ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟಕ್ಕೇ ಮೊದಲ ಅವಕಾಶ?
ಬೆಂಗಳೂರು, ಮೇ 16 : ಯಾವ ಪಕ್ಷಕ್ಕೆ ಬಹುಮತ ಸಾಬೀತುಪಡಸಲು ಮೊದಲ ಅವಕಾಶ ನೀಡಬೇಕು ಎಂಬ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಧರ್ಮಸಂಕಟದಲ್ಲಿ ಸಿಲುಕಿದ್ದಾರೆ.
ವಜುಭಾಯಿ ವಾಲಾ ಅವರು ಬಿಜೆಪಿ ಪ್ರೇಮವನ್ನು ಮೆರೆದರೆ ಬಿಜೆಪಿಗೆ ಮೊದಲ ಆದ್ಯತೆ ನೀಡಬೇಕು, ಅವರು ರಾಜ್ಯಪಾಲರಂತೆ ವರ್ತಿಸಿದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟಕ್ಕೆ ಮೊದಲ ಅವಕಾಶವನ್ನು ನೀಡಲೇಬೇಕಾಗುತ್ತದೆ.
ಆದರೆ, ಈಗಾಗಲೆ ಯಡಿಯೂರಪ್ಪನವರು, ತಮಗೇ ಮೊದಲ ಅವಕಾಶ ನೀಡುತ್ತಾರೆ ಎಂದು ನಂಬಿದ್ದು, ಗುರುವಾರ ಮಧ್ಯಾಹ್ನ 12.20ಕ್ಕೆ ಸರಿಯಾಗಿ ಮುಹೂರ್ತ ನಿಗದಿ ಮಾಡಿದ್ದು, ಅದೇ ಸಮಯಕ್ಕೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಸಿದ್ಧತೆ ನಡೆಸಿದ್ದಾರೆ.
ಆದರೆ, ಯಡಿಯೂರಪ್ಪ ಬಳಿಯಿರುವುದು ಕೇವಲ 105 ಶಾಸಕರು ಮಾತ್ರ, ಓರ್ವ ಪಕ್ಷೇತರ ಶಾಸಕನನ್ನೂ ಹಿಡಿದುಕೊಂಡು. ಬಿಜೆಪಿಗೆ ಬೆಂಬಲ ಸೂಚಿಸಿದ್ದ ರಾಣೆಬೆನ್ನೂರು ಪಕ್ಷೇತರ ಶಾಸಕ ಕೆ ಶಂಕರ್ ಯುಟರ್ನ್ ಹೊಡೆದಿದ್ದು, ಬಿಜೆಪಿಗೆ ಕೈಕೊಟ್ಟು ಮತ್ತೆ ಕಾಂಗ್ರೆಸ್ಸಿಗೆ ಬೆಂಬಲ ಸೂಚಿಸಿದ್ದಾರೆ.
ಯಡಿಯೂರಪ್ಪನವರ ಈ ಪ್ಲಾನನ್ನು ಅರಿತಿರುವ ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ನಾಯಕರು, ನೀವು ಕಾನೂನಿಗೆ ಅನುಗುಣವಾಗಿ, ಸಂವಿಧಾನಕ್ಕೆ ಬದ್ಧರಾಗಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ರಾಜ್ಯಪಾಲರಿಗೆ ಒತ್ತಾಯ ಮಾಡಿದ್ದು, ತಮಗೆ ಬಹುಮತಕ್ಕೆ ಬೇಕಾಗಿರುವ ಸಂಖ್ಯೆಗಳಿದ್ದು, 117 ಶಾಸಕರ ಪಟ್ಟಿಯನ್ನು ರಾಜ್ಯಪಾಲರಿಗೆ ಬುಧವಾರ ಸಂಜೆ ನೀಡಿದ್ದಾರೆ.

ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟಕ್ಕೆ ಮೊದಲ ಅವಕಾಶ
ರಾಜ್ಯಪಾಲ ವಜುಭಾಯಿ ವಾಲಾ ಅವರು, ಬಿಜೆಪಿ ಹೈಕಮಾಂಡ್ ಅಣಿತಿಯಂತೆ ನಡೆದುಕೊಳ್ಳದೆ ಕಾನೂನಿಗೆ ಅನುಗುಣವಾಗಿ ನಿರ್ಣಯ ತೆಗೆದುಕೊಂಡರೆ, ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟಕ್ಕೆ ಬಹುಮತ ಸಾಬೀತುಪಡಿಸಲು ಮೊದಲ ಅವಕಾಶ ನೀಡಲೇಬೇಕಾಗುತ್ತದೆ. ಹೀಗಾದರೆ, ಯಡಿಯೂರಪ್ಪನವರನ್ನು ಹಿಂದಿಕ್ಕಿ ಎಚ್ ಡಿ ಕುಮಾರಸ್ವಾಮಿ ಅವರು ಎರಡನೇ ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಮೆರೆದಾಡಲಿದ್ದಾರೆ. ಇದು ಹೇಗೆ ಸಾಧ್ಯ ಎಂಬುದನ್ನು ಮುಂದೆ ಓದಿ.

