ತಾಯಿ ಸುಷ್ಮಾ ಸ್ವರಾಜ್ ಪ್ರಚಾರಕ್ಕೆ ಕರೆತರುವೆ!
ಬೆಂಗಳೂರು. ಮಾ. 17 : ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ನನಗೆ ತಾಯಿಯ ಸಮಾನ ಎಂದು ಮತ್ತೊಮ್ಮೆ ಹೇಳಿರುವ ಮಾಜಿ ಸಚಿವ ಬಿ.ಶ್ರೀರಾಮುಲು, ನನ್ನ ಪರ ಪ್ರಚಾರ ಮಾಡಲು ಸುಷ್ಮಾ ಸ್ವರಾಜ್ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಅವರ ಮನವೊಲಿಸುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ್ದಾರೆ. ತಾಂತ್ರಿಕ ಕಾರಣಗಳಿಂದಾಗಿ ಸದ್ಯಕ್ಕೆ ಬಿಜೆಪಿ ಜೊತೆ ವಿಲೀನ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಬಳ್ಳಾರಿಯಲ್ಲಿ ಮಾತನಾಡಿದ ಬಿ.ಶ್ರೀರಾಮುಲು, ಆರಂಭದಿಂದಲೂ ಸುಷ್ಮಾ ಸ್ವರಾಜ್ ಅವರನ್ನು ತಾಯಿಯ ಸ್ಥಾನದಲ್ಲಿಟ್ಟು ನಾನು ಗೌರವಿಸುತ್ತಾ ಬಂದಿದ್ದೇನೆ. ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ನಾನು ಚುನಾವಣೆಗೆ ಸ್ಪರ್ಧಿಸಿದರೆ, ನನ್ನ ಪರವಾಗಿ ಪ್ರಚಾರ ಮಾಡಲು ಬರುವಂತೆ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಮನವೊಲಿಸುತ್ತೇನೆ ಎಂದರು. [ಬಿಜೆಪಿ ಸೇರಿದ ರಾಮುಲು ಹೇಳಿದ್ದಿಷ್ಟು]
ಸದ್ಯದ ತಾಂತ್ರಿಕ ಮತ್ತು ಕಾನೂನು ತೊಡಕುಗಳಿಂದಾಗಿ ಬಿಜೆಪಿಯೊಡನೆ ಬಿಎಸ್‌ಆರ್ ಕಾಂಗ್ರೆಸ್ ಪಕ್ಷವನ್ನು ವಿಲೀನ ಮಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ನಾನು ಬಿಎಸ್‌ಆರ್ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನಗೊಳಿಸಲಾಗುವುದು ಎಂದು ಹೇಳಿದರು. [ಕರ್ನಾಟಕದ ಇತರ ಚುನಾವಣಾ ಸುದ್ದಿಗಳು]

ಪ್ರಚಾರಕ್ಕೆ ಸುಷ್ಮಾ ಸ್ವರಾಜ್ ಕರೆತರುತ್ತೇನೆ
ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರನ್ನು ನನ್ನ ಪರವಾಗಿ ಪ್ರಚಾರ ಮಾಡಲು ಕರೆ ತರುತ್ತೇನೆ ಎಂದು ಬಿ.ಶ್ರೀರಾಮುಲು ಹೇಳಿದ್ದಾರೆ. ಸುಷ್ಮಾ ಅವರು ನನಗೆ ತಾಯಿಯ ಸಮಾನ ನನ್ನ ಪರ ಪ್ರಚಾರ ಮಾಡಲು ಸುಷ್ಮಾ ಸ್ವರಾಜ್ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಅವರ ಮನವೊಲಿಸುವ ಪ್ರಯತ್ನ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ. ಪಕ್ಷ ಬಯಸಿದರೆ, ಬಳ್ಳಾರಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ 18 ಸೀಟು
ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ 28ರ ಪೈಕಿ 18 ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಚಾಮರಾಜನಗರದಲ್ಲಿ ಭಾನುವಾರ ಮಾತನಾಡಿದ ಅವರು, ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕೆಲವು ಕ್ಷೇತ್ರಗಳಲ್ಲಿ ಜೆಡಿಎಸ್ ನಮ್ಮ ಎದುರಾಳಿ, ಆಮ್ ಆದ್ಮಿ ಪಕ್ಷ ರಾಜ್ಯದ 28 ಕ್ಷೇತ್ರಗಳಲ್ಲಿ ಎಲ್ಲಿಯೂ ಕಾಂಗ್ರೆಸ್ ಪಕ್ಷಕ್ಕೆ ಎದುರಾಳಿಯಲ್ಲ ಎಂದು ಸಿಎಂ ಹೇಳಿದರು. ಆಮ್ ಆದ್ಮಿ ಪಕ್ಷವನ್ನು ಜನರು ರಾಜ್ಯದಲ್ಲಿ ಹೇಗೆ ಸ್ವೀಕರಿಸುತ್ತಾರೆ ಎಂದು ತಾವು ಕಾದು ನೋಡುತ್ತಿರುವುದಾಗಿ ಅವರು ತಿಳಿಸಿದರು.

