ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಅನರ್ಹತೆ ಕೋರಿದ್ದ ಅರ್ಜಿ ವಜಾ
ಬೆಂಗಳೂರು, ಮಾರ್ಚ್ 27: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಿವಾಜಿನಗರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕರಾಗಿ ರಿಜ್ವಾನ್ ಅರ್ಷದ್ ಆಯ್ಕೆಯಾಗಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಚುನಾವಣಾ ತಕರಾರು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.
ಇದರಿಂದಾಗಿ ರಿಜ್ವಾನ್‌ಗೆ ದೊಡ್ಡ ರಿಲಿಫ್ ಸಿಕ್ಕಿದೆ. ಅವರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಈ ಸಂಬಂಧ ಸಂಪಂಗಿ ರಾಮನಗರದ ಬಿ. ಲಕ್ಷ್ಮೀದೇವಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ, ಮಾರ್ಚ್ 13ರಂದು ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ನೀಡಿತು.

ಅರ್ಜಿದಾರರು ಅಕ್ರಮವೆಸಗಿದ್ದಾರೆ ಎಂಬುದನ್ನು ಸಾಬೀತುಪಡಿಸುವ ಯಾವುದೇ ದಾಖಲೆ ಸಲ್ಲಿಸದ ಹಿನ್ನೆಲೆಯಲ್ಲಿ ಅರ್ಜಿ ವಜಾಗೊಳಿಸುತ್ತಿರುವುದಾಗಿ ನ್ಯಾಯಾಲಯ ಹೇಳಿದೆ.
ಅರ್ಜಿದಾರರ ವಾದವೇನು?: ಅರ್ಜಿದಾರರು, " ಕಾಂಗ್ರೆಸ್ ಪ್ರಕಟಿಸಿರುವ ಗ್ಯಾರಂಟಿ ಯೋಜನೆಗಳು ಕೊಡುಗೆ ಹಾಗೂ ಭರವಸೆ ಸ್ವರೂಪದ್ದಾಗಿವೆ. ಗ್ಯಾರಂಟಿ ಯೋಜನೆಗಳನ್ನು ಪಕ್ಷದ ಅಭ್ಯರ್ಥಿಗಳ ಸಮ್ಮತಿಯೊಂದಿಗೆ ಪ್ರಕಟಿಸಲಾಗಿದೆ. ಇವು ಶಿವಾಜಿನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತಹಾಕುವಂತೆ ಮತದಾರರನ್ನು ಪ್ರೇರೇಪಿಸಿವೆ. ಈ ಮೂಲಕ ರಿಜ್ವಾನ್ ಅರ್ಷದ್ ಚುನಾವಣೆಯಲ್ಲಿ ಅಕ್ರಮ ಎಸಗಿದ್ದಾರೆ. ಮತದಾರರಿಗೆ ಆಮಿಷವೊಡ್ಡುವುದು ಲಂಚ ಮತ್ತು ಭ್ರಷ್ಟಚಾರಕ್ಕೆ ಸಮ" ಎಂದು ಆಕ್ಷೇಪಿಸಿದ್ದರು.
ಅಲ್ಲದೆ, ಅರ್ಜಿದಾರರು, "ಪ್ರಜಾಪ್ರತಿನಿಧಿ ಕಾಯ್ದೆ-1951ರ ಕಲಂ 123(1), 123(2), 123(4), 1236(6) ಅಡಿ ರಿಜ್ವಾನ್ ಅರ್ಷದ್ ಚುನಾವಣಾ ಅಕ್ರಮಗಳನ್ನು ಎಸಗಿದ್ದು, ಕಲಂ 100(1)(ಬಿ), (1)(ಡಿ)(iv) ಅಡಿ ಆಯ್ಕೆಯಾಗಲು ಅರ್ಹರಲ್ಲ. ಹಾಗಾಗಿ, ಆರು ವರ್ಷಗಳ ಕಾಲ ಅವರು ಚುನಾವಣೆಗೆ ಸ್ಪರ್ಧಿಸದಂತೆ ನಿರ್ದೇಶಿಸಬೇಕು" ಎಂದು ಕೋರಿದ್ದರು.
"ಕಾಂಗ್ರೆಸ್ ವತಿಯಿಂದ ಗ್ಯಾರಂಟಿ ಕಾರ್ಡ್ ಯೋಜನೆಗಳ ಮೂಲಕ ಮತದಾರರಿಗೆ ಆಮಿಷ ಒಡ್ಡಿರುವುದು ಪ್ರಜಾಪ್ರತಿನಿಧಿ ಕಾಯ್ದೆಯ ಕಲಂ 123 (1)ರ ಪ್ರಕಾರ ಮತ್ತು ಕಲಂ 123 (2)ರ ಪ್ರಕಾರ ಮತದಾರರ ಮೇಲೆ ಪ್ರಭಾವ ಬೀರುವ ಯತ್ನವಾಗಿದೆ. ಕಲಂ 123 (4)ರ ಪ್ರಕಾರ ಆಮಿಷವೊಡ್ಡಿ ಪ್ರಚಾರ ಮಾಡುವುದೂ ಅಪರಾಧವಾಗಿದೆ. ಹೀಗಾಗಿ, ಶಿವಾಜಿನಗರ ವಿಧಾನಸಭಾ ಕ್ಷೇತ್ರದಿಂದ ರಿಜ್ವಾನ್ ಅರ್ಷದ್ ಶಾಸಕರಾಗಿ ಆಯ್ಕೆಯಾಗಿರುವುದನ್ನು ಅಸಿಂಧುಗೊಳಿಸಬೇಕು" ಎಂದು ಮನವಿ ಮಾಡಿದ್ದರು.












Click it and Unblock the Notifications