ್ನು, ಭ್ರಷ್ಟತೆಯನ್ನು, ಸುಭೀಕ್ಷವಾಗಿದ್ದ ರಾಜ್ಯದ ಆರ್ಥಿಕತೆಯನ್ನು ಹಾಳು ಮಾಡಿದ್ದನ್ನು, ಮಿತಿಮೀರಿದ ಓಲೈಕೆ ರಾಜಕಾರಣದ ಬಗ್ಗೆ ಮಾತನಾಡಿದರೆ ನಿಮಗೆ ಏಕೆ ಭಯ? ಎಂದು ಗುಡುಗಿದ್ದಾರೆ.
ಖಾಸಗಿ ನ್ಯೂಸ್ ಚಾನಲ್ ಮುಖ್ಯಸ್ಥರನ್ನು ಬಂಧಿಸಲು ಕರ್ನಾಟಕದ ಪೊಲೀಸರನ್ನು ಕಳುಹಿಸಿರುವುದು ಯಾವ ಸಂದೇಶ ನೀಡುವುದಕ್ಕಾಗಿ? ನಿಮ್ಮ ಸರ್ಕಾರದ ವೈಫಲ್ಯ ಮುಚ್ಚಿಡಲು, ನಿಮ್ಮ ಆತಂಕ, ದುಗುಡ ಈ ಆದೇಶದಲ್ಲಿ ಭಾಸವಾಗುತ್ತಿದೆ. ಸಿಎಂ ಕುರ್ಚಿ ಉಳಿಸಿಕೊಳ್ಳಲು ಈ ಮಾರ್ಗವನ್ನು ಹಿಡಿದಿರುವಂತೆ ಕಾಣುತ್ತಿದೆ ಸಿದ್ದರಾಮಯ್ಯನವರೇ, ನಿಮ್ಮ ಹತಾಶೆ ನಮಗೆ ಅರ್ಥವಾಗುತ್ತಿದೆ. ಆದರೆ ಈ ಹಿಟ್ಲರ್ ಆಡಳಿತದ ಪದ್ದತಿ, ಮೊಘಲರ ಆಡಳಿತದ ಪದ್ದತಿಯನ್ನು ಕರ್ನಾಟಕ ಎಂದಿಗೂ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಭ್ರಷ್ಟ ಹಾಗೂ ಭಂಡ ಕಾಂಗ್ರೆಸ್ ಸರ್ಕಾರದ ಎರಡು ವರ್ಷದ ಆಡಳಿತ ವೈಫಲ್ಯದ ಹಳವಂಡಗಳನ್ನು ಜನರ ಮುಂದೆ ಹಸಿಹಸಿಯಾಗಿ ಬಿಚ್ಚಿಡುವುದು ಅಪರಾಧವಂತೆ. ಕಾಂಗ್ರೆಸ್‌ನ ಅನಿಯಮಿತ ಬೆಲೆಯೇರಿಕೆ ನೀತಿಯ ಬಗ್ಗೆ ನೀಡಿದ ಜಾಹೀರಾತು ಹಾಗೂ ಬಿಡುಗಡೆಗೊಳಿಸಿದ ಚಾರ್ಜ್ ಶೀಟ್ ವಿರುದ್ಧ ಗಂಭೀರವಾದ ಪ್ರಕರಣ ದಾಖಲಿಸುತ್ತಾರೆ ಎಂದರೆ, ಇವರಿಗೆ ಅದಿನ್ನೆಷ್ಟು ಭಯವಿರಬೇಕು? ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ಸ್ವಯಂಘೋಷಿತ ಸಂವಿಧಾನ ರಕ್ಷಕ ಸಿದ್ದರಾಮಯ್ಯ ಅವರೇ, ಬಾಬಾ ಸಾಹೇಬರು ನಮಗೆ ಸಂವಿಧಾನದಲ್ಲಿ ಪ್ರಶ್ನಿಸುವ ಮೂಲಭೂತ ಹಕ್ಕನ್ನು ನೀಡಿದ್ದಾರೆ. ನಿಮ್ಮ ಗೊಡ್ಡು ಬೆದರಿಕೆಗಳಿಗೆ, ದಾಖಲಿಸುವ ಪ್ರಕರಣಗಳಿಗೆ ನಾವು ಅಂಜುವುದು ಇಲ್ಲ, ಅಳುಕುವುದು ಇಲ್ಲ, ನಿಮ್ಮ ಭ್ರಷ್ಟ ಹಾಗೂ ಬೆಲೆಯೇರಿಕೆಯ ಆಡಳಿತದ ವಿರುದ್ಧ ನಮ್ಮ ಹೋರಾಟ ನಿರಂತರ ಎಂದು ತಿರುಗೇಟು ನೀಡಿದೆ.












Click it and Unblock the Notifications