ದೇವೇಗೌಡ ವಿರುದ್ಧ ರೇಖಾ ಅಭ್ಯರ್ಥಿ
ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪ್ರತಿನಿಧಿಸುವ ಹಾಸನ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಪಕ್ಷದ ರಾಜ್ಯ ಉಪಾಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಅವರನ್ನು ಕಣಕ್ಕಿಳಿಸುವ ಕುರಿತು ಚರ್ಚೆ ಆರಂಭವಾಗಿದೆ. ಹಾಸನ ಕ್ಷೇತ್ರದಲ್ಲಿ ಕುರುಬ ಜನಾಂಗದವರಿಗೆ ಟಿಕೆಟ್ ನೀಡಲು ಪಕ್ಷ ತೀರ್ಮಾನಿಸಲಾಗಿದೆ. ಆದ್ದರಿಂದ ಹಾಸನ ಜಿಲ್ಲಾಧ್ಯಕ್ಷ ನವಿಲೆ ಅಣ್ಣಪ್ಪ ಮತ್ತು ರೇಖಾ ಹುಲಿಯಪ್ಪಗೌಡ ಅವರನ್ನು ಕಣಕ್ಕಿಳಿಸಲಾಗುತ್ತದೆ ಎಂಬ ಚರ್ಚೆ ಆರಂಭವಾಗಿದೆ. ಹೊಸಬರಿಗೆ ಅವಕಾಶ ನೀಡಲು ರೇಖಾ ಅವರಿಗೆ ಟಿಕೆಟ್ ನೀಡಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಎರಡು ಕ್ಷೇತ್ರಗಳಲ್ಲಿ ಎನ್ ಸಿಪಿ ಸ್ಪರ್ಧೆ
ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಪಕ್ಷದ ಬೆಳಗಾವಿ ಜಿಲ್ಲಾಧ್ಯಕ್ಷ ಕೆ.ಜಿ. ಪಾಟೀಲ ಹೇಳಿದ್ದಾರೆ. ಬೆಳಗಾವಿಯಿಂದ ಎನ್‌ಸಿಪಿ ರಾಜ್ಯ ಉಪಾಧ್ಯಕ್ಷ ರಾಮಚಂದ್ರ ಮೋದಗೇಕರ, ಜಿಲ್ಲಾ ಕಿಸಾನ್ ಮೋರ್ಚಾ ಅಧ್ಯಕ್ಷ ಸುರೇಂದ್ರ ಪ್ರಧಾನಜೀ ತಲವಲಕರ, ಪ್ರತಾಪರಾವ್ ಪಾಟೀಲ, ಚಿಕ್ಕೋಡಿ ಕ್ಷೇತ್ರದಿಂದ ಮಹಾವೀರ ಮಹಾಜನ್ ಟಿಕೆಟ್ ಆಕಾಂಕ್ಷಿಗಳಾಗಿದ್ದು, ಪಕ್ಷದ ರಾಜ್ಯಾಧ್ಯಕ್ಷ ಮಹೇಂದ್ರಕುಮಾರ ಗೌಡ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.

ಬಿಜೆಪಿ ಹೊಸ ಮುಖವನ್ನು ಪ್ರೋತ್ಸಾಹಿಸುತ್ತದೆ
ಬಿಜೆಪಿ ಯಾವಾಗಲೂ ಯುವಕರು ಹಾಗೂ ಹೊಸಮುಖವನ್ನು ಪ್ರೋತ್ಸಾಹಿಸುತ್ತದೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಹೇಳಿದ್ದಾರೆ. ನಮೋ ಬ್ರಿಗೇಡ್ ಮೈಸೂರು ಘಟಕ ವತಿಯಿಂದ ಭಾನುವಾರ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿ ಎಲ್.ಕೆ. ಆಡ್ವಾಣಿ ಸೇರಿದಂತೆ ಅನೇಕ ಹಿರಿಯ ನಾಯಕರು ಇದ್ದಾರೆ. ಆದರೆ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡಲು ಎಲ್ಲಾ ನಾಯಕರು ಮುಂದಾಗಿದ್ದಾರೆ ಇದು ಪಕ್ಷದ ಪರಂಪರೆ ಎಂದು ಹೇಳಿದರು.












Click it and Unblock the Notifications