ಬಿಜೆಪಿ ದೊಡ್ಡಪಕ್ಷವಾದರೂ ಬೇಕಾದ ಸಂಖ್ಯೆಗಳಿಲ್ಲ
ಕರ್ನಾಟಕದಲ್ಲಿ ಬಿಜೆಪಿ ಅತಿಹೆಚ್ಚು ಸ್ಥಾನ (104) ಗಳಿಸಿದ್ದರೂ, ಬಹುಮತಕ್ಕೆ ಬೇಕಾದ 112 ಶಾಸಕರ ಸಂಖ್ಯೆಯನ್ನು ಹೊಂದಿಲ್ಲ. ಆದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟ ಓರ್ವ ಪಕ್ಷೇತರನನ್ನೂ ಹಿಡಿದುಕೊಂಡು 117 (78+38+1) ಶಾಸಕರ ತಮ್ಮ ಬಳಿಯಿದ್ದಾರೆ ಎಂಬುದನ್ನು ಋಜುವಾತು ಪಡಿಸಿದ್ದಾರೆ. ಹೀಗಾಗಿ, ನ್ಯಾಯಬದ್ಧವಾಗಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟಕ್ಕೇ ರಾಜ್ಯಪಾಲರು ಬಹುಮತ ಸಾಬೀತುಪಡಿಸಲು ಕರೆಯಬೇಕಾಗುತ್ತದೆ.

ಗೋವಾ ಪ್ರಕರಣ : ಸುಪ್ರೀಂ ಕೋರ್ಟ್ ತೀರ್ಮಾನ
ಇದು ಏಕೆಂದರೆ, ಗೋವಾ ಸರಕಾರ ರಚಿಸುವಾಗ ಆಗಿದ್ದ ಕಗ್ಗಂಟಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನ ಅಂದಿನ ಮುಖ್ಯ ನ್ಯಾಯಮೂರ್ತಿ ಜೆಎಸ್ ಖೇಹರ್ ನೇತೃತ್ವದ ವಿಭಾಗೀಯ ಪೀಠ ನೀಡಿದ್ದ ತೀರ್ಪಿಗೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಬದ್ಧರಾಗಲೇಬೇಕಾಗುತ್ತದೆ. ಆಗ, ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿದ್ದರೂ (17) ಅದರ ಬಳಿ ಬಹುಮತಕ್ಕೆ ಸಂಖ್ಯೆಗಳಿರಲಿಲ್ಲ. ಆದರೆ, ಬಿಜೆಪಿ ಕೇವಲ 13 ಸ್ಥಾನ ಗಳಿಸಿದ್ದರೂ ಬಹುಮತಕ್ಕೆ ಬೇಕಾಗಿದ್ದ ಶಾಸಕರ ಸಂಖ್ಯೆಯನ್ನು ರಾಜ್ಯಪಾಲರಿಗೆ ನೀಡಿತ್ತು. ಎಂಜಿಪಿ 3 ಮತ್ತು ಪಕ್ಷೇತರ 3 ಶಾಸಕರೊಂದಿಗೆ ಬಹುಮತ ಸಾಬೀತುಪಡಿಸಿದ್ದರು ಮನೋಹರ್ ಪರಿಕ್ಕರ್.

ಚುನಾವಣಾಪೂರ್ವ ಮೈತ್ರಿ ಇರಲಿಲ್ಲ
ಇಲ್ಲಿ ಒಂದು ಕಾನೂನಿನ ತೊಡಕೂ ಇದೆ. ಅದೇನೆಂದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಚುನಾವಣೆಗೂ ಮೊದಲೇ ಮೈತ್ರಿಕೂಟವನ್ನು ರಚಿಸಿರಲಿಲ್ಲ. ಆದರೆ ಕಾನೂನಿನ ಪ್ರಕಾರ, ಅತಿದೊಡ್ಡ ಪಕ್ಷಕ್ಕೇ ಬಹುಮತ ಸಾಬೀತುಪಡಿಸಲು ಮೊದಲ ಅವಕಾಶ ನೀಡಬೇಕು. ಇದು ಸಾಧ್ಯವಾಗಬೇಕಾಗಿದ್ದರೆ ಯಡಿಯೂರಪ್ಪನವರು ತಮ್ಮ ಬಳಿ 112 (ಯಾವುದೇ ರೀತಿಯಿಂದಲಾದರೂ ಸರಿ) ಶಾಸಕರ ಬೆಂಬಲ ಇದೆ ಎಂದು ಸಾಬೀತುಪಡಿಸಬೇಕಾಗಿತ್ತು. ಅದನ್ನು ಅವರು ಮಾಡಿಲ್ಲ. ನೀವು ನನಗೆ ಅವಕಾಶ ನೀಡಿ, ನಾನು ಮೊದಲು ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸುತ್ತೇನೆ, ನಂತರ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುತ್ತೇನೆ ಎಂದು ಹೊರಟಿದ್ದಾರೆ. ಅದು ಸಾಧ್ಯವೆ? ಏನು ಬೇಕಾದರೂ ಆಗಬಹುದು!












Click it and Unblock the Notifications